ರಾಜಕೀಯ ನಿವೃತ್ತಿ ಪ್ರಕಟಿಸಿದ ಹಿರಿಯ ಮುತ್ಸದ್ದಿ ರಾಜಕಾರಣಿ ಸಂಸದ ವಿ.ಶ್ರೀನಿವಾಸ್‍ಪ್ರಸಾದ್

ಮೈಸೂರು,ಅ.17(ಆರ್‍ಕೆಬಿ)- ಹಿರಿಯ ಮುತ್ಸದ್ದಿ ರಾಜಕಾರಣಿ, ಸಂಸದ ವಿ.ಶ್ರೀನಿವಾಸ ಪ್ರಸಾದ್ ಅವರು ರಾಜಕೀಯ ನಿವೃತ್ತಿ ಘೋಷಣೆ ಮಾಡಿದ್ದಾರೆ. ಮೈಸೂರಿನ ಕಲಾಮಂದಿರದಲ್ಲಿ ಸಮಾನತೆ-ಸ್ವಾಭಿಮಾನ- ಸ್ವಾವಲಂಬನೆ ಪ್ರತಿಷ್ಠಾನ ಮತ್ತು ಸಮಾನತೆ ಪ್ರಕಾಶನ ಜಂಟಿಯಾಗಿ ಸೋಮವಾರ ಆಯೋ ಜಿಸಿದ್ದ ಕರ್ನಾಟಕ ರಾಜ್ಯ ಕಾನೂನು ವಿವಿ ಕುಲಪತಿಗಳಾಗಿ ಅಧಿಕಾರ ವಹಿಸಿಕೊಂಡಿರುವ ಪ್ರೊ.ಸಿ. ಬಸವರಾಜು ಹಾಗೂ ಕರ್ನಾಟಕ ರಾಜ್ಯ ಮುಕ್ತ ವಿವಿಯಿಂದ ಪಿಹೆಚ್.ಡಿ ಪದವಿ ಪಡೆದಿರುವ ಡಾ.ಕಲ್ಯಾಣಸಿರಿ ಬಂತೇಜಿ ಅವರ ಅಭಿನಂದನಾ ಸಮಾರಂಭದ ಅಧ್ಯಕ್ಷತೆ ವಹಿಸಿ, ಮಾತನಾಡುವ ವೇಳೆ ಅವರು ತಮ್ಮ ರಾಜಕೀಯ ನಿವೃತ್ತಿ ಘೋಷಿಸಿದರು. ರಾಜಕೀಯ ಜೀವನದಲ್ಲಿ 50 ವರ್ಷ ಪೂರೈಸಿ ದ್ದೇನೆ. ಇನ್ನು ಒಂದೂವರೆ ವರ್ಷಕ್ಕೆ ಸಂಸತ್ ಸದಸ್ಯತ್ವದ ಅವಧಿ ಮುಗಿಯಲಿದೆ. ಅಲ್ಲಿಗೆ ನಾನು ನಿವೃತ್ತಿ ಆಗುತ್ತೇನೆ ಎಂದು ಪ್ರಕಟಿಸಿದರು. 1977ರಲ್ಲಿ ಜನತಾ ಪಕ್ಷದಿಂದ ಸ್ಪರ್ಧಿಸಿ ಗೆದ್ದ ನಂತರದಿಂದ ಇದುವರೆಗೆ 14 ಚುನಾವಣೆಯಲ್ಲಿ ಸ್ಪರ್ಧಿಸಿದ್ದೇನೆ. 11 ಚುನಾವಣೆಗಳಲ್ಲಿ ಗೆಲುವು ಸಾಧಿಸಿದ್ದೇನೆ. ಒಂದೂವರೆ ವರ್ಷ ಕಳೆದರೆ ನಾನು ರಾಜಕೀಯಕ್ಕೆ ಬಂದು 50 ವರ್ಷ ವಾಗಲಿದೆ. ಹಾಗಾಗಿ ರಾಜಕೀಯವಾಗಿ ನಿವೃತ್ತಿಯಾಗಲು ನಿರ್ಧರಿಸಿದ್ದೇನೆ ಎಂದು ಹೇಳಿದರು.

ಕಳೆದ ಲೋಕಸಭಾ ಚುನಾವಣೆಯಲ್ಲೇ ಸ್ಪರ್ಧಿಸುವ ಇಚ್ಛೆ ಇರಲಿಲ್ಲ. ಆದರೆ ಕ್ಷೇತ್ರದ ಮತದಾರರು ಕಡೆಯ ಚುನಾವಣೆಯಲ್ಲಿ ಗೆದ್ದು ಅವಧಿ ಮುಗಿದ ಬಳಿಕ ನಿವೃತ್ತಿಯಾಗಿ ಎಂದಿದ್ದರು. ಹಾಗಾಗಿ ಚುನಾವಣೆಗೆ ಸ್ಪರ್ಧಿಸಿದೆ. ಈಗ ನನ್ನ ಆರೋಗ್ಯ ಸರಿಯಿಲ್ಲ, ನನಗೀಗ ಹೆಚ್ಚು ಸಮಯ ನಿಲ್ಲಲಾಗುವುದಿಲ್ಲ. ಹಾಗಾಗಿ ನನ್ನ ಸಂಸತ್ ಸದಸ್ಯ ಸ್ಥಾನದ ಅವಧಿ ಮುಗಿದ ನಂತರ ರಾಜಕೀಯ ನಿವೃತ್ತಿಯ ಘೋಷಣೆ ಮಾಡಿದ್ದೇನೆ. ನನ್ನ ನಿವೃತ್ತಿ ಬಳಿಕ ನನ್ನ ಮಕ್ಕಳು ರಾಜಕಾರಣಕ್ಕೆ ಬರುವುದಿಲ್ಲ ಎಂದು ತಿಳಿಸಿದರು.