ಹಾಲಿ ಲೋಕಸಭಾ ಚುನಾವಣಾ ಪ್ರಕ್ರಿಯೆ ರದ್ದುಪಡಿಸಲು ವಾಟಾಳ್ ನಾಗರಾಜ್ ಆಗ್ರಹ

ಮೈಸೂರು: ಲೋಕಸಭಾ ಚುನಾವಣೆ ಜಾತಿ-ಹಣ ಬಲದಲ್ಲಿ ನಡೆಯುತ್ತಿದ್ದು, ಹೀಗಾಗಿ ಚುನಾವಣೆ ರದ್ದುಗೊಳಿಸಬೇಕು ಹಾಗೂ ಪಕ್ಷಾಂತರಿಗಳ ಹಾವಳಿಗೆ ಕಡಿವಾಣ ಹಾಕಲು ಆಗ್ರಹಿಸಿ ಕನ್ನಡ ಚಳವಳಿ ವಾಟಾಳ್ ಪಕ್ಷದ ಅಧ್ಯಕ್ಷ ವಾಟಾಳ್ ನಾಗರಾಜ್ ಭಾನುವಾರ ಏಕಾಂಗಿ ಪ್ರತಿಭಟನೆ ನಡೆಸಿದರು.

ಮೈಸೂರಿನ ರೈಲ್ವೆ ನಿಲ್ದಾಣದ ಎದುರು ಏಕಾಂಗಿ ಪ್ರತಿಭಟನೆ ನಡೆಸಿದ ಅವರು, ದೇಶದಲ್ಲಿ ನಡೆ ಯುತ್ತಿರುವ ಲೋಕಸಭಾ ಚುನಾವಣೆಯಲ್ಲಿ ಜಾತಿ-ಹಣದ ಪ್ರಭಾವ ಹೆಚ್ಚಾಗಿದ್ದು, ಹೀಗಾಗಿ ಈ ಚುನಾವಣೆ ರದ್ದುಗೊಳಿಸಿ ಮತ್ತೊಂದು ಚುನಾವಣೆ ಪ್ರಾಮಾಣಿಕವಾಗಿ ನಡೆಯುವ ವ್ಯವಸ್ಥೆ ಮಾಡಬೇಕು ಎಂದು ಒತ್ತಾಯಿಸಿದರು.

ರಾಜ್ಯದಲ್ಲಿ ಲೋಕಸಭಾ ಚುನಾವಣೆ ಈಗಾಗಲೇ ನಡೆದಿದ್ದು, ದೇಶದ ಹಲವೆಡೆ ಚುನಾವಣೆ ಇನ್ನು ನಡೆಯಬೇಕಿದೆ. ಈ ಚುನಾವಣೆ ಪ್ರಾಮಾಣಿಕವಾಗಿ ನಡೆಯದೇ ಜಾತಿ ಹಾಗೂ ಹಣ ಬಲದಿಂದ ನಡೆ ಯುತ್ತಿದೆ. ಅಭ್ಯರ್ಥಿಯೊಬ್ಬರು 70 ಲಕ್ಷ ರೂ. ಚುನಾವಣಾ ವೆಚ್ಚವಾಗಿ ಖರ್ಚು ಮಾಡಬಹುದೆಂಬ ಚುನಾವಣಾ ಆಯೋಗದ ನಿಯಮ ಸೂಕ್ತವಲ್ಲ. ಜೊತೆಗೆ ಉಮೇದುವಾರಿಕೆ ಠೇವಣಿಯಾಗಿ 25 ಸಾವಿರ ರೂ. ನಿಗದಿ ಮಾಡಿದ್ದು, ಇದೂ ಸರಿಯಿಲ್ಲ. ಈ ಹಿಂದೆ ಕೇವಲ 500 ರೂ. ಠೇವಣಿ ನಿಗದಿ ಮಾಡಲಾಗುತ್ತಿತ್ತು. ಆದರೆ ಇಂದಿನ ಪರಿಸ್ಥಿತಿ ಭಿನ್ನ ವಾಗಿದ್ದು, ಹೀಗಾದರೆ ಸಾಮಾನ್ಯ ಜನರು ಸ್ಪರ್ಧಿಸಲು ಸಾಧ್ಯವೇ? ಎಂದು ಪ್ರಶ್ನಿಸಿದರು.

ಒಬ್ಬ ಸಾಮಾನ್ಯ ಪ್ರಜೆಯೂ ಪ್ರಧಾನಿ, ರಾಷ್ಟ್ರಪತಿ ಆಗಲು ಸಂವಿಧಾನ ಅವಕಾಶ ಮಾಡಿಕೊಟ್ಟಿದೆ. ಆದರೆ ಇಂದಿನ ಪರಿಸ್ಥಿತಿಯಲ್ಲಿ ಅದು ಸಾಧ್ಯವಿಲ್ಲ. ಒಬ್ಬ ಅಭ್ಯರ್ಥಿ 70 ಲಕ್ಷ ರೂ. ಚುನಾವಣೆ ವೆಚ್ಚ ಮಾಡಬಹುದು ಎಂದರೆ ಅದು ಸಾಮಾನ್ಯ ವ್ಯಕ್ತಿಯಿಂದ ಸಾಧ್ಯವೇ? ಲೋಕ ಸಭಾ ಚುನಾವಣೆಯಲ್ಲಿ ಒಬ್ಬೊಬ್ಬರು 50 ಕೋಟಿ ರೂ. ಅಧಿಕ ಹಣ ವ್ಯಯಿಸಿದ್ದಾರೆ. ಕಾಂಗ್ರೆಸ್, ಬಿಜೆಪಿ ಹಾಗೂ ಜೆಡಿಎಸ್ ಅಭ್ಯರ್ಥಿಗಳು ಆಯೋಗಕ್ಕೆ ಸುಳ್ಳು ಲೆಕ್ಕ ತೋರಿಸಿದ್ದಾರೆ. ಇವರಲ್ಲಿ ಅನೇಕರು ದೇವಾಲಯ ಗಳಿಗೆ ಸುತ್ತುತ್ತಿದ್ದು, ಇವರು ಮೊದಲು ತಮ್ಮ ಆತ್ಮ ಶೋಧನೆ ಮಾಡಿಕೊಳ್ಳಲಿ ಎಂದು ಕಿಡಿಕಾರಿದರು.

4 ಸಾವಿರ ಕೋಟಿಗೂ ಅಧಿಕ ವೆಚ್ಚ: ಲೋಕಸಭಾ ಚುನಾವಣೆಗೆ ಸಂಬಂಧಿಸಿದಂತೆ ರಾಜ್ಯದಲ್ಲಿ 4 ಸಾವಿರ ಕೋಟಿ ರೂ.ಗೂ ಅಧಿಕ ಹಣ ವ್ಯಯಿಸ ಲಾಗಿದೆ. ಕಾಂಗ್ರೆಸ್, ಬಿಜೆಪಿ ಹಾಗೂ ಜೆಡಿಎಸ್ ಅಭ್ಯರ್ಥಿ ಗಳು ಸೇರಿದಂತೆ ಒಟ್ಟಾರೆ ಎಲ್ಲರೂ ಭಾರೀ ಪ್ರಮಾಣ ದಲ್ಲಿ ಹಣ ವೆಚ್ಚ ಮಾಡಿದ್ದಾರೆ. ಇಂತಹ ಚುನಾವಣೆ ಯಿಂದ ಮುಂದೊಂದು ದಿನ ಸಾಮಾನ್ಯ ಜನತೆ ಹತಾಶೆಗೆ ಒಳಗಾಗಿ ರೊಚ್ಚಿಗೆದ್ದು ದೇಶದಲ್ಲಿ ದಂಗೆ ಉಂಟಾ ದರೂ ಅಚ್ಚರಿಯಿಲ್ಲ ಎಂದು ಆತಂಕ ವ್ಯಕ್ತಪಡಿಸಿದರು.

15 ವರ್ಷಗಳಿಂದೀಚೆಗೆ ಶಾಸಕರನ್ನು ಖರೀದಿ ಮಾಡುವುದು, ಶಾಸಕರ ಕೈಯಲ್ಲಿ ರಾಜೀನಾಮೆ ಕೊಡಿಸುವುದು ಬಳಿಕ ಶಾಸಕರನ್ನು ಚುನಾವಣೆಗೆ ನಿಲ್ಲಿಸುವ ಕೆಟ್ಟ ಪ್ರವೃತ್ತಿ ಬೆಳೆದುಕೊಂಡು ಬರುತ್ತಿದೆ. ಪಕ್ಷಾಂತರಿಗಳು ಒಂದು ಪಕ್ಷದಡಿಯಲ್ಲಿ ಗೆದ್ದು ಬಂದ ಬಳಿಕ ಆ ಪಕ್ಷವನ್ನೇ ವಿರೋಧಿಸುವುದು ನಾಚಿಕೆಗೇಡು. ಪಕ್ಷಾಂತರ ಎಂಬುದು ವ್ಯಾಪಾರವಾಗಿದ್ದು, ಕೂಡಲೇ ಪಕ್ಷಾಂತರ ಕಾಯ್ದೆಗೆ ತಿದ್ದುಪಡಿ ತರಬೇಕು ಎಂದು ಒತ್ತಾಯಿಸಿದರು.

ಪಕ್ಷಾಂತರಿಗಳು ನಾಯಿಗಳಿಂತಲೂ ಕಡೆಯಾಗಿ ದ್ದಾರೆ. ಇವರು ತಾವು ಗೆದ್ದ ಪಕ್ಷದಲ್ಲಿ ಐದು ವರ್ಷಗಳು ಇರಲೇಬೇಕು. ಇದನ್ನು ಪಾಲಿಸದೇ ಇದ್ದಲ್ಲಿ ಅಂತ ಹವರಿಗೆ 10 ವರ್ಷಗಳು ಚುನಾವಣೆಗೆ ಸ್ಪರ್ಧೆ ಮಾಡಲು ಅವಕಾಶ ಇಲ್ಲದಂತೆ ಮಾಡಬೇಕು. ಜೊತೆಗೆ ಕನಿಷ್ಠ ಎರಡು ವರ್ಷ ಜೈಲು ಶಿಕ್ಷೆ ವಿಧಿಸಬೇಕು. ಈ ರೀತಿಯ ಕಾನೂನು ರೂಪುಗೊಳ್ಳಬೇಕು ಎಂದು ಆಗ್ರಹಿಸಿದರು.