ಬಂಡೀಪುರದ ಹುಲಿ ಸಂರಕ್ಷಿತ ವಲಯದ (ಎನ್‍ಹೆಚ್ 766) ಮಾರ್ಗ ದಲ್ಲಿ ಅವಕಾಶ ಇಲ್ಲದಿರುವುದರಿಂದ ವಲ್ಲುವಾಡಿ-ಚಿಕ್ಕಬರಗಿ `ಪರ್ಯಾಯ’ ಮಾರ್ಗ 

ಮೈಸೂರು,ಫೆ.6(ಪಿಎಂ)- ಕರ್ನಾಟಕ-ಕೇರಳ ಮಧ್ಯೆ ರಾತ್ರಿ ವೇಳೆ ವಾಹನ ಸಂಚಾರಕ್ಕೆ ಬಂಡೀಪುರದ ಹುಲಿ ಸಂರಕ್ಷಿತ ವಲಯದ (ಎನ್‍ಹೆಚ್ 766) ಮಾರ್ಗ ದಲ್ಲಿ ಅವಕಾಶ ಇಲ್ಲದಿರುವುದರಿಂದ ವಲ್ಲುವಾಡಿ-ಚಿಕ್ಕಬರಗಿ ಮಾರ್ಗವನ್ನು ಪರ್ಯಾಯ ರಸ್ತೆಯಾಗಿ ಪರಿಗಣಿಸ ಬಹುದಾಗಿದೆ ಎಂದು ಕೇಂದ್ರ, ರಾಜ್ಯ ಸರ್ಕಾರಕ್ಕೆ ಮನವಿ ಸಲ್ಲಿಸಲು ಎಫ್‍ಕೆಸಿಸಿಐ ಮಾಜಿ ಅಧ್ಯಕ್ಷ ಸುಧಾಕರ್ ಎಸ್.ಶೆಟ್ಟಿ ನೇತೃ ತ್ವದ ಸಭೆ ನಿರ್ಧರಿಸಿದೆ. ವೈನಾಡ್ ಚೇಂಬರ್ಸ್ ಆಫ್ ಕಾಮರ್ಸ್‍ನ ಮಾಜಿ ಅಧ್ಯಕ್ಷ ಜಾನಿ ಪಠಾನಿ ಮತ್ತು ಅವರ ತಂಡ, ಸುಧಾಕರ್ ಶೆಟ್ಟಿ ಅವರನ್ನು ಮೈಸೂರಿನ ದೇವರಾಜ ಅರಸು ರಸ್ತೆಯ ಅವರ ಕಚೇರಿಯಲ್ಲಿ ಬುಧವಾರ ಭೇಟಿ ಮಾಡಿ ಸಭೆ ನಡೆಸಿತು.

ಪ್ರಸ್ತುತ ಪರ್ಯಾಯ ಎಂದು ಪ್ರಸ್ತಾಪಿಸಿರುವ ಕುಟ್ಟ-ಗೋಣಿಕೊಪ್ಪ ಮಾರ್ಗವೂ ಹೆಚ್ಚು ಅರಣ್ಯದಲ್ಲೇ ಹಾದು ಹೋಗಲಿದೆ. ಹಾಗಾಗಿ, ರಾಷ್ಟ್ರೀಯ ಹೆದ್ದಾರಿ 766 ಬದಲಾಗಿ ಸುಲ್ತಾನ್ ಬತೇರಿಯಿಂದ ಬೇಗೂರು ಸಂಪರ್ಕಿಸುವ ವಲ್ಲುವಾಡಿ-ಚಿಕ್ಕಬರಗಿ ನಡುವಿನ ರಸ್ತೆ ಮಾರ್ಗ ಸೂಕ್ತವಾಗಿದೆ ಎಂಬ ಅಭಿಪ್ರಾಯ ಸಭೆಯಲ್ಲಿ ವ್ಯಕ್ತವಾಯಿತು.

ರಾಜೀವ್‍ಗಾಂಧಿ ರಾಷ್ಟ್ರೀಯ ಉದ್ಯಾನವನ ಹಾಗೂ ವೈನಾಡು ಅರಣ್ಯ ಪ್ರದೇಶ ವನ್ನು ಪ್ರಸ್ತಾವಿತ ಪರ್ಯಾಯ ಮಾರ್ಗ ಒಳಗೊಂಡಿದೆ. ಈ ಮಾರ್ಗ 25.5 ಕಿ.ಮೀ. ಅರಣ್ಯದ ಕೋರ್ ಪ್ರದೇಶದಲ್ಲಿಯೇ ಹಾದು ಹೋಗಲಿದೆ. ಅಲ್ಲದೆ, ಗುಂಡ್ಲುಪೇಟೆ ಹಾಗೂ ಮೈಸೂರು ಮಂಡಕಳ್ಳಿ ವಿಮಾನ ನಿಲ್ದಾಣಕ್ಕೂ ಈ ಮಾರ್ಗ ಸಂಪರ್ಕ ಕಲ್ಪಿಸುವು ದಿಲ್ಲ. ಇದರಿಂದ ಮೈಸೂರಿನ ಪ್ರವಾಸೋದ್ಯಮಕ್ಕೂ ಪ್ರಯೋಜನವಿಲ್ಲ. ಸುಲ್ತಾನ್ ಬತೇರಿ -ವಲ್ಲುವಾಡಿ-ಚಿಕ್ಕಬರಗಿ-ಬೇಗೂರು ಮಾರ್ಗ ಕೇವಲ 6 ಕಿ.ಮೀ. ದೂರ ಅರಣ್ಯ ಪ್ರದೇಶದ ಹೊರವಲಯವನ್ನು ಹಾದು ಹೋಗಲಿದೆ. ಹೀಗಾಗಿ ಸರ್ಕಾರ ಈ ಪರ್ಯಾಯ ಮಾರ್ಗವನ್ನೇ ಆಯ್ದುಕೊಳ್ಳಬೇಕು ಎಂದು ಎಂದು ಸುಧಾಕರ್ ಶೆಟ್ಟಿ ಒತ್ತಾಯಿಸಿದರು.