ಇಂದಿನಿಂದ ವರಕೋಡಿನ ಪುರಾತನ ವರದರಾಜಸ್ವಾಮಿ ದೇವಾಲಯದ ವಿಗ್ರಹ ಪುನರ್ ಪ್ರತಿಷ್ಠಾಪನಾ ಕಾರ್ಯಕ್ರಮ

ಮೈಸೂರು: ಹೊಯ್ಸಳರ ಕಾಲ ದಲ್ಲಿ ನಿರ್ಮಾಣವಾಗಿರುವ ಪುರಾತನ ದೇವಾಲಯ ಗಳಲ್ಲಿ ಒಂದಾದ ವರಕೋಡಿನ ವರದರಾಜಸ್ವಾಮಿ ದೇವಾಲಯ ಹಾಗೂ ಕಲ್ಯಾಣಿ ಪುನರುತ್ಥಾನ ಕಾರ್ಯ ಪೂರ್ಣಗೊಂಡಿದ್ದು, ನಾಳೆ(ಮಾ.22)ಯಿಂದ ಮಾ.27ರವರೆಗೆ ದೇವಾಲಯದ ವಿಗ್ರಹ ಪುನರ್ ಪ್ರತಿಷ್ಠಾಪನೆ ಹಾಗೂ ಕಲ್ಯಾ ಣಿಯ ಸಂಪ್ರೋಕ್ಷಣಾ ಮಹೋತ್ಸವ ವಿಜೃಂಭಣೆಯಿಂದ ನೆರವೇರಲಿದೆ.

ಮೈಸೂರು ತಾಲೂಕು ವರುಣಾ ಹೋಬಳಿ ವರಕೋಡು ಗ್ರಾಮದಲ್ಲಿ ಸಾವಿರಾರು ವರ್ಷಗಳ ಹಿಂದೆ ಹೊಯ್ಸಳರ ಕಾಲದಲ್ಲಿ ಸುಂದರ, ಭವ್ಯವಾದ ವರದರಾಜ ಸ್ವಾಮಿ ದೇವಾಲಯವನ್ನು ನಿರ್ಮಿಸಲಾಗಿದ್ದು, ಅದೇ ಸಂದರ್ಭದಲ್ಲಿ ದೊಡ್ಡ ಕಲ್ಯಾಣಿಯನ್ನು ನಿರ್ಮಿಸಲಾಗಿದೆ.

ಪಾಳೆಗಾರರ ಆಳ್ವಿಕೆಯ ಸಂದರ್ಭದಲ್ಲಿ ಈ ದೇವಾಲಯ ವನ್ನು ನಿರ್ಮಿಸಿರುವುದಾಗಿ ಇತಿಹಾಸದ ಪುಟದಲ್ಲಿ ಉಲ್ಲೇಖವಾಗಿದೆ. ನಿರ್ವಹಣೆ ಕೊರತೆಯಿಂದ ಪಾಳು ಬಿದ್ದಿದ್ದ ಈ ದೇವಾಲಯ ಹಾಗೂ ಕಲ್ಯಾಣಿಯನ್ನು ಕಳೆದ 2 ವರ್ಷ ಗಳಿಂದ ಪುರಾತತ್ವ ಇಲಾಖೆ ದುರಸ್ತಿ ಮಾಡುವ ಕಾರ್ಯ ಕೈಗೆತ್ತಿಕೊಂಡಿತ್ತು. ಪುನರುಜ್ಜೀವನ ಕಾಮಗಾರಿ ಆರು ತಿಂಗಳ ಹಿಂದೆಯೇ ಪೂರ್ಣಗೊಂಡಿದ್ದು, ಸುಂದರ ವಾಗಿ ಕಂಗೊಳಿಸುತ್ತಿರುವ ದೇವಾಲಯದ ವಿಗ್ರಹ ಪುನರ್ ಪ್ರತಿಷ್ಠಾಪನೆ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ.

ಪೂಜಾ ಕೈಂಕರ್ಯಗಳು: ಶ್ರೀ ವರದರಾಜ ಸ್ವಾಮಿ ದೇವಾ ಲಯದ ಪುನರ್ ಪ್ರತಿಷ್ಠಾನದ ಹಿನ್ನೆಲೆಯಲ್ಲಿ ಪುರೋಹಿತ ರಾದ ಗಣೇಶ್ ದೀಕ್ಷಿತ್ ನೇತೃತ್ವದಲ್ಲಿ ನಾಳೆ (ಮಾ.22) ಬೆಳಿಗ್ಗೆ 6.40ರಿಂದ 8.40ರವರೆಗೆ ಸಲ್ಲುವ ಮೀನ ಲಗ್ನದಲ್ಲಿ ಪುಣ್ಯಾಹಃ, ಗಣಪತಿ ಪೂಜೆ, ಮೂಲ ದೇವತಾ ಪ್ರಾರ್ಥನೆ, ನವಗ್ರಹ ಪೂಜೆ ಸೇರಿದಂತೆ ಇನ್ನಿ ತರ ಪೂಜಾ ಕಾರ್ಯ ಜರುಗಲಿವೆ. ಮಾ.23ರಂದು ಬೆಳಿಗ್ಗೆ 8.30ಕ್ಕೆ ಕಲ್ಯಾಣಿ ಪೂಜೆ, ಗಂಗೆಪೂಜೆ, ಬಾಗಿನ ಸಮರ್ಪಣೆ ನೆರವೇರಲಿದೆ. ಮಾ.25 ರಂದು ಬೆಳಿಗ್ಗೆ 9 ಗಂಟೆಗೆ ಲಕ್ಷ್ಮೀನಾರಾಯಣ ಪಾರಾಯಣ, ಭೂವರಾಹ ಸ್ವಾಮಿ ಪೂಜೆ ಸೇರಿದಂತೆ ಇನ್ನಿತರ ಪೂಜಾ ಕೈಂಕರ್ಯ ಜರುಗಲಿದೆ. ಮಾ.26ರಂದು ಬೆಳಿಗ್ಗೆ 5.30 ರಿಂದ 101 ಪುರ್ಣ ಕುಂಭ ಕಳಸ ಹೊತ್ತು ದೇವಾಲಯಕ್ಕೆ ಮೆರವಣಿಗೆ ಮೂಲಕ ಸುಮಂಗಲಿಯರು ಆಗಮಿಸಲಿದ್ದಾರೆ. 11.30ಕ್ಕೆ ಲಲಿತ ಸಹಸ್ರನಾಮ ಪೂಜೆ, ದುರ್ಗಾದೀಪ ನಮಸ್ಕಾರ ಪೂಜೆ, ಸಂಜೆ ವಿವಿಧ ಹೋಮ ಜರುಗಲಿವೆ. ಮಾ.27 ರಂದು ಬೆಳಿಗ್ಗೆ 5.30ರಿಂದ 6.15ರವರೆಗೆ ಮೀನ ಲಗ್ನದಲ್ಲಿ ಶ್ರೀ ವರದರಾಜ ಸ್ವಾಮಿ ವಿಗ್ರಹ ಪ್ರತಿಷ್ಠಾಪನೆ ನೆರವೇರುತ್ತದೆ. ಬಳಿಕ ಕಳಸ ಪ್ರತಿಷ್ಠಾಪನೆ, ಗರುಡ ಪೂಜೆ, ನೇತ್ರಬಿಂಬ ಪೂಜೆ, ಕಲಾ ಹೋಮ, ನವಗ್ರಹ, ಮೃತ್ಯುಂಜಯ ಹೋಮ ನಡೆಯುತ್ತವೆ. ಬೆಳಿಗ್ಗೆ 9.30ರಿಂದ 10.30ರ ವೃಷಭ ಲಗ್ನದಲ್ಲಿ `ಬ್ರಹ್ಮಶಿಲಾ ಅಂಕ ಪ್ರತಿಷ್ಠಾಪನೆ’ ನೆರವೇರಲಿದೆ.