ಸಣ್ಣ ಕೈಗಾರಿಕೆಗಳ ನಿರೀಕ್ಷೆ ಹುಸಿಗೊಳಿಸಿದೆ ವಿತ್ತ ಸಚಿವರು ರಾಜ್ಯದ ಪ್ರತಿನಿಧಿಯಾದರೂ ರಾಜ್ಯಕ್ಕಿಲ್ಲ ವಿಶೇಷ ಯೋಜನೆ: ಮಾಜಿ ಶಾಸಕ ವಾಸು ಟೀಕೆ

ಮೈಸೂರು, ಫೆ.1(ಪಿಎಂ)- ಕೇಂದ್ರ ಬಜೆಟ್ ಸಣ್ಣ ಕೈಗಾರಿಕೆಗಳು ಹೊಂದಿದ್ದ ನಿರೀಕ್ಷೆ ಗಳನ್ನು ಹುಸಿಯಾಗಿಸಿದೆ ಎಂದು ಮಾಜಿ ಶಾಸಕರೂ ಆದ ಮೈಸೂರು ಕೈಗಾರಿಕೆಗಳ ಸಂಘದ ಅಧ್ಯಕ್ಷ ವಾಸು ಪ್ರತಿಕ್ರಿಯಿಸಿದ್ದಾರೆ.

ಸಣ್ಣ ಕೈಗಾರಿಕೆಗಳು ಅತ್ಯಂತ ಸಂಕಷ್ಟದಲ್ಲಿದ್ದು, ಹಿನ್ನಡೆ ಅನು ಭವಿಸುತ್ತಿರುವ ಈ ಸಂದರ್ಭದಲ್ಲಿ ರಿಯಾಯಿತಿ ಬಡ್ಡಿ ದರದಲ್ಲಿ ಸಾಲ ನೀಡುವ ಯೋಜನೆ ಪ್ರಕಟಿಸದಿರುವುದು, ಬಂಡವಾಳ ಹೂಡಿ ಕೆಗೆ ಹೆಚ್ಚುವರಿ ಸಹಾಯಧನ ನೀಡದಿರುವುದು, ವಿಳಂಬ ಪಾವತಿ ಕಾಯ್ದೆ ಬಲಿಷ್ಠಗೊಳಿಸುವ ಯೋಜನೆ ಪ್ರಕಟಿಸದಿರುವುದು ನಿರಾಸೆ ತಂದಿದೆ ಎಂದಿದ್ದಾರೆ. ಆದಾಯ ತೆರಿಗೆ ಪಾವತಿ ಮಿತಿ ಹೆಚ್ಚಿಸಿ ದೊಡ್ಡ ಕೊಡುಗೆ ನೀಡ ಲಾಗಿದೆ ಎನ್ನುವ ವಿತ್ತ ಸಚಿವರು, ಈ ಹಿಂದೆ ಇದ್ದ ಎಲ್ಲಾ ಆದಾಯ ತೆರಿಗೆ ವಿನಾಯಿತಿ ಗಳನ್ನು ಈ ಪ್ರಕಟಣೆಗೆ ಅನ್ವಯಗೊಳಿಸಿಲ್ಲ. ಜತೆಗೆ ಹಿಂದಿನ ಹಾಗೂ ಇಂದಿನ 2 ಯೋಜನೆಗಳಲ್ಲಿ ಒಂದನ್ನು ಆಯ್ಕೆ ಮಾಡಿಕೊಳ್ಳುವ ಅವಕಾಶವನ್ನು ತೆರಿಗೆದಾರರಿಗೆ ನೀಡಿರುವುದು ಹೆಚ್ಚು ಅನುಕೂಲಕರವಾಗಿಲ್ಲ ಎಂದು ವಾಸು ಪ್ರತಿಪಾದಿಸಿದ್ದಾರೆ.

ಉಕ್ಕು ಮತ್ತು ಪೇಪರ್ ಮೇಲಿನ ತೆರಿಗೆ ಏರಿಕೆ ಮಾಡಿರುವುದು ತಯಾರಿಕಾ ವಲ ಯದ ಮೇಲೆ ಪರಿಣಾಮ ಉಂಟು ಮಾಡಲಿದೆ. ಸಣ್ಣ ಕೈಗಾರಿಕೆಗಳಿಗೆ 59 ನಿಮಿಷದಲ್ಲಿ 1 ಕೋಟಿ ರೂ.ವರೆಗೆ ಸಾಲ ಕೊಡುವ ಯೋಜನೆಯಲ್ಲಿ ಈವರೆಗೆ 1,59,422 ಘಟಕಗಳಿಗೆ ಒಟ್ಟು 49,330 ಕೋಟಿ ರೂ. ಬಿಡುಗಡೆ ಮಾಡಲಾಗಿದೆ ಎಂದು ಬಜೆಟ್‍ನಲ್ಲಿ ಹೇಳ ಲಾಗಿದೆ. ಆದರೆ ವಾಸ್ತವಿಕ ಸಂಗತಿ ಆನ್‍ಲೈನಲ್ಲಿ ಅರ್ಜಿ ಸಲ್ಲಿಸಿದ ಸಣ್ಣ ಉದ್ದಿಮೆದಾರ ರಿಗಷ್ಟೇ ಗೊತ್ತು. ವಿತ್ತ ಸಚಿವರು ರಾಜ್ಯದ ಪ್ರತಿನಿಧಿಯಾಗಿದ್ದರೂ ರಾಜ್ಯಕ್ಕಾಗಿ ವಿಶೇಷ ಯೋಜನೆ ನೀಡಿಲ್ಲ ಎಂದು ವಾಸು ಟೀಕಿಸಿದ್ದಾರೆ. ಸಣ್ಣ ಉದ್ಯಮಗಳ ಆಡಿಟ್ ಮಿತಿಯನ್ನು 5 ಕೋಟಿ ರೂ.ಗೆ ಏರಿಸಿರುವುದು, ಸೋಲಾರ್ ವಿದ್ಯುತ್ ಉತ್ಪಾದನೆಗೆ ಒತ್ತು ನೀಡಿರುವುದು, ಜಿಲ್ಲಾ ಕೇಂದ್ರಗಳಲ್ಲಿ ರಫ್ತು ಉತ್ತೇಜನಾ ಕೇಂದ್ರಗಳನ್ನು ಪ್ರಾರಂಭಿಸುವ ಘೋಷಣೆ ಮಾಡಿರುವುದು ಸ್ವಾಗತಾರ್ಹ ಅಂಶಗಳು ಎಂದಿದ್ದಾರೆ.