ಮೈಸೂರಲ್ಲಿ ವೀರ ಸಾರ್ವಕರ್ ಜಯಂತಿ ಆಚರಣೆ

ಮೈಸೂರು: ಅಪ್ರತಿಮ ದೇಶಭಕ್ತ, ಸ್ವಾತಂತ್ರ್ಯ ವೀರ ಸಾವರ್ಕರ್ ರವರ 135ನೇ ಜಯಂತಿಯನ್ನು ವೀರ ಸಾವರ್ಕರ್ ಯುವ ಬಳಗದ ವತಿಯಿಂದ ನಗರದ ಡಿ.ಬನುಮಯ್ಯ ಚೌಕದಲ್ಲಿ ಇಂದು ಹಮ್ಮಿಕೊಳ್ಳಲಾಗಿತ್ತು.

ವೀರ ಸಾವರ್ಕರ್ ಯುವ ಬಳಗದ ಅಧ್ಯಕ್ಷ ರಾಕೇಶ್ ಭಟ್ ಅವರು, ಸಾವರ್ಕರ್ ಅವರ ಬದುಕು ಹಾಗೂ ಹೋರಾಟಗಳ ಬಗ್ಗೆ ಮಾತನಾಡಿದರು.

ಬ್ರಿಟೀಷರ ನೆಲವನ್ನೇ ಹೊಕ್ಕಿ ಅವರ ವಿರುದ್ಧ ಹೋರಾಡಲು ‘ಅಭಿನವ ಭಾರತ’ ಎಂಬ ಸಂಘಟನೆಯನ್ನು ಹುಟ್ಟುಹಾಕಿ, ಮದನ್‍ಲಾಲ್ ಧಿಂಗ್ರರಂತಹ ಅನೇಕ ಹೋರಾಟಗಾರರೂ ಸೇರಿದಂತೆ ಕ್ರಾಂತಿಕಾರಿ ಬರವಣ ಗೆ ಮೂಲಕ ಲಕ್ಷಾಂತರ ಯುವಕರನ್ನು ಪ್ರೇರೇಪಿಸಿದ್ದವರು ವಿನಾಯಕ ದಾಮೋದರ ಸಾವರ್ಕರ್.

ಭಾರತದ ಸ್ವಾತಂತ್ರ್ಯಕ್ಕಾಗಿ ಕ್ರಾಂತಿಕಾರಿ ಹೋರಾಟ ನಡೆಸುತ್ತಿರುವಾಗ ಬ್ರಿಟೀಷರಿಂದ ಬಂಧಿತರಾಗಿ, ಭಾರತದ ಅಂಡಮಾನ್‍ನಲ್ಲಿನ ಜೈಲಿನಲ್ಲಿ ಭೀಕರವಾದ ಕರಿನೆರಳಿನ ಶಿಕ್ಷೆಗೆ ಗುರಿಯಾಗಿ ತಮ್ಮ ಜೀವಿತಾವಧಿಯ 11 ವರ್ಷಗಳನ್ನು ಕೈ-ಕಾಲುಗಳಿಗೆ ಕೋಳ ಹಾಕಿಸಿಕೊಂಡು, ಬೆಳಕೇ ಕಾಣದ ಜೈಲಿನ ನೆಲಮಾಳಿಗೆಯ ಚಿಕ್ಕ ಕೋಣೆಯಲ್ಲಿ ಕಳೆಯಬೇಕಾಯಿತು, ಜೈಲಿನ ಕೋಣೆಯ ಗೋಡೆಗಳ ಮೇಲೆ ಕ್ರಾಂತಿಕಾರಿ ಕವಿತೆಗಳನ್ನು ಬರೆದು ಅವೆಲ್ಲವನ್ನು ಬಾಯಿಪಾಠ ಮಾಡಿ ಜೈಲಿನಿಂದ ಬಿಡುಗಡೆಯಾದ ನಂತರ ಕೃತಿ ರಚಿಸಿದ್ದರು.

ಜೈಲಿನಿಂದ ಬಿಡುಗಡೆಯಾದ ಮೇಲೆಯೂ ಸುಮ್ಮನೇ ಕುಳಿತುಕೊಳ್ಳದೇ ದೇಶ ಒಡೆಯುವ ಮುಸ್ಲಿಂ ಲೀಗ್ ವಿರುದ್ಧ ಹೋರಾಡಲು ಹಿಂದೂ ಮಹಾಸಭಾ ಸ್ಥಾಪಿಸಿದರಲ್ಲದೇ, ಪತಿತ ಪಾವನ ಮಂದಿರ ಸ್ಥಾಪಿಸಿ ಅಸ್ಪೃಶ್ಯತೆ ನಿವಾರಣೆಗೆ ಶ್ರಮಿಸಿದರು, ಸಹಪಂಕ್ತಿ ಭೋಜನಗಳನ್ನು ಆಯೋಜಿಸಿ ಅಸಮಾನತೆ ತೊಡೆಯಲು ಮೇಲ್ಪಂಕ್ತಿ ಹಾಕಿದ್ದರು ಎಂದರು.

ಇಂದು ಅವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿ, ಅವರ ಹೋರಾಟ ಹಾಗೂ ತ್ಯಾಗ, ಅನುಭವಿಸಿದ ಕಷ್ಟಗಳನ್ನು ಸ್ಮರಿಸಲಾಯಿತು. ಸ್ವಾತಂತ್ರ್ಯ ಭಾರತದ ಅನೇಕ ರಾಜ್ಯಗಳಲ್ಲಿ ಇಂದು ಕುಟುಂಬ ಹಾಗೂ ಜಾತಿ ರಾಜಕಾರಣದಿಂದ ಆಡಳಿತ ಚುಕ್ಕಾಣ ಹಿಡಿಯುತ್ತಿರುವ ಸಂದರ್ಭದಲ್ಲಿ ಸಾವರ್ಕರ್ ಹಾಗೂ ಅವರ ಕುಟುಂಬವನ್ನು ನೆನೆಯಬೇಕು, ವಿನಾಯಕ ಸಾವರ್ಕರ್ ಅವರಷ್ಟೇ ಅಲ್ಲದೇ ಅವರ ಸಹೋದರರಾದ ಗಣೇಶ್ ಹಾಗೂ ನಾರಾಯಣ ಸಾವರ್ಕರ್ ಅವರುಗಳು ಸಹ ಅಂಡಮಾನ್ ಜೈಲಿನಲ್ಲಿ ಬಂಧಿತರಾಗಿದ್ದರು.

ಕಾರ್ಯಕ್ರಮದಲ್ಲಿ ವೀರ ಸಾವರ್ಕರ್ ಯುವ ಬಳಗದ ಉಪಾಧ್ಯಕ್ಷರಾದ ಸಂದೇಶ್, ಟಿ.ಎಸ್.ಅರುಣ್, ಕಾರ್ಯದರ್ಶಿ ದೀಪಕ್, ಮುಖಂಡರಾದ ಟಿ.ಪಿ.ಮಧುಸೂದನ್, ರಂಗನಾಥ್, ಕುಮಾರ್ ಗೌಡ, ಪ್ರಮೋದ್ ಗೌಡ, ಪರಶಿವಮೂರ್ತಿ, ಎಸ್.ಎನ್.ರಾಜೇಶ್, ಸುರೇಂದ್ರ, ಶ್ರೀನಿವಾಸ್, ಗುರುಮೂರ್ತಿ, ರವಿನಂದನ್, ಗೈಡ್ ಚಂದ್ರು ಸೇರಿದಂತೆ ಅನೇಕರು ಭಾಗವಹಿಸಿದ್ದರು.