3 ತಿಂಗಳಿಂದ ಪಡಿತರ ಇಲ್ಲದೆ ಗ್ರಾಮಸ್ಥರ ಬವಣೆ

ಕೊಳ್ಳೇಗಾಲ:  ಬಡವರಿಗೆ ತಲುಪಬೇಕಾದ ಸಾವಿರಾರು ಕ್ವಿಂಟಾಲ್ ಅನ್ನ ಭಾಗ್ಯ ಪಡಿತರ ಸಮ ರ್ಪಕ ರೀತಿಯಲ್ಲಿ ದೊರಕದೆ ಎಂಟು ಸಾವಿರಕ್ಕೂ ಹೆಚ್ಚು ಗ್ರಾಹಕರು ಬವಣೆ ಪಡುವಂತಹ ಸ್ಥಿತಿ ನಿರ್ಮಾಣವಾಗಿದೆ.

ಲೊಕ್ಕನಹಳ್ಳಿ ಹೋಬಳಿಯ ಲೊಕ್ಕನಹಳ್ಳಿ, ಹುತ್ತೂರು, ಹೊಸದೊಡ್ಡಿ, ಪಿ.ಜಿ.ಪಾಳ್ಯ, ಹುಯಿಲುನತ್ತ ಒಳಗೊಂಡಂತೆ 13 ಕ್ಕೂ ಹೆಚ್ಚು ನ್ಯಾಯ ಬೆಲೆ ಅಂಗಡಿಗಳಿದ್ದು, ಹುತ್ತೂರಿನಲ್ಲಿ ಮಾತ್ರ ಪತ್ತಿನ ಸಹಕಾರಿ ಸಂಘದ ಮೂಲಕ ಪಡಿತರ ವಿತರಿಸಲಾಗುತ್ತಿದೆ. ಉಳಿದಂತೆ 12 ಅಂಗಡಿಗಳಲ್ಲಿ ನ್ಯಾಯ ಬೆಲೆ ಅಂಗಡಿ ಮೂಲಕವೇ ಅನ್ನ ಭಾಗ್ಯದ ಪಡಿತರ ವಿತರಿಸಲಾಗುತ್ತಿದೆ. ಆದರೆ ಈ ಪೈಕಿ 8 ಕ್ಕೂ ಹೆಚ್ಚು ಅಂಗಡಿಗಳಲ್ಲಿ ಮೇ, ಜೂನ್, ಜುಲೈ, ಆಗಸ್ಟ್ ತಿಂಗಳ ಪಡಿತರ ಇನ್ನೂ ಸಹ ವಿತರಣೆಯಾಗಿಲ್ಲ, ಅದೇ ರೀತಿಯಲ್ಲಿ 4 ಕ್ಕೂ ಹೆಚ್ಚು ನ್ಯಾಯ ಬೆಲೆ ಅಂಗಡಿಗಳಲ್ಲಿ ಜೂನ್, ಜುಲೈ, ಆಗಸ್ಟ್ ತಿಂಗಳ ಪಡಿತರ ವಿತರಣೆಯಾಗಬೇಕಿದೆ.

ಕಳೆದ 1 ವರ್ಷದ ಹಿಂದೆ ಟಿಎಪಿಸಿಎಂಎಸ್ ನಲ್ಲಿ ನಡೆದಿತ್ತು ಎನ್ನಲಾದ ಪಡಿತರ ವಿತರಣೆಯ ಅವ್ಯವಹಾರ ಕುರಿತು ಹಿಂದಿನ ಜಿಲ್ಲಾಧಿಕಾರಿ ರಾಮು ತನಿಖೆಗೆ ಆದೇಶಿಸಿ ದ್ದರು, ಬಳಿಕ ಕೊಳ್ಳೇಗಾಲ ವ್ಯಾಪ್ತಿಗೆ ಟಿಎಪಿಸಿಎಂಎಸ್ ನಿಂದ ವಿತರಣೆ ಆಗುತ್ತಿದ್ದ ಆಹಾರ ಪದಾರ್ಥವನ್ನು ಕಡಿತಗೊಳಿಸಿ, ಕರ್ನಾಟಕ ಫುಡ್ ಕಾರ್ಪೋರೇಷನ್ (ಕೆಎಫ್‍ಸಿ) ಮೂಲಕ ವಿತರಣೆಗೆ ಕ್ರಮಕೈ ಗೊಳ್ಳಲಾಗಿತ್ತು. ಆದರೆ ಲೊಕ್ಕನಹಳ್ಳಿ, ಪಾಳ್ಯ ಹೋಬಳಿ ಸೇರಿದಂತೆ ಕೆಲವೆಡೆ ಮಾತ್ರ ಟಿಎಪಿಸಿಎಂಎಸ್ ಮೂಲಕವೇ ಇನ್ನೂ ಸಹ ಪಡಿತರ ವಿತರಣೆಯಾಗುತ್ತಿದೆ. ಆದರೆ ಸುಮಾರು 8000 ಕ್ಕೂ ಹೆಚ್ಚು ಗ್ರಾಹಕರಿಗೆ ಸಮರ್ಪಕ ರೀತಿಯಲ್ಲಿ ಪಡಿತರ ಸಿಗದೆ ಬವಣೆ ಪಡುವಂತಾಗಿದೆ ಎಂದು ಗ್ರಾಮಸ್ಥರು ದೂರಿದ್ದಾರೆ.

ಒಂದೆಡೆ ಟಿಎಪಿಸಿಎಂಎಸ್ ಆಹಾರ ಇಲಾಖೆ ಗ್ರಾಹಕರಿಗೆ ಅನ್ನ ಭಾಗ್ಯದ ಪಡಿತರ ವಿತರಣೆಯಲ್ಲಿ ಕ್ರಮಕೈಗೊಳ್ಳದೆ ನಿರ್ಲಕ್ಷ್ಯ ಪ್ರದರ್ಶಿಸುವ ಮೂಲಕ ಪೇಚಿಗೆ ಸಿಲುಕಿದ್ದರೆ, ಮತ್ತೊಂದೆಡೆ ಆಹಾರ ಪದಾರ್ಥ ವಿತರಣೆ ಹಿನ್ನಲೆಯಲ್ಲಿ ನ್ಯಾಯಬೆಲೆ ಅಂಗಡಿ ಮಾಲೀಕರು ಗ್ರಾಹಕರಿಗೆ ಸಬೂಬು ಹೇಳುತ್ತಾ ತಾಕಲಾಟ ನಡೆಸುತ್ತಿದ್ದಾರೆ. ಒಂದು ತಿಂಗಳ ಪಡಿತರವನ್ನು ಸದ್ಯಕ್ಕೆ ವಿತರಿಸಿ ನ್ಯಾಯ ಬೆಲೆ ಅಂಗಡಿಗಳ ಮೂಲಕ ರೇಷನ್ ಕಾರ್ಡ್‍ಗೆ ಮೂರು ತಿಂಗಳು ವಿತರಣೆ ಯಾದಂತೆ ದಾಖಲೆ ಸೂಚಿಸುವಂತೆ ಕೆಲ ನ್ಯಾಯಬೆಲೆ ಅಂಗಡಿ ಮಾಲೀಕರಿಗೆ ಆಹಾರ ಇಲಾಖೆಯ ಅಧಿಕಾರಿಗಳೇ ತಾಕೀತು ಮಾಡುತ್ತಿದ್ದಾರೆ ಎಂಬ ಮಾತುಗಳು ಸಾರ್ವ ಜನಿಕ ವಲಯದಲ್ಲಿ ಚರ್ಚೆಯಾಗುತ್ತಿದೆ. ಪಡಿತರ ಏಕೆ ವಿತರಣೆಯಾಗಿಲ್ಲ ಎಂದು ಗ್ರಾಹಕರು ಆಹಾರ ಇಲಾಖೆ ಅಧಿಕಾರಿಗಳನ್ನು ಸಂಪರ್ಕಿಸಿದರೇ ಸಬೂಬು ಹೇಳಿ ಗ್ರಾಹಕ ರನ್ನು ಕಳುಹಿಸುತ್ತಿದ್ದಾರೆ ಎನ್ನಲಾಗಿದೆ. ಆದರೆ ನ್ಯಾಯ ಬೆಲೆ ಅಂಗಡಿ ಮಾಲೀಕ ರಿಗೆ ಕರೆ ಮಾಡಿ ಗ್ರಾಹಕರು ನಮ್ಮ ಬಳಿ ಬರದಂತೆ ನೋಡಿಕೊಳ್ಳಿ ಎಂದು ತಮ್ಮ ತಪ್ಪು ಮುಚ್ಚಿಕೊಳ್ಳಲು ಚಾಣಾಕ್ಷ ನೀತಿ ಪ್ರದರ್ಶಿಸುತ್ತಿರುವುದು ಈಗ ಚರ್ಚೆಯ ಕೇಂದ್ರ ಬಿಂದುಯಾಗಿದೆ.

ಪಿ.ಜಿ.ಪಾಳ್ಯ ವ್ಯಾಪ್ತಿಯಲ್ಲಿ 4 ಕ್ಕೂ ಹೆಚ್ಚು ನ್ಯಾಯಬೆಲೆ ಅಂಗಡಿಗಳಿವೆ. ಮೂರು ತಿಂಗಳಿನಿಂದ ಅನ್ನ ಭಾಗ್ಯ ಪಡಿತರ ವಿತರಣೆ ಯಾಗುತ್ತಿಲ್ಲ ಈ ಸಂಬಂಧ ಗ್ರಾಮಸ್ಥರು ತಹಶೀಲ್ದಾರ್ ಕಛೇರಿಗೆ ದೂರು ಸಲ್ಲಿಸಿದ್ದು, ಕೂಡಲೇ ವಿತರಣೆಗೆ ಕ್ರಮವಹಿಸಬೇಕು. ಪಡಿತರ ವಿತರಣೆಯಲ್ಲಿ ಆಗಿರುವ ಅವ್ಯವಹಾರ ತನಿಖೆಯಾಗ ಬೇಕು ಎಂದು ಪಿ.ಜಿ.ಪಾಳ್ಯ ಗ್ರಾ.ಪಂ ಉಪಾ ಧ್ಯಕ್ಷ ಸಿದ್ದರಾಜು ಆಗ್ರಹಿಸಿದ್ದಾರೆ.