ಅರಸೀಕೆರೆ, ಜು.5- ಅಮರಗಿರಿ ಶ್ರೀವೆಂಕಟರಮಣ ಸ್ವಾಮಿ ಮಹಾ ರಥೋತ್ಸವ ಜುಲೈ 13 ರಂದು ನಡೆಯಲಿರುವ ಹಿನ್ನೆಲೆಯಲ್ಲಿ ದೇವಾಲಯ ಸಮೀಪದ ಐತಿಹಾಸಿಕ ಕಲ್ಯಾಣಿಯನ್ನು ಮಾಲೇಕಲ್ಲು ತಿರುಪತಿ ಗ್ರಾಮಸ್ಥರು ಶುಕ್ರವಾರ ಸ್ವಚ್ಛಗೊಳಿಸಿದರು.
ಪ್ರತಿವರ್ಷ ಆಷಾಢ ಮಾಸದ ದ್ವಾದಶಿಯಂದು ಅರಸೀಕೆರೆ ತಾಲೂಕಿನ ಅಮರಗಿರಿ ಮಾಲೇಕಲ್ಲು ತಿರುಪತಿಯಲ್ಲಿ ಶ್ರೀವೆಂಕಟರಮಣ ಸ್ವಾಮಿ ರಥೋತ್ಸವ 15 ದಿನಗಳ ಕಾಲ ಬಹಳ ಅದ್ಧೂರಿಯಾಗಿ ನಡೆಯಲಿದೆ. ಜುಲೈ 13ರಂದು ಮಹಾರಥೋತ್ಸವ ನಡೆಯಲಿದ್ದು, ರಾಜ್ಯ ಮತ್ತು ಹೊರರಾಜ್ಯದಿಂದ ಲಕ್ಷಾಂತರ ಭಕ್ತರು ಆಗಮಿಸಲಿದ್ದಾರೆ. ಹಾಗಾಗಿ, ಗ್ರಾಮಸ್ಥರೆಲ್ಲಾ ಸೇರಿ ಇಲ್ಲಿನ ಐತಿಹಾಸಿಕ ಕಲ್ಯಾಣಿಯನ್ನು ಶುಕ್ರವಾರ ಸಂಪೂರ್ಣವಾಗಿ ಸ್ವಚ್ಛಗೊಳಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಶೋಭ, ಜು.19ರ ಶುಕ್ರವಾರ ರಾತ್ರಿ ತೆಪ್ಪೋತ್ಸವ ಸಹ ಇದೇ ಕಲ್ಯಾಣಿಯಲ್ಲಿ ನಡೆಯಲಿದೆ. ಹಾಗಾಗಿಯೇ ಗ್ರಾಮಸ್ಥರೆಲ್ಲಾ ಸ್ವಯಂಪ್ರೇರಣೆಯಿಂದ ಸ್ವಚ್ಛತಾ ಕಾರ್ಯದಲ್ಲಿ ತೊಡಗಿಸಿಕೊಂಡಿದ್ದಾರೆ ಎಂದರು. ಗ್ರಾಮದ ಪೂಜಾರಿ ಗುಂಡಣ್ಣ, ತುಳಸಿದಾಸ್, ದೇವರಾಜ್, ಚಂದÀ್ರು, ಮುರುಗ, ಆನಂದ್, ನಾಗಣ್ಣ, ವಾಟರ್‍ಮನ್ ಶೇಖರ್ ಮತ್ತಿತರರು ಇದ್ದರು.