ವಿವಾಹವಾಗುವುದಾಗಿ ಮತ್ತೋರ್ವ ವಿಧವೆಗೆ ವಂಚಿಸಿದ್ದ ವಿನೀತ್‍ರಾಜ್ 

ಮೈಸೂರು,ಡಿ.23(ಎಸ್‍ಬಿಡಿ)-ವಿಧವೆಯರನ್ನು ವಂಚಿಸಿ, ಬಂಧನಕ್ಕೊಳ ಗಾಗಿರುವ ತಮಿಳುನಾಡು ಮೂಲದ ವ್ಯಕ್ತಿ ವಿರುದ್ಧ ಮೈಸೂರಿನಲ್ಲಿ ಮತ್ತೊಂದು ಪ್ರಕರಣ ದಾಖಲಾಗಿದೆ. ಕೊಯಮತ್ತೂರಿನ ವಿನೀತ್‍ರಾಜ್ ಅಲಿಯಾಸ್ ಯುವರಾಜ್(45) ವಿರುದ್ಧ ವಿಧವೆಯೊಬ್ಬರು ಮೈಸೂರಿನ ವಿವಿ ಪುರಂ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಶಾದಿ ಡಾಟ್ ಕಾಮ್‍ನಲ್ಲಿ ಪರಿಚಯವಾದ ವಿನೀತ್ ರಾಜ್, ನನ್ನನ್ನು ವಿವಾಹವಾಗುವುದಾಗಿ ತಿಳಿಸಿದ್ದ. ಭೇಟಿಯ ನಂತರ ಒಂದು ದೋಷವಿರುವುದರಿಂದ ನಾವು ವಿವಾಹವಾಗಲು ಅಡ್ಡಿಯಾಗುತ್ತಿದೆ. ದೇವರ ಸನ್ನಿಧಿಯಲ್ಲಿ ನಾವಿಬ್ಬರೂ ಚಿನ್ನದ ಸರವನ್ನು ಪರಸ್ಪರ ಬದಲಿಸಿಕೊಂಡರೆ ಆ ದೋಷ ನಿವಾರಣೆಯಾಗುತ್ತದೆ ಎಂದು ಹೇಳಿದ.

ಅವನ ಮಾತನ್ನು ನಂಬಿ ಒಂಟಿಕೊಪ್ಪಲಿನ ವೆಂಕಟರಮಣಸ್ವಾಮಿ ದೇವಾ ಲಯದಲ್ಲಿ ನನ್ನ 34ಗ್ರಾಂ ಚಿನ್ನದ ಸರವನ್ನು ಆತನ ಕೊರಳಿಗೆ ಹಾಕಿದೆ. ಆತನೂ ಕೂಡ ಒಂದು ಸರವನ್ನು  ಹಾಕಿದ. ಬಳಿಕ ಆ ಸರವನ್ನು ಪರಿಶೀಲಿಸಿ ದಾಗ ಅದು ನಕಲಿ ಎಂದು ಗೊತ್ತಾಯಿತು. ವಿವಾಹವಾಗುವುದಾಗಿ ನಂಬಿಸಿ, ದೋಷ ಪರಿಹಾರಕ್ಕೆ ಚಿನ್ನದ ಸರ ಬದಲಿಸಿಕೊಳ್ಳುವ ನೆಪದಲ್ಲಿ ವಂಚಿಸಿರುವ ವಿನೀತ್ ವಿರುದ್ಧ ಕ್ರಮ ಕೈಗೊಳ್ಳುವಂತೆ ದೂರಿನಲ್ಲಿ ಮನವಿ ಮಾಡಿದ್ದಾರೆ. ಈ ಸಂಬಂಧ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಮುಂದಿನ ಕ್ರಮ ಕೈಗೊಂಡಿದ್ದಾರೆ.

ಜೈಲಿನಲ್ಲಿದ್ದಾನೆ ಆರೋಪಿ: ಇದೇ ಮಾದರಿ ವಂಚನೆ ಪ್ರಕರಣದಲ್ಲಿ ಆರೋಪಿ ವಿನೀತ್ ರಾಜ್ ಜೈಲು ಸೇರಿದ್ದಾನೆ. ಮ್ಯಾಟ್ರಿಮೋನಿಯಲ್ ವೆಬ್‍ಸೈಟ್ ಮೂಲಕ ಪರಿಚಯವಾಗಿದ್ದ ಹಾಸನದ ವಿಧವೆಯೊಬ್ಬರನ್ನ ಮೈಸೂರಿಗೆ ಕರೆಸಿಕೊಂಡು, ಚಾಮುಂಡಿಬೆಟ್ಟದಲ್ಲಿ ಚಿನ್ನದ ಸರ ಬದಲಾಯಿಸಿಕೊಂಡರೆ ದೋಷ ಪರಿಹಾರವಾಗುವುದಾಗಿ ನಂಬಿಸಿ, ಸುಮಾರು 30 ಗ್ರಾಂ ಚಿನ್ನದ ಸರವನ್ನು ಲಪಟಾಯಿಸಿ, ಪರಾರಿಯಾಗಿದ್ದ. ಈ ಸಂಬಂಧ ಪ್ರಕರಣ ದಾಖಲಿಸಿಕೊಂಡಿರುವ ಕೃಷ್ಣರಾಜ ಠಾಣೆ ಪೊಲೀಸರು, 2 ದಿನಗಳ ಹಿಂದೆ ಬಂಧಿಸಿ, ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ. ಆರೋಪಿ ವಿನೀತ್ ಎಂ.ಕಾಂ ಪದವೀಧರನಾಗಿದ್ದು, ಆಟೋಮೊಬೈಲ್ ವ್ಯಾಪಾರಿ ಎಂದು ಹೇಳಿಕೊಂಡಿದ್ದ. ವಿವಾಹ ವೆಬ್‍ಸೈಟ್‍ಗಳಲ್ಲಿ ನೋಂದಣಿ ಮಾಡಿಕೊಂಡು, ವಿಧವೆಯರನ್ನೇ ಟಾರ್ಗೆಟ್ ಮಾಡುತ್ತಿದ್ದ. ನೋಡಲು ಸುಂದರವಾಗಿರುವ, ನಯವಾಗಿ ಮಾತನಾಡುವ ವಿನೀತ್ ರಾಜ್‍ನನ್ನು ಬಹುಬೇಗ ನಂಬುತ್ತಿದ್ದ ವಿಧವೆಯರು, ಅವನು ಹೇಳಿದ ಸ್ಥಳಕ್ಕೆ ಬಂದು, ಮೋಸಕ್ಕೆ ಬಲಿಯಾಗುತ್ತಿದ್ದರು. ಮೈಸೂರು, ಹಾಸನ, ಮಂಡ್ಯ, ಬೆಂಗಳೂರು ಮತ್ತಿತರ ಕಡೆ ನೆಲೆಸಿರುವ ವಿಧವೆಯರು ಈತನ ಮೋಸದ ಜಾಲಕ್ಕೆ ಬಲಿಯಾಗಿದ್ದಾರೆಂದು ಹೇಳಲಾಗುತ್ತಿದೆ.