ಮೈಸೂರು, ಜ.18(ಪಿಎಂ)- ಇತಿಹಾಸ ಕಂಡ ಅದ್ಭುತ ಶಕ್ತಿಯಾದ ಸ್ವಾಮಿ ವಿವೇಕಾನಂದರು ವೈಜ್ಞಾ ನಿಕ ಚಿಂತನೆಯುಳ್ಳ ಮಹಾನ್ ವಿಚಾರವಾದಿ. ಅವರು ಆಧ್ಯಾತ್ಮದ ಅಗ್ನಿಪರ್ವತ ಎಂದು ಮೈಸೂರು ವಿವಿ ಕುಲಪತಿ ಪ್ರೊ.ಜಿ.ಹೇಮಂತ್‍ಕುಮಾರ್ ಸ್ಮರಿಸಿದರು.
ಮೈಸೂರು ಮಾನಸಗಂಗೋತ್ರಿಯ ರಾಣಿ ಬಹ ದ್ದೂರ್ ಸಭಾಂಗಣದಲ್ಲಿ ಮೈಸೂರು ವಿವಿಯ ತತ್ವ ಶಾಸ್ತ್ರ ಅಧ್ಯಯನ ವಿಭಾಗ, ಸ್ವಾಮಿ ವಿವೇಕಾನಂದ ಪೀಠದ ಸಂಯುಕ್ತಾಶ್ರಯದಲ್ಲಿ ಶನಿವಾರ ಹಮ್ಮಿ ಕೊಂಡಿದ್ದ ಸ್ವಾಮಿ ವಿವೇಕಾನಂದರ 157ನೇ ಜನ್ಮ ದಿನಾಚರಣೆ ಉದ್ಘಾಟಿಸಿ ಅವರು ಮಾತನಾಡಿದರು.
ವೀರ ಸನ್ಯಾಸಿ, ಮಹಾ ಮಾನವತಾವಾದಿಯಾದ ವಿವೇಕಾನಂದರು ದೇಶ-ಕಾಲಗಳನ್ನು ಮೀರಿ ಧೀಮಂತ ವ್ಯಕ್ತಿತ್ವ ಹೊಂದಿದ್ದರು. ಧರ್ಮವೆಂದರೆ ಜಾತಿ-ಮತ, ಮೇಲು-ಕೀಳು, ಮಡಿ-ಮೈಲಿಗೆ ಯನ್ನು ಹೆಚ್ಚಿಸುವುದಲ್ಲ. ನೊಂದವರ ಉದ್ಧಾರಕ್ಕಾಗಿ ಶ್ರಮಿಸುವುದು ಹಾಗೂ ಅಂತಃಸಾಕ್ಷಿಯಂತೆ ಸತ್ಯವಾಗಿ ಬದುಕುವುದು ನಿಜವಾದ ಧರ್ಮ ಎಂದು ವಿವೇಕಾನಂದರು ಪ್ರತಿಪಾದಿಸಿದ್ದಾರೆ ಎಂದರು.
`ಏಳಿ ಏದ್ದೇಳಿ ಜಾಗೃತರಾಗಿ, ಗುರಿ ಮುಟ್ಟುವ ವರೆಗೂ ನಿಲ್ಲದಿರಿ’ ಎಂದು ಯುವ ಸಮುದಾಯಕ್ಕೆ ಸ್ಫೂರ್ತಿಯ ಕರೆ ನೀಡಿದ್ದಾರೆ. ಒಂದು ದೇಶದ ಭವಿಷ್ಯ ರೂಪಿಸುವಲ್ಲಿ ಶಿಕ್ಷಣ ಕ್ಷೇತ್ರದ ಪಾತ್ರ ಅಗಾಧ ವಾದುದು. ಆಧ್ಯಾತ್ಮಿಕ ವ್ಯಕ್ತಿಯಾಗಿದ್ದ ವಿವೇಕಾ ನಂದರು ನಮಗಿಂದು ಬೇಕಿರುವುದು ವೀರ ಪುರುಷ ನಿರ್ಮಾಣದ ವಿದ್ಯೆ. ಅದಕ್ಕೆ ತಳಹದಿಯಾಗಿ ಆಧ್ಯಾ ತ್ಮಿಕತೆ ಇರಲೇಬೇಕೆಂದು ಹೇಳಿದ್ದಾರೆ. ಶಿಕ್ಷಣ ವಿದ್ಯಾರ್ಥಿಯಲ್ಲಿ ಧ್ಯೇಯ, ಆತ್ಮಶ್ರದ್ಧೆ, ನಂಬಿಕೆಗಳನ್ನು ಬೆಳೆಸಬೇಕೆಂದು ಅವರು ಬಯಸಿದ್ದರು. ಆತ್ಮಶ್ರದ್ಧೆ ಇಲ್ಲದಿದ್ದರೆ ಏನನ್ನೂ ಸಾಧಿಸಲಾಗದು ಎಂದು ಸಾರಿದ್ದಾರೆ ಎಂದು ತಿಳಿಸಿದರು.
ಶ್ರೀರಾಮಕೃಷ್ಣರ ಮುಖವಾಣಿಯಾಗಿ ವಿವೇಕಾ ನಂದರು ಎಲ್ಲಾ ಧರ್ಮಗಳನ್ನೂ ಗೌರವಿಸಿದ್ದರು. ಭಾರತ ಆಧ್ಯಾತ್ಮಿಕ ದೇಶವೆಂದು ತಮ್ಮ ಅಮೋಘ ಭಾಷಣಗಳ ಮೂಲಕ ಪಾಶ್ಚಿಮಾತ್ಯರಿಗೆ ಮನವರಿಕೆ ಮಾಡಿಕೊಟ್ಟರು. ಆ ಮೂಲಕ ವಿಶ್ವ ಭೂಪಟದಲ್ಲಿ ಭಾರತದ ಹಿರಿಮೆಯನ್ನು ಎತ್ತಿ ಹಿಡಿದರು ಎಂದರು.
`ಯುವಜನತೆಗೆ ಸ್ವಾಮಿ ವಿವೇಕಾನಂದರ ಸಂದೇಶ’ ಕುರಿತು ಮೈಸೂರು ಶ್ರೀ ರಾಮಕೃಷ್ಣ ಆಶ್ರಮದ ಸ್ವಾಮಿ ಶಾಂತಿವ್ರತಾನಂದ ಮಹಾರಾಜ್ ವರು ಮುಖ್ಯ ಭಾಷಣ ಮಾಡಿದರು. ಮೈಸೂರು ವಿವಿ ಸ್ವಾಮಿ ವಿವೇಕಾನಂದ ಪೀಠದ ವಿಶ್ರಾಂತ ಸಂದರ್ಶಕ ಪ್ರಾಧ್ಯಾಪಕ ಡಾ.ಕೆ.ರಾಘವೇಂದ್ರ ಪೈ, ತತ್ವಶಾಸ್ತ್ರ ಅಧ್ಯಯನ ವಿಭಾಗದ ಅಧ್ಯಕ್ಷ ಡಾ.ಎಸ್. ವೆಂಕಟೇಶ್ ಮತ್ತಿತರರು ಹಾಜರಿದ್ದರು.