ಅತಿ ದೊಡ್ಡ ಬಹುಮತದೊಂದಿಗೆ ಮತ್ತೆ ಅಧಿಕಾರಕ್ಕೆ ಬರುತ್ತೇವೆ

ನವದೆಹಲಿ: ಅತಿ ದೊಡ್ಡ ಬಹುಮತದೊಂದಿಗೆ ಮತ್ತೆ ಕೇಂದ್ರದಲ್ಲಿ ಅಧಿಕಾರಕ್ಕೆ ಬರುತ್ತೇವೆ ಎಂದು ವಿಶ್ವಾಸ ವ್ಯಕ್ತಪಡಿಸಿರುವ ಪ್ರಧಾನಿ ನರೇಂದ್ರ ಮೋದಿ ಹಾಗೂ ಬಿಜೆಪಿ ಅಧ್ಯಕ್ಷ ಅಮಿತ್ ಶಾ ಅವರು, ನಮ್ಮ ಸರ್ಕಾರದ ಐದು ವರ್ಷಗಳ ಸಾಧನೆಗಳ ಬಗ್ಗೆ ತೃಪ್ತಿಯಿದೆ ಎಂದು ಹೇಳಿದ್ದಾರೆ.

ಏಳನೇ ಹಾಗೂ ಕೊನೆಯ ಹಂತದ ಲೋಕಸಭೆ ಚುನಾವಣೆಯ ಬಹಿರಂಗ ಪ್ರಚಾರಕ್ಕೆ ಇಂದು ಸಂಜೆ ತೆರೆ ಬಿದ್ದ ಹಿನ್ನೆಲೆಯಲ್ಲಿ ಪ್ರಧಾನಿ ಮೋದಿ ಹಾಗೂ ಅಮಿತ್ ಶಾ ಅವರು ಬಿಜೆಪಿ ಕಚೇರಿ ಯಲ್ಲಿ ಜಂಟಿ ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಿದರು. ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಎನ್‍ಡಿಎ ಸರ್ಕಾರ ಪ್ರತಿ 15 ದಿನಗಳಿಗೊಂದು ಹೊಸ ಯೋಜನೆಯನ್ನು ಪ್ರಕಟಿಸಿದೆ. ಕಳೆದ 5 ವರ್ಷಗಳಲ್ಲಿ ಮೋದಿ ಸರ್ಕಾರ ಸಮಾಜದ ದುರ್ಬಲ ವರ್ಗದ ಅಭಿವೃದ್ಧಿಗೆ 133 ಯೋಜನೆಗಳನ್ನು ಜಾರಿಗೆ ತಂದಿದೆ ಎಂದರು. ಮೋದಿ ಆಡ ಳಿತದಲ್ಲಿ ಬೆಲೆ ಏರಿಕೆ ಮತ್ತು ಭ್ರಷ್ಟಾಚಾರಕ್ಕೆ ಆಸ್ಪದವೇ ಇಲ್ಲ. ಮೋದಿ ಸರ್ಕಾರದಲ್ಲಿ ದೇಶದ ಜನತೆ ಸುರಕ್ಷಿತ ಭಾವನೆ ಹೊಂದಿ ದ್ದಾರೆ ಎಂದರು. ಕೇಂದ್ರ ಸರ್ಕಾರದ ನಾನಾ ಯೋಜನೆಗಳಿಂದ
50 ಕೋಟಿ ಜನರು ಲಾಭ ಪಡೆದಿದ್ದಾರೆ. ಬಡವರು, ಮಹಿಳೆಯರು ಮತ್ತು ರೈತರ ಅಭಿವೃದ್ಧಿಗೆ ನಮ್ಮ ಸರ್ಕಾರ ಆದ್ಯತೆ ನೀಡಿತ್ತು. ಪ್ರಧಾನಿ ನರೇಂದ್ರ ಮೋದಿ ಅವರ ‘ವಿಕಾಸ’ ಅಜೆಂಡಾ ಭಾರತವನ್ನೇ ಬದಲಾಯಿಸಿದೆ ಎಂದು ಅಮಿತ್ ಶಾ ಹೇಳಿದರು.

ಬಳಿಕ ಮಾತನಾಡಿದ ಪ್ರಧಾನಿ ಮೋದಿ, ಕಳೆದ 2 ಚುನಾವಣೆಗಳ ಸಂದರ್ಭ ಐಪಿಎಲ್ ನಡೆಸಲು ಸಾಧ್ಯವಾಗಿರಲಿಲ್ಲ. ಬಲಿಷ್ಠ ಸರ್ಕಾರವಿದ್ದಾಗ ಐಪಿಎಲ್, ರಮ್ಜಾನ್, ಪರೀಕ್ಷೆಗಳು ಮತ್ತು ಇತರ ಹಲವು ಕಾರ್ಯಗಳನ್ನು ಶಾಂತಿಯುತವಾಗಿ, ವ್ಯವಸ್ಥಿತವಾಗಿ ನಡೆಸಲು ಸಾಧ್ಯವಾಯಿತು ಎಂದರು. ದೀರ್ಘ ಕಾಲದ ಬಳಿಕ ಸತತ ಎರಡನೇ ಅವಧಿಗೆ ಸರ್ಕಾರವೊಂದು ಮತ್ತೆ ಪೂರ್ಣ ಬಹುಮತದಿಂದ ಅಧಿಕಾರಕ್ಕೆ ಬರುತ್ತಿರುವುದು ಇದೇ ಮೊದಲು. ನನಗೆ ದೊರೆತ ಬೆಂಬಲದಿಂದ ಮನಸ್ಸು ತುಂಬಿ ಬಂದಿದೆ. ನನಗೆ ತೋರಿದ ಪ್ರೀತಿ ಮತ್ತು ಬೆಂಬಲಕ್ಕಾಗಿ ದೇಶದ ಜನತೆಗೆ ಕೃತಜ್ಞತೆ ಸಲ್ಲಿಸುತ್ತೇನೆ ಎಂದರು.

ನಮ್ಮ ಪ್ರಜಾಪ್ರಭುತ್ವದ ಶಕ್ತಿ ಜಗತ್ತಿಗೇ ತಿಳಿದಿದೆ. ಜಗತ್ತಿನ ಮೇಲೆ ಪ್ರಭಾವ ಬೀರುವ ಶಕ್ತಿ ಭಾರತಕ್ಕಿದೆ ಎಂದು ಪ್ರಧಾನಿ ಹೇಳಿದರು. ಕಳೆದ 5 ವರ್ಷಗಳಲ್ಲಿ ತಮಗೆ ದೇಶದ ಸಂಪೂರ್ಣ ಸಹಕಾರ ದೊರೆತಿದೆ. ದೇಶಸೇವೆ ಮಾಡಲು ಅವಕಾಶ ದೊರೆತಿದ್ದು ತಮ್ಮ ಪೂರ್ವ ಜನ್ಮದ ಪುಣ್ಯ ಎಂದು ಹೇಳಿದರು. ಇದೇ ವೇಳೆ ದೇಶ ಮುನ್ನಡೆಸುವಲ್ಲಿ ಮಾಧ್ಯಮಗಳೂ ಕೂಡ ತಮಗೆ ಸಹಕಾರ ನೀಡಿದ್ದು, ಇದಕ್ಕಾಗಿ ನಾನು ಮಾಧ್ಯಮ ಲೋಕಕ್ಕೆ ಧನ್ಯವಾದ ತಿಳಿಸಲು ಬಯಸುತ್ತೇನೆ ಎಂದು ಮೋದಿ ಹೇಳಿದರು.

ರಾಹುಲ್ ಅಭಿನಂದನೆ: ಮೇ 16-ನರೇಂದ್ರಮೋದಿ 2014ರಲ್ಲಿ ಪ್ರಧಾನಿಯಾಗಿ ಆಯ್ಕೆಯಾದ ಬಳಿಕ ಇಂದು ಮೊದಲ ಬಾರಿಗೆ ಸುದ್ದಿಗೋಷ್ಠಿಯಲ್ಲಿ ಪಾಲ್ಗೊಳ್ಳುವ ಮೂಲಕ ಎಲ್ಲರಲ್ಲೂ ಕುತೂಹಲ ಕೆರಳಿಸಿದ್ದಾರೆ. ಆದಾಗ್ಯೂ, ಸುದ್ದಿಗೋಷ್ಠಿಯಲ್ಲಿ ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಶಾ ಮಾತನಾಡಲಿದ್ದು, ತಮಗೆ ಸುದ್ದಿಗಾರರು ಯಾವುದೇ ಪ್ರಶ್ನೆ ಕೇಳಬಾರದು. ಶಿಸ್ತು ಕಾಪಾಡುವುದು ಬಿಜೆಪಿಯ ಸಿದ್ಧಾಂತವಾಗಿದೆ ಎಂದರು. ಪ್ರಧಾನಿ ಮೋದಿ ಅವರ ಈ ನಿರ್ಧಾರಕ್ಕೆ ಟ್ವೀಟರ್‍ನಲ್ಲಿ ರಾಹುಲ್ ಗಾಂಧಿ ವ್ಯಂಗ್ಯವಾಡಿ ದ್ದಾರೆ. ಮೋದಿಗೆ ಅಭಿನಂದನೆಗಳು. ಅತ್ಯುತ್ತಮ ಸುದ್ದಿಗೋಷ್ಠಿ, ಮುಂದಿನ ದಿನಗಳಲ್ಲಿ ಕೆಲ ಪ್ರಶ್ನೆಗಳಿಗೆ ಉತ್ತರಿಸಲು ಅಮಿತ್ ಶಾ ಅವಕಾಶ ನೀಡಲಿದ್ದಾರೆ. ಚೆನ್ನಾಗಿ ಮಾಡಿದ್ದಾರೆ ಎಂದು ಪ್ರಶಂಸೆ ವ್ಯಕ್ತಪಡಿಸಿದ್ದಾರೆ. ರಾಫೆಲ್ ಯುದ್ದ ವಿಮಾನ ಖರೀದಿ ಸೇರಿದಂತೆ ಹಲವು ವಿಚಾರಗಳ ಕುರಿತು ಚರ್ಚೆ ನಡೆಸಲು ಪ್ರಧಾನಿ ನರೇಂದ್ರ ಮೋದಿ ಸುದ್ದಿಗೋಷ್ಠಿ ನಡೆಸಬೇಕೆಂದು ರಾಹುಲ್ ಗಾಂಧಿ ಹಲವು ದಿನಗಳಿಂದ ಒತ್ತಾಯಿಸುತ್ತಿದ್ದರು.