ಮೈಸೂರು, ಫೆ. 1(ಆರ್‍ಕೆ)- ದಂಡ ಅಥವಾ ಕಾನೂನಿಗೆ ಅಂಜಿ ಹೆಲ್ಮೆಟ್ ಧರಿಸಬೇಡಿ, ತಮ್ಮ ಅಮೂಲ್ಯ ಪ್ರಾಣ ರಕ್ಷಣೆಗಾಗಿ ತಪ್ಪದೇ ಹೆಲ್ಮೆಟ್ ಧರಿಸಿ ಎಂದು ಮೈಸೂರು ನಾಗರಿಕರಿಗೆ ಸಂಚಾರ ಪೊಲೀಸರು ಮನವಿ ಮಾಡಿದ್ದಾರೆ.
ಮೈಸೂರಿನ ಎಲ್ಲಾ ಸಂಚಾರ ಠಾಣೆಗಳಲ್ಲಿ ಇಂದು ಬೆಳಿಗ್ಗೆ ನಡೆದ ಸಂಚಾರ ಸಲಹಾ ಸಮಿತಿ ಸಭೆಯಲ್ಲಿ ಸಲಹೆ ನೀಡಿದ ಇನ್‍ಸ್ಪೆಕ್ಟರ್‍ಗಳು, ನೀವು ಕಾನೂನಿಗೆ ಹೆದರಿ ಅಥವಾ ದಂಡ ಪಾವತಿಸಬೇಕೆಂಬ ಕಾರಣಕ್ಕೆ ಹೆಲ್ಮೆಟ್ ಧರಿಸಬೇಕು ಎಂಬ ಭಾವನೆಯನ್ನು ಮನಸ್ಸಿನಿಂದ ತೆಗೆದು ಹಾಕಿ ಎಂದರು.
ನಿಮ್ಮನ್ನು ನಂಬಿಕೊಂಡು ಪತ್ನಿ, ಮಕ್ಕಳು, ತಂದೆ-ತಾಯಿ, ಬಂಧು-ಬಳಗ ಇರುತ್ತದೆ. ಅಪಘಾತದಲ್ಲಿ ಸಾವನ್ನಪ್ಪಿದರೆ ಅಥವಾ ಗಾಯಗಳಿಂದ ಶಾಶ್ವತ ಅಂಗ ವಿಕಲರಾದರೆ ಅವಲಂಬಿತರು ಬೀದಿಗೆ ಬೀಳುತ್ತಾರೆ. ದ್ವಿಚಕ್ರವಾಹನ ಚಾಲನೆ ಮಾಡುವಾಗ ಅಥವಾ ಹಿಂಬದಿ ಸವಾರರು ಹೆಲ್ಮೆಟ್ ಧರಿಸಿದರೆ ಕನಿಷ್ಠ ತಲೆ ಯನ್ನು ರಕ್ಷಿಸಿಕೊಂಡು ಪ್ರಾಣ ಉಳಿಸಿಕೊಳ್ಳಬಹುದು.
ರಸ್ತೆ ಸುರಕ್ಷತೆ, ಸುಗಮ ಸಂಚಾರಕ್ಕಾಗಿ ಸರ್ಕಾರ ನಿಯಮ ರೂಪಿಸಿದೆ. ಸಾರ್ವಜನಿಕರ ಹಿತಕ್ಕಾಗಿ ರೂಪಿ ಸಿರುವ ಸಂಚಾರ ನಿಯಮಗಳನ್ನು ನಾಗರಿಕರಾದ ನಾವು ಚಾಚೂ ತಪ್ಪದೆ ಪಾಲಿಸುವ ಮೂಲಕ ದುರಂತ ರಹಿತ ಸಮಾಜ ನಿರ್ಮಿಸಬೇಕಿದೆ.
ಮೈಸೂರಿನ ಅಶೋಕ ರಸ್ತೆಯಲ್ಲಿರುವ ಎನ್.ಆರ್. ಸಂಚಾರ ಠಾಣೆಯಲ್ಲಿ ಪ್ರಭಾರ ಇನ್‍ಸ್ಪೆಕ್ಟರ್ ಎನ್. ಮುನಿಯಪ್ಪ ನಡೆಸಿದ ಸಭೆಯಲ್ಲಿ ತಿಲಕ್‍ನಗರದ ಉಮ್ಮರ್ ಕಯಾಮ್ ರಸ್ತೆಯ ಶಿವಣ್ಣ ಕಾರ್ ಗ್ಯಾರೇಜ್ ಬಳಿ ರಸ್ತೆ ಬದಿ ಕಾರುಗಳನ್ನು ನಿಲ್ಲಿಸಲಾಗಿದೆಯಲ್ಲದೆ, ಹಳೇ ವಾಹನಗಳು ವರ್ಷಾನುಗಟ್ಟಲೆ ನಿಲುಗಡೆ ಮಾಡಿರುವುದರಿಂದ ಸ್ಥಳೀಯ ನಿವಾಸಿಗಳಿಗೆ ತೀವ್ರ ತೊಂದರೆಯಾಗುತ್ತಿದೆ ಎಂದು ಶ್ರೀಮತಿ ರೋಹಿಣಿ ಕಾಮತ್ ದೂರು ನೀಡಿದರು.
ಫೌಂಟನ್ ಸರ್ಕಲ್‍ನಿಂದ ರಾಜೇಂದ್ರನಗರಕ್ಕೆ ಹೋಗುವ ರಸ್ತೆ ಪಕ್ಕದಲ್ಲಿ, ಮಂಡಿಮೊಹಲ್ಲಾದ ಸಾಡೆ ರಸ್ತೆಯಲ್ಲಿ ಲಾರಿ ಹಾಗೂ ಆಟೋಗಳನ್ನು ಬೇಕಾಬಿಟ್ಟಿ ನಿಲ್ಲಿಸುತ್ತಿರುವುದರಿಂದ ವಾಹನ ದಟ್ಟಣೆಯಿಂದ ಅಪ ಘಾತಗಳಿಗೆ ಆಸ್ಪದ ಕೊಟ್ಟಂತಾಗಿದೆ. ಅಲ್ಲಲ್ಲಿ ರಸ್ತೆ ಮಟ್ಟ ಕ್ಕಿಂತ ಎತ್ತರದ ಮ್ಯಾನ್‍ಹೋಲ್‍ಗಳೂ ಸಹ ಅಪ ಘಾತಕ್ಕೆ ಕಾರಣವಾಗಿದೆ ಎಂದೂ ನಾಗರಿಕರು ದೂರಿದರು.
ನಮಾಜ್‍ಗೆ ಹೋಗುವಾಗಲಾದರೂ ಹೆಲ್ಮೆಟ್ ಕಾರ್ಯಾಚರಣೆಯನ್ನು ಸಡಿಲಗೊಳಿಸಿ. ಏಕೆಂದರೆ ಪ್ರಾರ್ಥನೆಗೆಂದು ಬರುವಾಗ ಹೆಲ್ಮೆಟ್ ಹಾಕಿ ಬರಲಾಗದು. ಹೆಲ್ಮೆಟ್ ತಂದರೆ ಇರಿಸಲು ಸ್ಥಳವಿರುವುದಿಲ್ಲವಾದ್ದ ರಿಂದ ಶುಕ್ರವಾರಗಳಂದು ನಮಾಜ್‍ಗೆ ಬರುವವ ರನ್ನು ತಪಾಸಣೆ ಮಾಡುವುದರಿಂದ ವಿನಾಯಿತಿ ನೀಡಿ ಎಂದು ಕೆಲವರು ಕೇಳಿಕೊಂಡರು.
ಅದಕ್ಕೆ ಪ್ರತಿಕ್ರಿಯಿಸಿದ ಇನ್‍ಸ್ಪೆಕ್ಟರ್ ಮುನಿಯಪ್ಪ, ನಾವೆಲ್ಲಾ ದೇವರನ್ನು ಒಳ್ಳೆಯದಾಗಲಿ ಎಂದು ಪ್ರಾರ್ಥಿ ಸುತ್ತೇವೆ. ಜನರಿಗೆ ಒಳ್ಳೆಯದಾಗಲಿ ಎಂದೇ ಹೆಲ್ಮೆಟ್ ಕಡ್ಡಾಯ ನಿಯಮ ಜಾರಿಯಾಗಿದೆ. ಹಾಗಾಗಿ ಪ್ರಾರ್ಥನೆಗೆ ಬರುವವರಿಗೆ ಹೆಲ್ಮೆಟ್‍ನಿಂದ ವಿನಾಯ್ತಿ ನೀಡಲಾಗದು ಎಂದು ಸಲಹೆ ನೀಡಿದರು.
ರಾಮಪ್ರಸಾದ್ ಕಾಮತ್, ನಸ್ರುಲ್ಲಾಖಾನ್, ಕಾದೀಶ ಅಹಮದ್, ಮನ್ಸೂದ್, ನದೀಮ್, ಎಂ.ಪುಟ್ಟ ಸ್ವಾಮಿ, ಎಸ್.ಪ್ರಸನ್ನಕುಮಾರ್, ರಸೂದ್, ಶಂಕರ ಸೇರಿದಂತೆ 15ಕ್ಕೂ ಹೆಚ್ಚು ಮಂದಿ ಸಮಿತಿ ಸಭೆಯಲ್ಲಿ ಪಾಲ್ಗೊಂಡು ಸಂಚಾರ ಸುರಕ್ಷತೆ ಕುರಿತಂತೆ ಸಲಹೆ -ಅಭಿಪ್ರಾಯಗಳನ್ನು ನೀಡಿದರು.
ಎನ್.ಆರ್. ಸಂಚಾರ ಠಾಣೆ ಸಬ್‍ಇನ್‍ಸ್ಪೆಕ್ಟರ್ ಕೆ.ರಘು, ಕಾನ್‍ಸ್ಟೇಬಲ್ ನಾಗೇಶ್ ಹಾಗೂ ಲಷ್ಕರ್ ಠಾಣೆ ಸಬ್‍ಇನ್‍ಸ್ಪೆಕ್ಟರ್ ಪೂಜಾ ಅವರು ಸಭೆಯಲ್ಲಿ ಉಪಸ್ಥಿತರಿದ್ದರು. ಅದೇ ರೀತಿ ಸಿದ್ದಾರ್ಥನಗರ, ದೇವ ರಾಜ, ಕೆ.ಆರ್., ಕುವೆಂಪುನಗರ ಹಾಗೂ ವಿವಿ. ಪುರಂ ಸಂಚಾರ ಠಾಣೆಗಳಲ್ಲೂ ಸಭೆ ನಡೆಸಿ ಸಲಹಾ ಸಮಿತಿ ಸದಸ್ಯರು ಹಾಗೂ ಸಾರ್ವಜನಿಕರು ನೀಡಿದ ಮಾರ್ಗದರ್ಶನ, ದೂರುಗಳನ್ನು ದಾಖಲಿಸಿಕೊಂಡು ಸಂಚಾರ ಸಮಸ್ಯೆಗಳನ್ನು ಸರಿಪಡಿಸುವ ಬಗ್ಗೆ ಪೊಲೀಸ್ ಅಧಿಕಾರಿಗಳು ಭರವಸೆ ನೀಡಿದರು.