ಚುನಾವಣೆ ಬಂದರೆ ನಮ್ಮಂತವರಿಗೆ ಅವಕಾಶ: ಮಾಜಿ ಶಾಸಕ ವಾಸು

ಮೈಸೂರು, ಜು.7(ಆರ್‍ಕೆಬಿ)- ರಾಜ್ಯದಲ್ಲಿ ಮಧ್ಯಂತರ ಚುನಾವಣೆ ಯಾರಿಗೂ ಇಷ್ಟವಿಲ್ಲ. ಒಂದು ವೇಳೆ ಚುನಾವಣೆ ಬಂದರೂ ನಮ್ಮಂಥವರಿಗೆ ಅವಕಾಶ ದೊರೆಯಲಿದೆ ಎಂದು ಮಾಜಿ ಶಾಸಕ ವಾಸು ತಿಳಿಸಿದರು.

ಪ್ರಸ್ತುತ ರಾಜ್ಯ ರಾಜಕಾರಣ ಕುರಿತು ಮೈಸೂರಿನಲ್ಲಿ ಮಾಧ್ಯಮ ಗಳೊಂದಿಗೆ ಮಾತನಾಡಿದ ಅವರು, ರಾಜ್ಯದಲ್ಲಿ ಯಾವ ಪಕ್ಷವೂ ಮಧ್ಯಂತರ ಚುನಾವಣೆ ಬಯಸುತ್ತಿಲ್ಲ. ಒಂದು ವೇಳೆ ಚುನಾವಣೆ ಬಂದಿದ್ದೇ ಆದರೆ ಸೋತು ಮನೆಯಲ್ಲಿರುವವರಿಗೆ ನಾಲ್ಕು ವರ್ಷ ಕಾಯುವ ಬದಲು ಎರಡೇ ವರ್ಷದಲ್ಲಿ ಮತ್ತೊಂದು ಅವಕಾಶ ಸಿಗಲಿದೆ ಎಂದು ಹೇಳಿದರು. ಹುಣಸೂರು ಶಾಸಕ ಹೆಚ್.ವಿಶ್ವನಾಥ್ ಅವರಿಗೆ ಬೇಸರ ಉಂಟಾಗಿರಬಹುದು ಅಥವಾ ಸಂಪೂರ್ಣ ರಾಜಕೀಯ ವ್ಯವಸ್ಥೆ ಬೇಸರವುಂಟು ಮಾಡಿರಬಹುದು. ಆದ್ದರಿಂದ ರಾಜೀನಾಮೆ ನೀಡಿದ್ದಾರೆ. ವಿಶ್ವನಾಥ್ ಅವರು ಕಾಂಗ್ರೆಸ್ ಪಕ್ಷದಲ್ಲಿ ಸಾಕಷ್ಟು ಅನುಭವ ಪಡೆದು ಹೋದವರು ಎಂದರು.

ರಾಜೀನಾಮೆ ಪರ್ವ ರಾಜ್ಯದಲ್ಲಿ ಹೊಸದೇನಲ್ಲ. ಅತೃಪ್ತರ ಮನವೊಲಿಸಲು ಮುಖಂಡರು ಪ್ರಯತ್ನ ಮಾಡುತ್ತಿದ್ದಾರೆ. ಮಾಜಿ ಸಿಎಂ ಸಿದ್ದರಾಮಯ್ಯ ಅವರ ಮನಸ್ಸಿನಲ್ಲಿ ಏನಿದೆ ಎಂದು ಹೇಳಲು ಅವರಿಗಿಂತ ದೊಡ್ಡವನಲ್ಲ. ಪಕ್ಷದ ಅಧ್ಯಕ್ಷರು ಹಾಗೂ ಮುಖ್ಯಮಂತ್ರಿಗಳೂ ವಿದೇಶದಿಂದ ವಾಪಸ್ ಆಗಲಿದ್ದಾರೆ ಎಂದು ತಿಳಿಸಿದರು.