ಕಾಂಗ್ರೆಸ್, ಜೆಡಿಎಸ್ ಶಾಸಕರಿಗೆ ಮತ್ತೊಮ್ಮೆ ವಿಪ್

ಬೆಂಗಳೂರು: ವಿಧಾನ ಮಂಡಲ ಅಧಿವೇಶನ ಆರಂಭಕ್ಕೂ ಮುನ್ನ ಸದನದಲ್ಲಿ ಭಾಗವಹಿಸುವಂತೆ ಅತೃಪ್ತ ಶಾಸಕರಿಗೆ ವಿಪ್ ಜಾರಿಯಾಗಿತ್ತು. ಈಗ ವಿಶ್ವಾಸ ಮತ ಯಾಚನೆ ಹಿನ್ನೆಲೆಯಲ್ಲಿ ಗುರುವಾರ ಕಲಾಪದಲ್ಲಿ ಭಾಗಿಯಾಗುವಂತೆ ಮತ್ತೊಮ್ಮೆ ವ್ಹಿಪ್ ಜಾರಿ ಮಾಡಲಾ ಗಿದೆ ಎಂದು ವಿಧಾನಸಭೆ ಆಡಳಿತಪಕ್ಷದ ಮುಖ್ಯ ಸಚೇತಕ ಗಣೇಶ್ ಹುಕ್ಕೇರಿ ಹೇಳಿದ್ದಾರೆ. ಪ್ರಕೃತಿ ರೆಸಾರ್ಟ್ ಬಳಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪಕ್ಷದ ಎಲ್ಲಾ ನಾಯಕರ ಜೊತೆ ಚರ್ಚಿಸಿ ಶಾಸಕರಿಗೆ ವ್ಹಿಪ್ ಜಾರಿ ಮಾಡಲಾಗಿದ್ದು, ಶಾಸಕರ ಮನೆಗಳಿಗೆ ವಿಪ್ ತಲುಪಿಸಲಾಗುತ್ತದೆ. ನಾಳೆ ಸದನದಲ್ಲಿ ಏನಾಗಲಿದೆ ಎಂಬುದನ್ನು ಕಾದು ನೋಡಿ ಎಂದರು.

ಕೆಪಿಸಿಸಿ ಕಾರ್ಯಾಧ್ಯಕ್ಷ ಈಶ್ವರ್ ಖಂಡ್ರೆ ಮಾತನಾಡಿ, ಶಾಸಕರ ರಾಜೀನಾಮೆ ವಿಚಾರದಲ್ಲಿ ಸುಪ್ರಿಂಕೋರ್ಟ್ ನೀಡಿರುವ ತೀರ್ಪು ಸ್ವಾಗತಾರ್ಹ. ಸಭಾಧ್ಯಕ್ಷರಿಗೆ ನಿರ್ದೇ ಶನ ಮಾಡುತ್ತಿಲ್ಲ ಎಂದು ಕೋರ್ಟ್ ತಿಳಿಸಿದೆ. ನಾವು ಸಭಾಧ್ಯಕ್ಷರ ಹಕ್ಕು ಮತ್ತು ಕರ್ತವ್ಯದ ಬಗ್ಗೆ ಹಸ್ತಕ್ಷೇಪ ಮಾಡುವುದಿಲ್ಲ. ನ್ಯಾಯ ಮತ್ತು ಸತ್ಯದ ಮೇಲೆ ನಮಗೆ ನಂಬಿಕೆಯಿದೆ. ಗುರುವಾರ ಸದನದಲ್ಲಿ ಮುಖ್ಯಮಂತ್ರಿ ಕುಮಾರಸ್ವಾಮಿ ಬಹುಮತ ಸಾಬೀತುಪಡಿಸುತ್ತಾರೆ ಎಂಬ ವಿಶ್ವಾಸವಿದೆ ಎಂದರು. ರಾಜೀನಾಮೆ ನೀಡಿರುವ ಶಾಸಕರು ಪಕ್ಷದ ಚಿಹ್ನೆ ಮೇಲೆ ಗೆಲುವು ಸಾಧಿಸಿ ಶಾಸಕರಾಗಿದ್ದಾರೆ. ಅವರ ಗೆಲುವಿನಲ್ಲಿ ಪಕ್ಷದ ಕಾರ್ಯಕರ್ತರ ಶ್ರಮವಿದೆ. ಕಾರ್ಯಕರ್ತರ ಶ್ರಮ ಹೋರಾಟದಿಂದ ಅವರು ಗೆದ್ದು ಬಂದಿದ್ದಾರೆ ಎಂದರು. ಪಕ್ಷದ ನಾಯಕರು ಅತೃಪ್ತ ಶಾಸಕರ ಜೊತೆ ನಿರಂತರ ಸಂಪರ್ಕದಲ್ಲಿದ್ದಾರೆ. ಶಾಸಕರು ವಾಪಸ್ ಬರುತ್ತಾರೆ ಎಂಬ ಸಂಪೂರ್ಣ ವಿಶ್ವಾಸವಿದೆ ಎಂದು ಖಂಡ್ರೆ ತಿಳಿಸಿದರು.
ವಿಧಾನಸಭೆಯ ನಾಯಕರಾಗಿರುವ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಜೆಡಿಎಸ್‍ನ ಮೂವರು ಅತೃಪ್ತ ಶಾಸಕರಿಗೆ ಇಂದು ವ್ಹಿಪ್ ಜಾರಿ ಮಾಡಿದ್ದಾರೆ.

ಶಾಸಕ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿ ಮುಂಬೈನ ರೆಸಾರ್ಟ್‍ನಲ್ಲಿರುವ ಎ.ಹೆಚ್. ವಿಶ್ವನಾಥ್, ನಾರಾಯಣಗೌಡ ಮತ್ತು ಗೋಪಾಲಯ್ಯ ಅವರಿಗೆ ವ್ಹಿಪ್ ಜಾರಿ ಮಾಡಿದ್ದು, ವಿಶ್ವಾಸ ಮತದ ವೇಳೆ ಕಡ್ಡಾಯವಾಗಿ ಸದನದಲ್ಲಿ ಹಾಜರಿದ್ದು, ವಿಶ್ವಾಸ ಮತದ ಪರ ಮತ ಚಲಾಯಿಸಬೇಕೆಂದು ಸೂಚಿಸಿದ್ದಾರೆ.