ಕಾಡಾನೆ ದಾಳಿ; ವ್ಯಕ್ತಿಗೆ ತೀವ್ರ ಗಾಯ

ಮಡಿಕೇರಿ: ಕಾಡಾನೆ ದಾಳಿಯಿಂದ ಕಾಫಿಬೆಳೆಗಾರರೋರ್ವರು ಗಂಭೀರ ಗಾಯಗೊಂಡ ಘಟನೆ ನೆಲ್ಯಹುದಿಕೇರಿ ಸಮೀಪದ ಬೆಟ್ಟದಕಾಡು ಗ್ರಾಮದಲ್ಲಿ ಸಂಭವಿಸಿದೆ. ಬೆಟ್ಟದ ಕಾಡು ನಿವಾಸಿ ಮಹಮ್ಮದ್ ಆಲಿ ಎಂಬುವರೇ ಕಾಡಾನೆ ದಾಳಿಯಿಂದ ಗಾಯಗೊಂಡವರಾಗಿದ್ದಾರೆ.

ಭಾನುವಾರ ಸಂಜೆ ಬೆಟ್ಟದ ಕಾಡುವಿನಲ್ಲಿರುವ ತಮ್ಮ ತೋಟದಲ್ಲಿ ಕೆಲಸ ನಿರ್ವಹಿಸುತ್ತಿದ್ದ ಕಾರ್ಮಿಕರನ್ನು ಕಳುಹಿಸಿ ಮನೆಗೆ ತೆರಳುತ್ತಿದ್ದ ಮಹಮ್ಮದ್ ಆಲಿ ಮೇಲೆ ದಾಳಿ ನಡೆಸಿದ ಕಾಡಾನೆ ಗಂಭೀರವಾಗಿ ಗಾಯಗೊಳಿಸಿದೆ. ಈ ಸಂದರ್ಭ ಮಹಮ್ಮದ್ ಆಲಿ ಅವರ ಕಿರುಚಾಟವನ್ನು ಕೇಳಿ ಸ್ಥಳಕ್ಕೆ ಬಂದ ಗ್ರಾಮಸ್ಥರು ಗಾಯಾಳುವನ್ನು ಆಸ್ಪತ್ರೆಗೆ ದಾಖಲಿಸಿದ್ದಾರೆ.

ಕಳೆದ ಹಲವು ದಿನಗಳಿಂದ ಬೆಟ್ಟದ ಕಾಡು ಎಂ.ಜಿ. ಕಾಲೋನಿ ವ್ಯಾಪ್ತಿಯ ಕಾಫಿ ತೋಟಗಳಲ್ಲಿ ಬೀಡುಬಿಟ್ಟಿರುವ ಸುಮಾರು ಹದಿನಾರಕ್ಕೂ ಹೆಚ್ಚು ಕಾಡಾನೆಗಳ ಹಿಂಡು ಬೀಡು ಬಿಟ್ಟು ಅಪಾರ ಪ್ರಮಾಣದ ಬೆಳೆ ನಾಶದೊಂದಿಗೆ ಗ್ರಾಮಸ್ಥರು ಹಾಗೂ ಕಾರ್ಮಿಕರಲ್ಲಿ ಆತಂಕ ಸೃಷ್ಟಿಸಿವೆ. ಸ್ಥಳಕ್ಕೆ ಅರಣ್ಯ ಇಲಾಖೆ ಸಿಬ್ಬಂದಿಗಳು ಭೇಟಿ ನೀಡಿ ಆನೆ ಓಡಿಸುವ ಕಾರ್ಯಾಚರಣೆಗೆ ಮುಂದಾಗಿದ್ದರೂ ಕಾಡಾನೆಗಳು ಕಾಫಿ ತೋಟ ಬಿಟ್ಟು ಕದಲುತ್ತಿಲ್ಲ. ಈ ವ್ಯಾಪ್ತಿಯ ಕಾಫಿತೋಟಗಳಲ್ಲಿ ಬೀಡುಬಿಟ್ಟಿರುವ ಕಾಡಾನೆಗಳನ್ನು ಶಾಶ್ವತವಾಗಿ ಕಾಡಿಗಟ್ಟದಿದ್ದಲ್ಲಿ ಪ್ರತಿಭಟನೆ ನಡೆಸುವುದಾಗಿ ಬೆಟ್ಟದ ಕಾಡು ಹಾಗೂ ನೆಲ್ಲಿಹುದಿಕೇರಿಯ ನಿವಾಸಿಗಳು ಎಚ್ಚರಿಸಿದ್ದಾರೆ.