ಮತಯಂತ್ರ ನಿಷೇಧ: ಬ್ಯಾಲೆಟ್ ವ್ಯವಸ್ಥೆ ಜಾರಿಗೆ ಆಗ್ರಹಿಸಿ ಮಹಿಳಾ ಕಾಂಗ್ರೆಸ್ ಪೋಸ್ಟ್‍ಕಾರ್ಡ್ ಚಳವಳಿ

ಮೈಸೂರು,ಜೂ.25(ಎಂಟಿವೈ)- ಮುಂಬರುವ ಚುನಾವಣೆಗಳಲ್ಲಿ ಮತ ಯಂತ್ರ ನಿಷೇಧಿಸಿ, ಬ್ಯಾಲೆಟ್ ಪೇಪರ್ ವ್ಯವಸ್ಥೆ ಜಾರಿಗೊಳಿಸುವಂತೆ ಒತ್ತಾಯಿಸಿ ಮೈಸೂರಿನಲ್ಲಿ ಮಂಗಳವಾರ ಮಹಿಳಾ ಕಾಂಗ್ರೆಸ್ ಕಾರ್ಯಕರ್ತರು ಪೋಸ್ಟ್ ಕಾರ್ಡ್ ಚಳುವಳಿ ನಡೆಸಿದರು.

ಮೈಸೂರು ನಗರ ಪಾಲಿಕೆ ಕಚೇರಿ ಮುಂಭಾಗವಿರುವ ಅಂಚೆ ಪೆಟ್ಟಿಗೆಗೆ ಪೋಸ್ಟ್ ಕಾರ್ಡ್ ಹಾಕುವ ಮೂಲಕ ಮತ ಯಂತ್ರ ಬಳಸದಂತೆ ಒತ್ತಾಯಿಸಿದರು.

ಈ ವೇಳೆ ಮಾಜಿ ಶಾಸಕ ಎಂ.ಕೆ. ಸೋಮಶೇಖರ್ ಮಾತನಾಡಿ, ಕಳೆದ ಲೋಕಸಭಾ ಹಾಗೂ ವಿಧಾನಸಭಾ ಚುನಾವಣೆ ವೇಳೆ ಮತಯಂತ್ರಗಳನ್ನು ಹ್ಯಾಕ್ ಮಾಡಿರುವ ಶಂಕೆ ವ್ಯಕ್ತವಾಗಿತ್ತು. ಇದಕ್ಕೆ ಪೂರಕವಾಗಿ ಕೆಲವರು ಚುನಾ ವಣೆಯಲ್ಲಿ ಸ್ಪರ್ಧಿಸಿರುವ ಅಭ್ಯರ್ಥಿಗಳನ್ನು ಸಂಪರ್ಕಿಸಿ ಮತಯಂತ್ರ ಹ್ಯಾಕ್ ಮಾಡಿ, ನಿಮಗೆ ಓಟ್ ಬರುವಂತೆ ಮಾಡುತ್ತೇವೆ ಎಂದು ಕೋಟ್ಯಾಂತರ ರೂ. ಬೇಡಿಕೆ ಇಟ್ಟಿದ್ದರು. ಅಲ್ಲದೆ ಕಾಂಗ್ರೆಸ್ ಭದ್ರಕೋಟೆ ಯಲ್ಲಿಯೇ ಮತಗಳು ಬಿಜೆಪಿ ಅಭ್ಯರ್ಥಿಗೆ ಚಲಾವಣೆಯಾಗಿತ್ತು. ಹಲವು ಕ್ಷೇತ್ರಗಳಲ್ಲಿ ಕಾಂಗ್ರೆಸ್ ಅಭ್ಯರ್ಥಿಗಳಿಗೆ ಮತ ಚಲಾವಣೆ ಯಾಗಿದ್ದರೂ ಹಿನ್ನಡೆ ಉಂಟಾಗಿತ್ತು. ಈ ಹಿನ್ನೆಲೆಯಲ್ಲಿ ದೇಶದ ಹಲವೆಡೆ ಇಂತಹ ಗೊಂದಲ ಉಂಟಾಗಿದ್ದರಿಂದ ಇವಿಎಂ ಬಳಸದಂತೆ ಅಭಿಯಾನವೇ ನಡೆದಿದೆ. ಇನ್ನಾದರೂ ಪಾರದರ್ಶಕವಾಗಿ ಚುನಾ ವಣೆ ನಡೆಸುವುದಕ್ಕಾಗಿ ಬ್ಯಾಲೆಟ್ ಪೇಪರ್ ಬಳಸುವಂತೆ ಮನವಿ ಮಾಡಿದರು.

ಕೆಪಿಸಿಸಿ ಮಹಿಳಾ ಘಟಕದ ಅಧ್ಯಕ್ಷೆ ಪುಷ್ಪ ಅಮರನಾಥ್ ಮಾತನಾಡಿ, ದೇಶದ ಹಲವೆಡೆ ಇವಿಎಂ ಬಳಕೆ ಬಗ್ಗೆ ವಿರೋಧ ವ್ಯಕ್ತವಾಗುತ್ತಿದೆ. ಬಿಜೆಪಿ ಹೊರತುಪಡಿಸಿ ಬೇರೆಲ್ಲಾ ಪಕ್ಷಗಳು ಮತಯಂತ್ರವನ್ನು ವಿರೋಧಿಸುತ್ತಿದ್ದಾರೆ. ಕಳೆದ ಲೋಕಸಭಾ ಚುನಾವಣೆಯಲ್ಲಿ ಕೆಲವು ಕ್ಷೇತ್ರಗಳಲ್ಲಿ ವಿವಿ ಪ್ಯಾಟ್‍ಗಳಲ್ಲಿನ ಚೀಟಿಗಳನ್ನು ಎಣಿಕೆ ಮಾಡಿದಾಗ, ಚಲಾವಣೆಯಾಗಿರುವ ಮತಗಳ ಸಂಖ್ಯೆಗೂ, ವಿವಿ ಪ್ಯಾಟ್‍ಗಳ ಲ್ಲಿರುವ ಚೀಟಿಗಳ ಸಂಖ್ಯೆಗೂ ಸಾಕಷ್ಟು ವ್ಯತ್ಯಾಸವಿರುವುದು ಕಂಡು ಬಂದಿದೆ. ಈ ಹಿನ್ನೆಲೆಯಲ್ಲಿ ಪಾರದರ್ಶಕವಾಗಿ, ನಂಬಿಕೆ ಆಧಾರದಲ್ಲಿ ಚುನಾವಣೆ ನಡೆಸಲು ಬ್ಯಾಲೆಟ್ ಪೇಪರ್ ವ್ಯವಸ್ಥೆ ಜಾರಿಗೊಳಿ ಸುವಂತೆ ರಾಷ್ಟ್ರಪತಿಗಳಿಗೆ ಮನವಿ ಸಲ್ಲಿಸುತ್ತಾ ಒಂದು ಲಕ್ಷ ಪೋಸ್ಟ್ ಕಾರ್ಡ್ ಹಾಕಲಾಗುತ್ತಿದೆ ಎಂದರು.

ಪ್ರತಿಭಟನೆಯಲ್ಲಿ ಕಾಂಗ್ರೆಸ್ ಜಿಲ್ಲಾಧ್ಯಕ್ಷ ಡಾ.ಬಿ.ಜೆ.ವಿಜಯ್‍ಕುಮಾರ್, ನಗರಾಧ್ಯಕ್ಷ ಆರ್.ಮೂರ್ತಿ, ಮಾಜಿ ಮೇಯರ್ ಮೋದಾಮಣಿ, ಮಾಜಿ ಉಪಮೇಯರ್ ಪುಷ್ಪವಲ್ಲಿ, ಮಹಿಳಾ ಘಟಕದ ಮುಖಂಡರಾದ ಡಾ.ಸುಜಾತಾರಾವ್, ಎಂ.ಎ.ಕಮಲಾ ಅನಂತರಾಮ್, ಲಲಿತಾ ನಾಗರಾಜ್, ಇಂದಿರಾ, ಚಂದ್ರಕಲಾ, ಮುಖಂಡ ಡೈರಿ ವೆಂಕಟೇಶ್, ಮೈಸೂರು ಬಸವಣ್ಣ ಹಾಗೂ ಇನ್ನಿತರರು ಉಪಸ್ಥಿತರಿದ್ದರು.