ಮಹಿಳಾ ಪೊಲೀಸರಿಗೆ ಪ್ಯಾಂಟ್, ಶರ್ಟ್ ಸಮವಸ್ತ್ರ ಕಡ್ಡಾಯ

ಬೆಂಗಳೂರು: ಇನ್ನು ಮುಂದೆ ರಾಜ್ಯದ ಮಹಿಳಾ ಪೊಲೀಸರು ಸಮವಸ್ತ್ರವಾಗಿ ಪ್ಯಾಂಟ್-ಶರ್ಟ್ ಧರಿಸಲೇಬೇಕು ಎಂದು ಪೊಲೀಸ್ ಮಹಾ ನಿರ್ದೇಶಕಿ ನೀಲಮಣಿ ಎನ್.ರಾಜು ಅವರು ಶನಿ ವಾರ ಆದೇಶ ಹೊರಡಿಸಿದ್ದಾರೆ.

ಕಳೆದ ಹಲವು ವರ್ಷಗಳಿಂದ ಮಹಿಳಾ ಪೊಲೀಸರು ಖಾಕಿ ಸೀರೆ ಧರಿಸುತ್ತಿದ್ದರು. ಅದಕ್ಕೆ ಇಲಾಖೆಯಲ್ಲಿ ಅವಕಾಶ ಕಲ್ಪಿಸಲಾಗಿತ್ತು. ಆದರೆ, ಹೊಸ ಸುತ್ತೋಲೆಯಲ್ಲಿ ಖಾಕಿ ಸೀರೆ ಧರಿಸುವ ಪದ್ಧತಿಗೆ ಅಂತ್ಯ ಹಾಡಲಾಗಿದೆ. 2018ರ ಸೆ.3ರಂದು ಪೊಲೀಸ್ ಪ್ರಧಾನ ಕಚೇರಿಯಲ್ಲಿ ಡಿಜಿಪಿ ನೀಲಮಣಿ ರಾಜು ಅವರ ನೇತೃತ್ವದ ಸಮವಸ್ತ್ರದ ಕುರಿತಾದ ಸಮಿತಿ ಸಭೆಯಲ್ಲಿ ಸೀರೆ ಧರಿಸುವುದಕ್ಕೆ ಅಂತ್ಯ ಹಾಡುವುದರ ಜತೆಗೆ, ಸಿಬ್ಬಂದಿ ಹೂವು ಮುಡಿದುಕೊಳ್ಳುವಂತಿಲ್ಲ ಮತ್ತು ಕೈಗೆ ಒಂದು ಲೋಹದ ಬಳೆಯನ್ನಷ್ಟೇ ಧರಿಸ ಬಹುದು ಎಂದು ತಿಳಿಸಲಾಗಿದೆ.

ಸಭೆಯಲ್ಲಿ ಮಹಿಳಾ ಕಾನ್‍ಸ್ಟೇಬಲ್ ಗಳಿಂದ ಹಿಡಿದು ವಿವಿಧ ಹಂತದ ಅಧಿಕಾರಿಗಳು ಭಾಗವಹಿಸಿ ತಮ್ಮ ಅಭಿಪ್ರಾಯಗಳನ್ನು ವ್ಯಕ್ತಪಡಿಸಿದ್ದರು. ಅದರಲ್ಲಿ ಸೀರೆಯ ವಿಷಯ ಪ್ರಮುಖವಾಗಿ ಚರ್ಚೆಯಾಗಿದೆ. ಕಾನೂನು ಸುವ್ಯವಸ್ಥೆ ಕಾಪಾಡುವ ಸಮಯದಲ್ಲಿ ಅಪರಾಧ ಕೃತ್ಯ ಸ್ಥಳಕ್ಕೆ ಭೇಟಿ ನೀಡುವಾಗ, ಕೈದಿಗಳನ್ನು ಬೆಂಗಾವಲು ಮಾಡುವಾಗ, ಕಳ್ಳರನ್ನು ಬೆನ್ನಟ್ಟಿ ಹಿಡಿಯುವಾಗ ಮತ್ತು ಇನ್ನಿತರೆ ಕರ್ತವ್ಯಗಳ ಸಮಯದಲ್ಲಿ ಸೀರೆ ಧರಿಸಿ ಕೆಲಸ ನಿರ್ವಹಿಸುವುದು ಕಷ್ಟ ಎಂಬ ಅಭಿಪ್ರಾಯ ವ್ಯಕ್ತವಾಗಿತ್ತು.

ಸಮವಸ್ತ್ರದ ಹೊರತಾಗಿ ಅಧಿಕಾರಿ ಮತ್ತು ಸಿಬ್ಬಂದಿ ಕೇಶವಿನ್ಯಾಸ, ಕಿವಿಯೋಲೆ, ಹಣೆತಿಲಕ ಮತ್ತು ಬಳೆಗಳನ್ನು ಧರಿಸುವ ಸಂಬಂಧ ಕೆಲವು ಸೂಚನೆ ಪಾಲಿಸ ಬೇಕು. ರಾಜ್ಯದ ಎಲ್ಲಾ ಘಟಕಾಧಿಕಾರಿಗಳು ಸುತ್ತೋಲೆಯಲ್ಲಿರುವ ಅಂಶಗಳನ್ನು ಯಥಾವತ್ತಾಗಿ ತಕ್ಷಣದಿಂದಲೇ ಜಾರಿಗೆ ತರಲು ಸೂಕ್ತ ಕ್ರಮ ತೆಗೆದುಕೊಳ್ಳಬೇಕು ಎಂದು ತಿಳಿಸಲಾಗಿದೆ.

ಇಲಾಖೆಯ ಎಲ್ಲಾ ಸಿಬ್ಬಂದಿಯಲ್ಲಿ ಏಕರೂಪ ಶಿಸ್ತು ತರಲು ಮತ್ತು ಸೀರೆ ಧರಿಸುವುದರಿಂದ ಅನಾನುಕೂಲ ಆಗುವುದನ್ನು ತಪ್ಪಿಸಲು ಈ ಸುತ್ತೋಲೆ ಹೊರಡಿಸಲಾಗಿದೆ. ಮಹಿಳಾ ಸಿಬ್ಬಂದಿಯ ಅಭಿಪ್ರಾಯಗಳನ್ನು ಪಡೆದೇ ಈ ತೀರ್ಮಾನಕ್ಕೆ ಬರಲಾಗಿದೆ. ಇಲಾಖೆಯಲ್ಲಿ ಸಮಾನ ಶಿಸ್ತು ಪಾಲಿಸುವ ಉದ್ದೇ ಶದ ಸುತ್ತೋಲೆಯಿಂದ ಮಹಿಳಾ ಸಿಬ್ಬಂದಿಗೆ ಯಾವುದೇ ಸಮಸ್ಯೆ ಉಂಟಾಗುವುದಿಲ್ಲ ಎಂದು ಉನ್ನತ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದರು.