`ಭೂಮಿ ರಕ್ಷಿಸುವ ನಾಯಕರಾಗಿ, ಖಳನಾಯಕರಾಗದಿರಿ’

‘ವಿಶ್ವ ಇಂಜಿನಿಯರಿಂಗ್ ದಿನ’ ಕಾರ್ಯಕ್ರಮದಲ್ಲಿ ವಿಶ್ರಾಂತ ಕುಲಪತಿ ಕೆ.ಚಿದಾನಂದಗೌಡ ಕಿವಿಮಾತು
ಮೈಸೂರು, ಮಾ.4(ಎಂಕೆ)- ನಾವು ‘ಬ್ಲೂ ಬ್ಯೂಟಿ’ ಎಂದೇ ಹೆಸರಾಗಿರುವ ಭೂಮಿಯನ್ನು ಸಂರಕ್ಷಣೆ ಮಾಡುವ ನಾಯಕನಟರಾಗಬೇಕೇ ಹೊರತು ಹಾಳು ಮಾಡುವ ಖಳನಟರಾಗಬಾರದು ಎಂದು ಕುವೆಂಪು ವಿವಿ ವಿಶ್ರಾಂತ ಕುಲಪತಿ ಕೆ.ಚಿದಾನಂದಗೌಡ ಹೇಳಿದರು.

ನಗರದ ಜೆಎಲ್‍ಬಿ ರಸ್ತೆಯಲ್ಲಿರುವ ಇನ್‍ಸ್ಟಿಟ್ಯೂಷನ್ ಆಫ್ ಇಂಜಿನಿಯರ್ಸ್ ಸಭಾಂಗಣದಲ್ಲಿ ‘ವಿಶ್ವ ಇಂಜಿನಿಯರಿಂಗ್ ದಿನ’ದಂಗವಾಗಿ ಬುಧವಾರ ಆಯೋಜಿ ಸಿದ್ದ ಉಪನ್ಯಾಸ ಕಾರ್ಯಕ್ರಮದಲ್ಲಿ ‘ಮೂಲ ಸೌಕರ್ಯಗಳ ಅಭಿವೃದ್ಧಿಯಲ್ಲಿ ಸುಸ್ಥಿರತೆ’ ಕುರಿತು ಮಾತನಾಡಿದ ಅವರು, ಗಿಡಗಳನ್ನು ನೆಟ್ಟ ಸ್ಥಳದಲ್ಲಿಯೇ ಮತ್ತೆ ಮತ್ತೆ ಹೊಸ ಗಿಡಗಳನ್ನು ನೆಡುವುದನ್ನು ಕಾಣುತ್ತಿದ್ದೇವೆ. ಅದರ ಬದಲು ಒಂದು ಬಾರಿ ನೆಟ್ಟ ಗಿಡವನ್ನೇ ಸಂರಕ್ಷಣೆ ಮಾಡಿ ಬೆಳೆಯುವಂತೆ ಮಾಡಿದರೆ, ಹಣ, ಸಮಯ ಉಳಿತಾಯವಾಗುತ್ತದೆ ಎಂಬುದನ್ನು ಸರ್ಕಾರ, ಪರಿಸರ ಪ್ರಿಯರು ಅರಿಯಬೇಕು ಎಂದರು.

‘ಈ ಭೂಮಿಯು ಎಲ್ಲಾ ಜೀವಿಗಳಿಗೆ ಜೇನು; ಈ ಭೂಮಿಗೆ ಎಲ್ಲಾ ಜೀವಗಳು ಕೂಡ ಜೇನು’ ಎಂಬ ಮಾತಿನಂತೆ ಎಲ್ಲ ರಿಗೂ ಆಶ್ರಯ ನೀಡಿರುವ ಭೂಮಿಯ ರಕ್ಷಣೆ ನಮ್ಮೆಲ್ಲರ ಹೊಣೆ. ಒಂದು ಎಕರೆ ಜಾಗದಲ್ಲಿ ಗಿಡ-ಮರಗಳನ್ನು ಬೆಳೆಸಿದರೆ 18 ಜನರು ಒಂದು ವರ್ಷ ಉಸಿರಾಡ ಬಹುದು ಎಂದರು. ಪರಿಸರ ಮಾಲಿನ್ಯ ದಿಂದಾಗಿ ವಾತಾವರಣದಲ್ಲಿ ಬದಲಾವಣೆ ಗಳಾಗುತ್ತಿವೆ. ಮಾರಣಾಂತಿಕ ಕಾಯಿಲೆ ಗಳು ಬರುತ್ತಿವೆ ಎಂದು ಎಚ್ಚರಿಸಿದರು.

ಕ್ರಿಯಾತ್ಮಕ ಜೀವಿಯಾಗಿರುವ ಮನುಷ್ಯ ನಿಂದ ಮಾತ್ರ ಭೂಮಿ ಸಂರಕ್ಷಣೆ ಸಾಧ್ಯ. ಈ ನಿಟ್ಟಿನಲ್ಲಿ ಕೌಶಲಾಧಾರಿತ ಶಿಕ್ಷಣ, ಪೌಷ್ಟಿಕ ಆಹಾರ, ಉತ್ತಮ ಔಷಧಗಳು ಮುಖ್ಯ. ವಿಪರ್ಯಾಸವೆಂದರೆ ಇಂದು ನಾವು ಬಳಸುವ ಎಲ್ಲಾ ಬಗೆಯ ವಸ್ತುಗಳ ಗುಣಮಟ್ಟ ಕುಸಿದಿದೆ. ದೇಶದ ಆರ್ಥಿಕ ತೆಯೂ ಕುಂಠಿತವಾಗುತ್ತಿರುವುದು ದುರದೃಷ್ಟ ಕರ ಎಂದು ವಿಷಾದಿಸಿದರು.

`ಭೂಮಿಯನ್ನು ಹಾಳು ಮಾಡಿದ್ದಾರೆ’ ಎಂದು ನಮ್ಮನ್ನು ಮೊಮ್ಮಕ್ಕಳು ಬೈಯ್ಯ ಬಾರದು ಎಂದರೆ ಇಂದಿನಿಂದಲೇ ಸಾಧ್ಯ ವಾದಷ್ಟು ಪರಿಸರವನ್ನು ಉಳಿಸುವತ್ತ ಗಮನ ಹರಿಸಬೇಕು. ಪರಿಸರ ರಕ್ಷಣೆ ಸಾಮಾಜಿಕ ಜವಾಬ್ದಾರಿ ಆಗಿದೆ. ಭೂಮಿ ಯಂತೆ ಬೇರೆ ಗ್ರಹಗಳೂ ಇವೆ. ಅಲ್ಲಿಯೂ ಜೀವಿಗಳು ವಾಸವಾಗಿವೆ ಎಂಬುದನ್ನು ಓದಿ ಅಥವಾ ಇತರರಿಂದ ಕೇಳಿ ತಿಳಿದಿದ್ದೇವೆ. ಆದರೆ, ಅಲ್ಲಿರುವವರಿಗೆ ಭೂಮಿಯನ್ನು ಅದೇ ರೀತಿ ಭೂಮಿಯಲ್ಲಿರುವ ಬೇರೆ ಗ್ರಹ ಗಳಲ್ಲಿರುವವರನ್ನು ಸಂಪರ್ಕಿಸಲು ಸಾಧ್ಯವಾ ಗಿಲ್ಲ. ಆದ್ದರಿಂದ ಇರುವುದನ್ನು ಚೆನ್ನಾಗಿ ನೋಡಿಕೊಂಡರೆ ಬೇರೆಯದ್ದು ಏಕೆ ಬೇಕು? ಎಂಬ ಪ್ರಶ್ನೆ ಮುಂದಿಟ್ಟರು.

ಗ್ರೀಸ್ ದೇಶದಲ್ಲಿ ಮುಖ ತೊಳೆಯಲು ಮತ್ತು ಕುಡಿಯಲು ಮಾತ್ರ ನೀರನ್ನು ಕೊಡಲಾಗುತ್ತದೆ. ಸ್ನಾನ ಮಾಡಲು ನೀರು ಕೊಡುವುದಿಲ್ಲ. ನಾವು ನೀರನ್ನು ವ್ಯವಸ್ಥಿತ ವಾಗಿ ಬಳಸದಿದ್ದರೆ ಇಲ್ಲಿಯೂ ಗ್ರೀಸ್ ದೇಶದಲ್ಲಿರುವ ಪರಿಸ್ಥಿತಿ ನಿರ್ಮಾಣವಾಗ ಬಹುದು. ನಾವು ಇಂದಿನಿಂದಲೇ ಮನಸ್ಸು ಮಾಡಿದರೆ ಶೇ.30ರಷ್ಟು ನೀರನ್ನು ಉಳಿಸ ಬಹುದು. ಕ್ರಿಕೆಟರ್ ಸಚಿನ್ ಕೂಡ ಸ್ನಾನಕ್ಕೆ ಒಂದೇ ಬಕೆಟ್ ನೀರು ಬಳಸುತ್ತಾರೆ ಎಂದು ಪತ್ರಿಕೆಯೊಂದರ ವರದಿಯಲ್ಲಿ ಓದಿದ್ದೆ. ನೀರಿನ ಮಿತ ಬಳಕೆ ಮಾತ್ರ ಮುಂದಿನ ಪೀಳಿಗೆಗೂ ನೀರು ಉಳಿಯುವಂತೆ ಮಾಡುತ್ತದೆ ಎಂದು ಅರಿವು ಮೂಡಿಸಲೆತ್ನಿಸಿದರು.

ವಿಶ್ವದಲ್ಲಿ ಅತಿಹೆಚ್ಚು ಪರಿಸರ ನಾಶ ಮಾಡುತ್ತಿರುವ ದೇಶಗಳೆಂದರೆ ಅಮೆರಿಕ ಮತ್ತು ಚೀನಾ. ಆದರೆ ಈ ಮಾತನ್ನು ಆ ದೇಶಗಳು ಒಪ್ಪಿಕೊಳ್ಳುತ್ತಿಲ್ಲ. ಪರಿಸರ ಸಂರ ಕ್ಷಣೆಗಾಗಿ ದುಡ್ಡುಕೊಡುವವನಿಗೆ ಮತ ನೀಡುವ ಬದಲು, ಪರಿಸರ ಉಳಿಸುವವ ರನ್ನು ಗೆಲ್ಲಿಸಬೇಕು. ಬೇರೆ ದೇಶಗಳಿಂದ ಆಹಾರ ಪದಾರ್ಥಗಳನ್ನು ಆಮದು ಮಾಡಿ ಕೊಂಡು ಬಳಸುವ ಬದಲು ಇಲ್ಲಿನ ಪದಾರ್ಥ ಗಳನ್ನೇ ಬಳಸಿದರೆ ಹಣ, ಸಮಯ, ಶಕ್ತಿ ಎಲ್ಲಾ ಉಳಿಯುತ್ತದೆ ಎಂದು ಸಲಹೆ ನೀಡಿ ದರು. ಇನ್‍ಸ್ಟಿಟ್ಯೂಷನ್ ಆಫ್ ಇಂಜಿನಿ ಯರ್ಸ್‍ನ ಮೈಸೂರು ಘಟಕದ ಅಧ್ಯಕ್ಷ ಆರ್.ಸುರೇಶ್, ಕಾರ್ಯದರ್ಶಿ ಡಿ.ಕೆ.ದಿನೇಶ್ ಕುಮಾರ್ ಉಪಸ್ಥಿತರಿದ್ದರು.

ಎಚ್ಚರಿಕೆ
ದಿನಕ್ಕೆ ಒಬ್ಬ ವ್ಯಕ್ತಿ 3 ಸಿಲಿಂಡರ್‍ಗಳಷ್ಟು ಆಮ್ಲಜನಕ ಸೇವನೆ ಮಾಡುತ್ತಾನೆ. ಒಂದು ಸಿಲಿಂಡರ್‍ಗೆ 700 ರೂ. ಆದರೆ ದಿನಕ್ಕೆ 2100 ರೂ.ಗಳಾಗುತ್ತದೆ. ಅದೇ ತಿಂಗಳಿಗೆ 63 ಸಾವಿರ ಮತ್ತು ವರ್ಷಕ್ಕೆ 7.65 ಲಕ್ಷ ರೂ.ಗಳಾಗುತ್ತದೆ. ಅಕಸ್ಮಾತ್ ಗಿಡ-ಮರಗಳು ಇಲ್ಲದಿದ್ದಲ್ಲಿ ಇಷ್ಟೂ ಹಣವನ್ನು ಪಾವತಿಸಿ ಆಮ್ಲಜನಕ ಸೇವನೆ ಮಾಡುವ ಸ್ಥಿತಿ ಇರುತ್ತಿತ್ತು. ಶ್ವಾಸಕೋಶದ ಅರ್ಧ ಭಾಗವೇ ಗಿಡ-ಮರಗಳಾಗಿವೆ. ನೀರು, ಗಾಳಿ ಎಂಬ ಪಂಚಭೂತಗಳನ್ನು ರಕ್ಷಣೆ ಮಾಡದಿದ್ದಲ್ಲಿ ಹಸಿರಾಗಿರುವ ನೆಲ ಮರುಭೂಮಿಯಂತಾಗುವ ಕಾಲ ದೂರವಿಲ್ಲ.
-ಕೆ.ಚಿದಾನಂದಗೌಡ, ವಿಶ್ರಾಂತ ಕುಲಪತಿ