ಮೈಸೂರು ಭಾಗದಲ್ಲಿ ಬಿಜೆಪಿ ಭದ್ರಪಡಿಸಲು ಯಡಿಯೂರಪ್ಪ ಪ್ಲಾನ್

ಬೆಂಗಳೂರು,ಡಿ.30- ಮಂಡ್ಯದಲ್ಲಿ ಬಿಜೆಪಿ ಖಾತೆ ತೆರೆದಿರುವ ಬೆನ್ನಲ್ಲೇ ಮುಖ್ಯಮಂತ್ರಿ ಯಡಿಯೂರಪ್ಪ, ಹಳೇ ಮೈಸೂರು ಭಾಗದಲ್ಲಿ ಬಿಜೆಪಿ ಭದ್ರಗೊಳಿಸಲು ಮುಂದಾಗಿದ್ದಾರೆ.

ಕೆ.ಆರ್ ಪೇಟೆ ಉಪ ಚುನಾವಣೆಯಲ್ಲಿ ಕೆ.ಸಿ.ನಾರಾಯಣಗೌಡರ ಗೆಲುವಿನೊಂಗೆ ಜೆಡಿಎಸ್ ಭದ್ರಕೋಟೆಯಾಗಿದ್ದ ಮಂಡ್ಯದಲ್ಲಿ ಬಿಜೆಪಿ ಖಾತೆ ತೆರೆದಿದೆ. ಇದರೊಂದಿಗೆ ಪಕ್ಷದ ಕಾರ್ಯಕರ್ತರಿಗೆ ಹೊಸ ಚೈತನ್ಯ ಬಂದಂತಾಗಿದೆ. ಈ ಹಿನ್ನೆಲೆಯಲ್ಲಿ ಹಳೇ ಮೈಸೂರು ಭಾಗದಲ್ಲಿ ಪಕ್ಷವನ್ನು ಪ್ರವರ್ಧಮಾನಕ್ಕೆ ತರಲು ಯೋಜನೆ ಮಾಡಿಕೊಳ್ಳಲಾಗಿದೆ. ಈ ನಿಟ್ಟಿನಲ್ಲಿ ಹಾಸನ, ಮಂಡ್ಯ, ಮೈಸೂರು, ಚಿಕ್ಕಬಳ್ಳಾಪುರ, ಕೋಲಾರ ಶಾಸಕರನ್ನು ಸಂಪುಟಕ್ಕೆ ಸೇರಿಸಿ ಕೊಳ್ಳುವ ಮೂಲಕ ಈ ಕ್ಷೇತ್ರಗಳಲ್ಲಿ ಬಿಜೆಪಿಯನ್ನು ಮತ್ತಷ್ಟು ಸದೃಢಗೊಳಿಸಲು ನಿರ್ಧರಿಸಲಾಗಿದೆ. ಹೀಗಾಗಿ ಚಿಕ್ಕಬಳ್ಳಾಪುರ ಶಾಸಕ ಕೆ.ಸುಧಾಕರ್ ಹಾಗೂ ಕೆ.ಆರ್.ಪೇಟೆ ಶಾಸಕ ನಾರಾಯಣಗೌಡ ಅವರಿಗೆ ಸಂಪುಟದಲ್ಲಿ ಸ್ಥಾನ ನೀಡುವ ಸಾಧ್ಯತೆಯಿದೆ.

ಜೆಡಿಎಸ್ ಭದ್ರಕೋಟೆ ಹಾಸನದಲ್ಲಿ ಗೆದ್ದು ಶಾಸಕರಾಗಿರುವ ಪ್ರೀತಮ್ ಗೌಡ ಅವರಿಗೆ ಕೆ.ಆರ್ ಪೇಟೆ ಉಪ ಚುನಾವಣೆಯ ಉಸ್ತುವಾರಿ ನೀಡಲಾಗಿತ್ತು. ಸಿಎಂ ಬಿಎಸ್‍ವೈ ಪುತ್ರ ಬಿ.ವೈ.ವಿಜಯೇಂದ್ರ ಅವರೂ ಕ್ಷೇತ್ರದಲ್ಲೇ ಉಳಿದು, ಸಾಕಷ್ಟು ಶ್ರಮಿಸಿದ್ದರು. ಒಟ್ಟಾರೆಯಾಗಿ ಮುಂದಿನ ಸಾರ್ವತ್ರಿಕ ಚುನಾವಣೆಯಲ್ಲಿ ಹಳೇ ಮೈಸೂರು ಪ್ರಾಂತ್ಯದಲ್ಲಿ 20 ಕ್ಷೇತ್ರದಲ್ಲಿ ಗೆಲ್ಲುವ ಲೆಕ್ಕಾಚಾರದೊಂದಿಗೆ ಸಿಎಂ ಯಡಿಯೂರಪ್ಪ ಕಾರ್ಯತಂತ್ರ ರೂಪಿಸುತ್ತಿದ್ದಾರೆ.