ಮೈಸೂರಿನ ಬಾಲಕ ಇಸ್ರೋದಲ್ಲಿ ಯುವ ವಿಜ್ಞಾನಿ!

ಮೈಸೂರು,ಜೂ.26-ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೋ) ದೇಶದ ಅತ್ಯಂತ ಹೆಮ್ಮೆಯ ಸಂಸ್ಥೆ. ಉಪಗ್ರಹಗಳ ಉಡಾವಣೆ, ಚಂದ್ರಯಾನಕ್ಕೆ ಸಿದ್ಧತೆ, ಮಂಗಳ ಗ್ರಹ ಸಂಶೋಧನೆ ಮೂಲಕ ಅಮೆರಿಕದ ಪ್ರತಿಷ್ಠಿತ `ನಾಸಾ’ಗೇ ಪೈಪೋಟಿ ನೀಡುತ್ತಿರುವ ಸಂಸ್ಥೆ. ಇಂತಹ ಹೆಸರಾಂತ ಸಂಸ್ಥೆಗೆ ಮೈಸೂರಿನ ವಿದ್ಯಾರ್ಥಿ ಯೊಬ್ಬ `ಯುವ ವಿಜ್ಞಾನಿ’ಯಾಗಿ ಆಯ್ಕೆಯಾಗಿದ್ದು, ಸಾಂಸ್ಕøತಿಕ ನಗರಿಯ ಮುಡಿಗೆ ವಿಶೇಷ ಗರಿ ಸೇರಿಸಿದ್ದಾನೆ.

ಮೈಸೂರಿನ ಎಂ.ಭರತೇಶ್ವರ್ ಇಸ್ರೋದ `ಯುವಿಕಾ’ (ಯುವ ವಿಜ್ಞಾನಿ ಕಾರ್ಯಕ್ರಮ)ಕ್ಕೆ ಸೇರ್ಪಡೆಗೊಳ್ಳುತ್ತಿರುವ ವಿದ್ಯಾರ್ಥಿ. ಜವಾಹರ್ ನವೋದಯ ವಿದ್ಯಾಲಯದ ಪ್ರತಿಭಾವಂತ ವಿದ್ಯಾರ್ಥಿ ಯಾದ ಭರತೇಶ್ವರ್ ಜತೆಗೇ ಕರ್ನಾ ಟಕದ ಇನ್ನೂ ಇಬ್ಬರು ವಿದ್ಯಾರ್ಥಿಗಳ ಇಸ್ರೋದ ಈ ವಿಶೇಷ ವಿದ್ಯಾರ್ಥಿ ಕಾರ್ಯಕ್ರಮಕ್ಕೆ ಆಯ್ಕೆಯಾಗಿದ್ದಾರೆ.

ಬಾಹ್ಯಾಕಾಶ ವಿಜ್ಞಾನ, ತಂತ್ರಜ್ಞಾನ ಕುರಿತು ಎಸ್‍ಎಸ್‍ಎಲ್‍ಸಿ ವಿದ್ಯಾರ್ಥಿಗಳಲ್ಲಿ ಆಸಕ್ತಿ ಹುಟ್ಟುಹಾಕಿ ಅವರನ್ನು ಯುವ ವಿಜ್ಞಾನಿಗಳಾಗಿ ರೂಪಿಸಲೆಂದೇ ಇಸ್ರೋ ಈ ಕಾರ್ಯಕ್ರಮವನ್ನು ವಿನ್ಯಾಸ ಗೊಳಿಸಿದೆ. ಇದಕ್ಕೆ ಸೇರ್ಪಡೆಯಾಗಲು ದೇಶಾದ್ಯಂತದ 108 ವಿದ್ಯಾರ್ಥಿಗಳು ಪ್ರಯತ್ನಿಸಿದ್ದರು.