ಆಲನಹಳ್ಳಿ ಪೊಲೀಸ್ ಠಾಣೆ ವಶಕ್ಕೆ 2.11 ಎಕರೆ ಸರ್ಕಾರಿ ಭೂಮಿ

ಮೈಸೂರು, ಜು.25(ಆರ್‍ಕೆ)- ಮೈಸೂರು ತಾಲೂಕು, ಕಸಬಾ ಹೋಬಳಿ ಆಲನಹಳ್ಳಿ ಗ್ರಾಮದ ಸರ್ವೆ ನಂಬರ್ 158ರಲ್ಲಿ 2.11 ಎಕರೆ ಸರ್ಕಾರಿ ಜಮೀನನ್ನು ತಹಸೀಲ್ದಾರ್ ಟಿ.ರಮೇಶ್ ಬಾಬು, ಆಲನಹಳ್ಳಿ ಪೊಲೀಸ್ ಠಾಣಾ ವಶಕ್ಕೆ ಒಪ್ಪಿಸಿದ್ದಾರೆ.

ಈ ಕುರಿತು ಜು.11ರಂದು ಆಲನಹಳ್ಳಿ ಠಾಣೆ ಇನ್‍ಸ್ಪೆಕ್ಟರ್‍ಗೆ ಪತ್ರ ಬರೆದಿರುವ ಅವರು, ಸದರಿ ಜಮೀನು ಬಸವೇಶ್ವರ ದೇವರ ಹೆಸರಿ ನಲ್ಲಿದ್ದು, ಅದು ಇನಾಂ ರದ್ಧತಿ ಕಾಯ್ದೆ ಪ್ರಕಾರ ಯಾರಿಗೂ ಮಂಜೂ ರಾಗಿಲ್ಲ. ಸದರಿ ಜಮೀನು ಸಂಬಂಧ ಆಲನಹಳ್ಳಿ ಗ್ರಾಮದ ಶಿವರಾಜು, ಚಿನ್ನಮ್ಮ ವಿರುದ್ಧ ಜಿಲ್ಲಾಧಿಕಾರಿಗಳು ಕೋರ್ಟ್‍ನಲ್ಲಿ ಇನಾಂ ರದ್ಧತಿ ಕಾಯ್ದೆಯಡಿ ವಿಚಾರಣೆ ನಡೆಸಿ ಅವರು ಗೇಣಿದಾರರಲ್ಲ ಎಂದು ಪ್ರಕರಣವನ್ನು ವಜಾಗೊಳಿಸಿದ್ದಾರೆಂದು ತಿಳಿಸಿದ್ದಾರೆ. ನಂತರದಲ್ಲಿ ಶಿವರಾಜು, ಚಿನ್ನಮ್ಮ ಹಾಗೂ ಇತರರು ಡಿಸಿ ಆದೇಶದ ವಿರುದ್ಧ ಮೈಸೂರಿನ ಸಿವಿಲ್ ಕೋರ್ಟ್‍ನಲ್ಲಿ ಸಲ್ಲಿಸಿದ್ದ ದಾವೆಯೂ ವಜಾ ಗೊಂಡಿದೆ. ನಂತರವೂ ರಾಜ್ಯ ಉಚ್ಛ ನ್ಯಾಯಾಲಯದಲ್ಲಿ ಮೇಲ್ಮ ನವಿ ಸಲ್ಲಿಸಿದ್ದರಾದರೂ, ಕೋರ್ಟ್ ತಡೆಯಾಜ್ಞೆಯಾಗಲೀ ಅಥವಾ ಯಥಾಸ್ಥಿತಿ ಕಾಪಾಡುವಂತೆಯೂ ಆದೇಶ ನೀಡಿಲ್ಲ ಎಂದು ರಮೇಶ್ ಬಾಬು ಪತ್ರದಲ್ಲಿ ತಿಳಿಸಿದ್ದಾರೆ. ಪ್ರಸ್ತಾವಿತ ಜಮೀನು ಸರ್ಕಾರಕ್ಕೆ ಸೇರಿರುವುದರಿಂದ ಹಾಗೂ ತಿ.ನರಸೀಪುರ ರಾಷ್ಟ್ರೀಯ ಹೆದ್ದಾರಿ ಪಕ್ಕದಲ್ಲಿರುವುದರಿಂದ ಭೂಮಾಫಿಯಾದವರು ಈ ಆಸ್ತಿಯನ್ನು ಕಬಳಿಸುವ ಸಾಧ್ಯತೆ ಇರುವುದರಿಂದ ಅದನ್ನು ಸಂರಕ್ಷಿಸುವ ಉದ್ದೇಶದಿಂದ ಮುಂದಿನ ಆದೇಶದವರೆಗೆ ಜಮೀನನ್ನು ತಮ್ಮ ವಶಕ್ಕೆ ನೀಡಲಾಗಿದೆ ಎಂದು ತಹಸೀಲ್ದಾರ್ ಅವರು ತಿಳಿಸಿದ್ದಾರೆ.