ಕೊಡಗಿನಲ್ಲಿ 4 ಸಾವಿರ ಮಂದಿ ನಾಪತ್ತೆ

ಮಡಿಕೇರಿ: ಕೊಡಗಿನಲ್ಲಿ ಸಂಭವಿಸಿರುವ ಭೂ ಕುಸಿತ ಹಾಗೂ ಪ್ರವಾಹದಿಂದಾಗಿ ಸುಮಾರು 4 ಸಾವಿರ ಮಂದಿ ನಾಪತ್ತೆಯಾಗಿದ್ದಾರೆ ಎಂದು ರಾಜ್ಯ ಸರ್ಕಾರಕ್ಕೆ ಜಿಲ್ಲಾಡಳಿತ ವರದಿ ನೀಡಿದೆ ಎನ್ನಲಾಗಿದೆ. ಗುಡ್ಡಗಳು ಕುಸಿದು, ಪ್ರವಾಹ ಬಂದ ವೇಳೆ ಬಹುತೇಕರು ರಕ್ಷಣೆಗಾಗಿ ಎತ್ತರವಾದ ಬೆಟ್ಟದ ಮೇಲೆ ಹತ್ತಿದ್ದರು. ಮತ್ತೆ ಹಲವರು ತಮಗೆ ತೋಚಿದ ದಿಕ್ಕಿನಲ್ಲಿ ಸಾಗಿ ಪ್ರವಾಹದ ಹೊಡೆತದಿಂದ ತಪ್ಪಿಸಿಕೊಂಡಿದ್ದರು. ಅವರಲ್ಲಿ 4 ಸಾವಿರ ಮಂದಿಯ ವಿವರಗಳು ಲಭ್ಯವಾಗುತ್ತಿಲ್ಲ. ಅವರುಗಳು ಸುರಕ್ಷಿತವಾಗಿ ಹೊರ ಊರುಗಳಲ್ಲಿರುವ ತಮ್ಮ ಸಂಬಂಧಿಕರ ಮನೆ ಸೇರಿರಲೂಬಹುದು ಎಂದು ಅಂದಾಜಿಸಲಾಗಿದೆ.

ಈ ಹಿನ್ನೆಲೆಯಲ್ಲಿ ಕಂದಾಯ ಇಲಾಖೆಯ ಸಿಬ್ಬಂದಿಯೂ ನಾಪತ್ತೆಯಾದವರ ವಿವರಗಳನ್ನು ಕಲೆ ಹಾಕಿ ಅವರ ಪತ್ತೆಗಾಗಿ ಹುಡುಕಾಟ ನಡೆಸುತ್ತಿದೆ ಎಂದು ಹೇಳಲಾಗಿದೆ. ಅದೇ ವೇಳೆ ಜೀವ ಉಳಿಸಿಕೊಳ್ಳುವ ಸಲುವಾಗಿ ಬೆಟ್ಟದ ಮೇಲೆ ಹತ್ತಿರುವವರು ಸುರಕ್ಷಿತ ಸ್ಥಳಕ್ಕೆ ತಲುಪಲಾರದೆ ಪರಿತಪಿಸುತ್ತಿರಬಹುದು. ಅಂತಹವರನ್ನು ಪತ್ತೆ ಹಚ್ಚಲು ಕೊಡಗಿನಲ್ಲಿ ಇದೇ ಮೊದಲ ಬಾರಿಗೆ ಡ್ರೋನ್ ಕ್ಯಾಮರಾ ಬಳಸಲು ನಿರ್ಧರಿಸಲಾಗಿದೆ. ಉತ್ತರ ಕರ್ನಾಟಕ ಭಾಗದಿಂದ 8 ಡ್ರೋನ್ ಕ್ಯಾಮರಾಗಳನ್ನು ಜಿಲ್ಲೆಗೆ ತರಿಸಿಕೊಳ್ಳಲು ಸಿದ್ಧತೆಗಳು ನಡೆದಿದೆ. ಈ ಡ್ರೋನ್ ಕ್ಯಾಮರಾಗಳ ಬಳಕೆಯಿಂದಾಗಿ ನಾಪತ್ತೆಯಾದವರ ಪತ್ತೆಗೆ ಅನುಕೂಲವಾಗಲಿದೆ ಎಂಬ ಮಾತುಗಳು ಕೇಳಿಬರುತ್ತಿವೆ.

ಈ ಮಧ್ಯೆ ಸ್ಥಳೀಯ ಯುವಕರ ತಂಡವೊಂದು ಮಕ್ಕಂದೂರು ಭಾಗದಲ್ಲಿ ಡ್ರೋನ್ ಕ್ಯಾಮರಾ ಮೂಲಕ ಭೂ ಕುಸಿತ ಹಾಗೂ ನೆರೆ ಪ್ರದೇಶಗಳ ದೃಶ್ಯಗಳನ್ನು ಸೆರೆ ಹಿಡಿದಿದ್ದು, ಅವು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿವೆ. ಇದೇ ಮಾದರಿಯಲ್ಲಿ ಜಿಲ್ಲಾಡಳಿತವೂ ಡ್ರೋನ್ ಕ್ಯಾಮರಾ ಸಹಾಯದಿಂದ ಬೆಟ್ಟಗಳ ಮೇಲೆ ಆಶ್ರಯ ಪಡೆದು ಸುರಕ್ಷಿತ ಸ್ಥಳಕ್ಕೆ ಬರಲಾಗದವರ ಪತ್ತೆ ಮಾಡಲು ಚಿಂತನೆ ನಡೆಸಿದೆ.