ಮರದ ಭಾರೀ ಕೊಂಬೆ ಬಿದ್ದು ಜೀಪ್ ಚಾಲಕನಿಗೆ ಗಂಭೀರ ಗಾಯ

ಬಾವಲಿ: ಚಲಿಸುತ್ತಿದ್ದ ಜೀಪ್ ಮೇಲೆ ಮರವೊಂದರ ಕೊಂಬೆ ಬಿದ್ದು ಚಾಲಕ ಗಂಭೀರವಾಗಿ ಗಾಯಗೊಂಡಿರುವ ಘಟನೆ ಮಂಗಳವಾರ ಸಂಜೆ ಹೆಚ್.ಡಿ. ಕೋಟೆ-ಮಾನಂದವಾಡಿ ರಸ್ತೆಯ ನಾಗರಹೊಳೆ ಅಭಯಾರಣ್ಯ ವ್ಯಾಪ್ತಿಯ ಮದ್ದೂರು ಗೇಟ್ ಬಳಿ ನಡೆದಿದೆ.

ಗಾಯಗೊಂಡವರನ್ನು ಕೇರಳದ ಕಲ್ಪಟ್ಟೆ ನಿವಾಸಿ ನಿಸಾರ್ ಅಲಿಯಾಸ್ ನಾಸಿರ್(35) ಎಂದು ಗುರುತಿಸಲಾಗಿದೆ. ನಿಸಾರ್ ತನ್ನ ಜೀಪ್(ಕೆಎಲ್.11, ಬಿ.7821)ನಲ್ಲಿ ಇಂದು ಸಂಜೆ 4.10ರಲ್ಲಿ ಹೆಚ್.ಡಿ.ಕೋಟೆಯಿಂದ ಅಂತರಸಂತೆ ಮಾರ್ಗವಾಗಿ ಕೇರಳಕ್ಕೆ ಹೋಗುತ್ತಿದ್ದಾಗ ನಾಗರಹೊಳೆ ಅಭಯಾರಣ್ಯ ಮೂಲಕ ಹಾದು ಹೋಗುವ ಮಾನಂದವಾಡಿ ರಸ್ತೆಯ ಮದ್ದೂರು ಗೇಟ್ ಬಳಿ ಹಠಾತ್ತನೆ ಮರವೊಂದರ ದೊಡ್ಡ ಗಾತ್ರದ ಕೊಂಬೆಯೊಂದು ಜೀಪ್ ಮೇಲೆ ಬಿದ್ದಿದೆ. ಜೀಪ್ ಚಾಲನೆ ಮಾಡುತ್ತಿದ್ದ ನಿಸಾರ್ ತಲೆಯ ಮೇಲೆ ಕೊಂಬೆ ಬಿದ್ದ ಪರಿಣಾಮ ಗಂಭೀರವಾದ ಗಾಯವಾಗಿದೆ. ಮಳೆ, ಗಾಳಿಯಿದ್ದ ಕಾರಣ ಮರ ಬಿದ್ದಿದೆ.

ಘಟನೆಯನ್ನು ಕಂಡ ದಾರಿ ಹೋಕರು ಅರಣ್ಯ ಪ್ರದೇಶದ ನಡುವೆ ಘಟನೆ ಸಂಭವಿಸಿದ್ದರಿಂದ ನೆರವಿಗೆ ಬರಲು ಭಯಪಟ್ಟಿದ್ದಾರೆ. ವಿಷಯ ತಿಳಿದು ಸ್ಥಳಕ್ಕೆ ಬಂದ ಅಂತರಸಂತೆ ವಲಯದ ಆರ್‍ಎಫ್‍ಒ ವಿನಯ್ ಹಾಗೂ ಸಿಬ್ಬಂದಿ ನಿತ್ರಾಣ ರಾಗಿದ್ದ ಚಾಲಕ ನಿಸಾರ್ ಅವರನ್ನು ಹೆಚ್.ಡಿ.ಕೋಟೆಯ ಸಾರ್ವಜನಿಕ ಆಸ್ಪತ್ರೆಗೆ ದಾಖಲಿಸಿ ಮಾನವೀಯತೆ ಮೆರೆದಿ ದ್ದಾರೆ. ಬಳಿಕ ನಿಸಾರ್ ಬಳಿಯಿದ್ದ ಮೊಬೈಲ್ ಮೂಲಕ ಅವರ ಪೋಷಕರನ್ನು ಸಂಪರ್ಕಿಸಿ ಮಾಹಿತಿ ನೀಡಿದ್ದಾರೆ. ಸಂಜೆ ಹೆಚ್.ಡಿ .ಕೋಟೆಗೆ ಆಗಮಿಸಿದ ಅವರ ಪೋಷಕರು ಹೆಚ್ಚಿನ ಚಿಕಿತ್ಸೆಗಾಗಿ ಮೈಸೂರಿನ ಖಾಸಗಿ ಆಸ್ಪತ್ರೆಗೆ ಕರೆತಂದಿದ್ದಾರೆ. ಈ ಸಂಬಂಧ ಅರಣ್ಯ ಇಲಾಖೆ ಅಧಿಕಾರಿಗಳು ನೀಡಿದ ಮಾಹಿತಿಯ ಮೇರೆಗೆ ಹೆಚ್.ಡಿ.ಕೋಟೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.