ಬೆಂಗಳೂರಿನಲ್ಲೇ ಏರೋ ಇಂಡಿಯಾ 2019

ಬೆಂಗಳೂರು: ಕರ್ನಾಟಕ ರಾಜ್ಯದ ಪ್ರತಿಷ್ಠೆ ಎಂದೇ ಹೇಳಲಾಗುತ್ತಿರುವ ‘ಏರೋ ಇಂಡಿಯಾ 2019’ನ್ನು ಬೆಂಗಳೂರಿನಲ್ಲಿಯೇ ನಡೆಸಲಾಗುತ್ತದೆ ಎಂದು ಕೇಂದ್ರ ಸರ್ಕಾರ ಶನಿವಾರ ಸ್ಪಷ್ಟಪಡಿಸಿದೆ.

ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಪ್ರತೀವರ್ಷ ನಡೆಸಲಾಗುತ್ತಿದ್ದ ವೈಮಾನಿಕ ಪ್ರದರ್ಶನ ಏರೋ ಇಂಡಿಯಾವನ್ನು ಈ ಬಾರಿ ಉತ್ತರ ಪ್ರದೇಶದ ಲಖನೌಗೆ ಸ್ಥಳಾಂತರ ಮಾಡಲಾಗುತ್ತಿದೆ ಎಂಬ ಮಾತುಗಳು ಕೇಳಿ ಬಂದಿದ್ದವು. ಇದಕ್ಕೆ ರಾಜ್ಯ ತೀವ್ರ ವಿರೋಧ ವ್ಯಕ್ತಪಡಿಸಿತ್ತು. ಇದಕ್ಕೆ ಇಂಬು ನೀಡುವಂತೆ ಇತ್ತೀಚೆಗಷ್ಟೇ ಬೆಂಗಳೂರಿಗೆ ಭೇಟಿ ನೀಡಿದ್ದ ರಕ್ಷಣಾ ಸಚಿವೆ ಸೀತಾರಾಮನ್ ಅವರು ಕೂಡ ಹೇಳಿಕೆಯನ್ನು ನೀಡಿದ್ದರು. ಏರೋ ಇಂಡಿಯಾ ಆಯೋಜಿಸಲು ಅವಕಾಶ ನೀಡುವಂತೆ ಸಾಕಷ್ಟು ರಾಜ್ಯಗಳು ಮನವಿ ಮಾಡಿಕೊಂಡಿವೆ. ಆದರೆ, ಈ ಬಗ್ಗೆ ಈ ವರೆಗೂ ದಿನಾಂಕವಾಗಲೀ ಅಥವಾ ಸ್ಥಳವನ್ನಾಗಲೀ ನಿರ್ಧರಿಸಿಲ್ಲ ಎಂದು ಹೇಳಿದ್ದರು. ಇದಕ್ಕೆ ರಾಜ್ಯದಾದ್ಯಂತ ತೀವ್ರ ವಿರೋಧಗಳು ಹಾಗೂ ಪ್ರತಿಭಟನೆಗಳು ನಡೆದಿದ್ದವು.

ಈ ನಡುವಲ್ಲೇ ಇದೀಗ ಸ್ಪಷ್ಟನೆ ನೀಡಿರುವ ರಕ್ಷಣಾ ಸಚಿವಾಲಯ, ಏರೋ ಇಂಡಿಯಾ 2019ರ ವೈಮಾನಿಕ ಪ್ರದರ್ಶನ ಕಾರ್ಯಕ್ರಮ ಬೆಂಗಳೂರಿ ನಲ್ಲಿಯೇ ಮುಂಬರುವ ಫೆ.20-24ರಂದು ಆಯೋಜನೆ ಮಾಡಲು ನಿರ್ಧರಿಸಲಾಗಿದೆ.

ಕಾರ್ಯಕ್ರಮ ಯಶಸ್ವಿಗೊಳಿಸಲು ಹಾಗೂ ಪರಿಣಾಮ ಕಾರಿಯಾಗಿ ಪ್ರದರ್ಶನಗೊಳಿಸಲು ರಕ್ಷಣಾ ಇಲಾಖೆ ಬದ್ಧವಾಗಿದೆ ಎಂದು ಹೇಳಿದೆ. 5 ದಿನಗಳ ಕಾಲ ಕಾರ್ಯ ಕ್ರಮವನ್ನು ಆಯೋಜಿಸಲಾಗಿದ್ದು, ಕಾರ್ಯಕ್ರಮಕ್ಕೆ ಸಾಕಷ್ಟು ಜಾಗತಿಕ ನಾಯಕರು ಹಾಗೂ ವಿಮಾನಯಾನ ಅಂತರಿಕ್ಷಯಾನ ಉದ್ಯಮದ ಹಲವಾರು ಹೂಡಿಕೆದಾರರು ಪಾಲ್ಗೊಳ್ಳಲಿದ್ದಾರೆ.