ಇನ್ನೂ 15 ಕೋರ್ಸ್‍ಗೆ ವಾರದಲ್ಲಿ ಯುಜಿಸಿಯಿಂದ ಅನುಮತಿ

ಮೈಸೂರು:  ತಾಂತ್ರಿಕೇತರ 17 ಕೋರ್ಸುಗಳಿಗೆ ರಾಜ್ಯದೊಳಗೆ ವಿದ್ಯಾರ್ಥಿಗಳಿಗೆ ಪ್ರವೇಶಾತಿ ಪ್ರಕ್ರಿಯೆ ಆರಂಭಿಸಿರುವ ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾನಿಲಯಕ್ಕೆ ಉಳಿದ 15 ಕೋರ್ಸುಗಳಿಗೂ ವಾರದೊಳಗೆ ಯುಜಿಸಿ ಅನುಮತಿ ನೀಡಲಿದೆ ಎಂದು ಕುಲಪತಿ ಪ್ರೊ. ಡಿ. ಶಿವಲಿಂಗಯ್ಯ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಈ ಸಂಬಂಧ `ಮೈಸೂರು ಮಿತ್ರ’ನಿಗೆ ಮಾಹಿತಿ ನೀಡಿದ ಅವರು ಮಂಗಳವಾರ ಕುಲಸಚಿವ ರಮೇಶ್, ಯುಜಿಸಿ ಸಮನ್ವಯಾಧಿಕಾರಿ ಡಾ. ಎನ್.ಜಿ. ರಾಜು ಅವರೊಂದಿಗೆ ತಾವು ನವದೆಹಲಿಯಲ್ಲಿ ನಡೆದ ಸಭೆಯಲ್ಲಿ ಹಾಜರಿದ್ದು, 15 ಕೋರ್ಸು ಗಳನ್ನು ನಡೆಸಲು ತಮ್ಮಲ್ಲಿರುವ ಮೂಲ ಸೌಲಭ್ಯಗಳು, ಪಠ್ಯಕ್ರಮ, ಬೋಧನಾ ಸಾಮಗ್ರಿ, ಶಿಕ್ಷಕರು, ಪರೀಕ್ಷಾಂಗ ಹಾಗೂ ಮೌಲ್ಯಮಾಪನ ಪ್ರಕ್ರಿಯೆ ಕುರಿತಂತೆ ಸಮಗ್ರ ವರದಿಯನ್ನು ಅಗತ್ಯ ದಾಖಲೆಗಳ ಸಮೇತ ಸಲ್ಲಿಸಿ ಪವರ್ ಪಾಯಿಂಟ್ ಪ್ರೆಸೆಂಟೇಷನ್ ನೀಡಿ ಅಧಿಕಾರಿಗಳಿಗೆ ಮನವರಿಕೆ ಮಾಡಿಕೊಟ್ಟಿದ್ದೇವೆ ಎಂದರು.

ಯುಜಿಸಿ ಕೇಳಿರುವ ಮಾಹಿತಿ ಹಾಗೂ ದಾಖಲೆಗಳನ್ನು ಒದಗಿಸಿ ಉನ್ನತ ಶಿಕ್ಷಣದ ಬಗ್ಗೆ ತಮ್ಮ ಸಿದ್ಧತೆಗಳ ಬಗ್ಗೆ ವಿವರಿಸಿದ್ದೇವೆ. ಅವರಿಗೂ ವಸ್ತುಸ್ಥಿತಿಯ ಅರಿವಾಗಿದ್ದು, ಪ್ರಸಕ್ತ ಶೈಕ್ಷಣಿಕ ಸಾಲಿನಿಂದಲೇ ತಾವು ಕೇಳಿರುವ ಇನ್ನೂ 15 ಕೋರ್ಸುಗಳ ಪ್ರವೇಶಾತಿಗೆ ಅನುಮತಿ ನೀಡುವ ಬಗ್ಗೆ ಸಕಾರಾತ್ಮಕ ಪ್ರತಿಕ್ರಿಯೆ ನೀಡಿದ್ದಾರೆ ಎಂದೂ ಪ್ರೊ. ಶಿವಲಿಂಗಯ್ಯ ತಿಳಿಸಿದರು. ನಂತರ ಇಂದು ಬೆಳಿಗ್ಗೆ ಬೆಂಗಳೂರಿನ ರಾಜಭವನದಲ್ಲಿ ರಾಜ್ಯದ ವಿಶ್ವವಿದ್ಯಾನಿಲಯಗಳ ಕುಲಾಧಿಪತಿಗಳೂ ಆದ ರಾಜ್ಯಪಾಲ ವಜುಭಾಯಿ ರೂಢಾಬಾಯಿ ವಾಲಾರನ್ನು ಭೇಟಿ ಮಾಡಿ ಮಂಗಳವಾರ ಯುಜಿಸಿಯಲ್ಲಿ ನಡೆದ ವಿಷಯಗಳನ್ನು ವಿವರಿಸಿದೆವು. ಆದರೂ ಯುಜಿಸಿ ಮುಖ್ಯಸ್ಥರೊಂದಿಗೆ ಮಾತನಾಡಿ ಅನುಮತಿ ಕೊಡಿಸುವ ವಿಶ್ವಾಸ ವ್ಯಕ್ತಪಡಿಸಿದ್ದಾರೆ ಎಂದು ಅವರು ತಿಳಿಸಿದರು. ಈ ಬೆಳವಣಿಗೆಗಳಿಂದ ಇನ್ನೊಂದು ವಾರ ಅಥವಾ 10 ದಿನದೊಳಗಾಗಿ ಉಳಿದ 15 ಕೋರ್ಸುಗಳಿಗೂ ಯುಜಿಸಿ ಅನುಮತಿ ನೀಡುವುದೆಂಬ ನಿರೀಕ್ಷೆ ಇದೆ ಎಂದೂ ಪ್ರೊ. ಶಿವಲಿಂಗಯ್ಯ ನುಡಿದರು.