ಬಿಜೆಪಿ ಅಭ್ಯರ್ಥಿ ಪರ ಬಿಎಸ್‍ವೈ ಭರ್ಜರಿ ಪ್ರಚಾರ

ಮಂಡ್ಯ: ಲೋಕಸಭಾ ಉಪ ಚುನಾವಣೆಯಲ್ಲಿ ಸ್ಪರ್ಧಿಸಿರುವ ಬಿಜೆಪಿ ಅಭ್ಯರ್ಥಿ ಡಾ.ಸಿದ್ದರಾಮಯ್ಯ ಪರ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ನೇತೃತ್ವದ ನಾಯಕರು ಮಂಗಳವಾರ ಮಂಡ್ಯ ಲೋಕಸಭಾ ಕ್ಷೇತ್ರದ ವಿವಿಧೆಡೆ ಭರ್ಜರಿ ಪ್ರಚಾರ ನಡೆಸಿದರು.

ಶ್ರೀರಂಗಪಟ್ಟಣ, ಪಾಂಡವಪುರ, ಕೆ.ಆರ್. ಪೇಟೆ ಮತ್ತು ಕೆ.ಆರ್.ನಗರ ಸೇರಿದಂತೆ ವಿವಿಧೆಡೆಗಳಲ್ಲಿ ಬಿ.ಎಸ್.ಯಡಿಯೂರಪ್ಪ, ಶಾಸಕರಾದ ಆರ್.ಅಶೋಕ್, ಚಿತ್ರನಟಿ ತಾರಾ ಸೇರಿದಂತೆ ಹಲವು ನಾಯಕರು ಬಹಿರಂಗ ಪ್ರಚಾರ ನಡೆಸಿದರು.

ಶ್ರಿರಂಗಪಟ್ಟಣ: ಜನ್ಮಭೂಮಿ ಮಂಡ್ಯಜಿಲ್ಲೆ, ಕರ್ಮಭೂಮಿ ಶಿವಮೊಗ್ಗ. ಆದರೆ, ಈ ನನ್ನ ಜನ್ಮಭೂಮಿ ಮಂಡ್ಯದಿಂದ ಒಬ್ಬನೇ ಒಬ್ಬ ಬಿಜೆಪಿಯ ಅಭ್ಯರ್ಥಿಯನ್ನು ಲೋಕಸಭೆ ಅಥವಾ ವಿಧಾನಸಭೆಗೆ ಕಳುಹಿಸಲಾಗಿಲ್ಲವಲ್ಲ ಎಂಬ ಕೊರಗು ನನ್ನಲ್ಲಿದೆ. ಈ ನನ್ನ ಕೊರಗನ್ನು ಈ ಬಾರಿ ಯಾದರೂ ಈಡೇರಿಸುತ್ತೀರೆಂಬ ಕನಸು ನನ್ನದಾಗಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ತಿಳಿಸಿದರು.

ಪಟ್ಟಣದ ಖಾಸಗಿ ಬಸ್ ನಿಲ್ದಾಣದಲ್ಲಿ ಲೋಕಸಭಾ ಉಪಚುನಾವಣೆಯ ಬಹಿರಂಗ ಪ್ರಚಾರದಲ್ಲಿ ಪಾಲ್ಗೊಂಡು ಅವರು ಮಾತನಾಡಿ ದರು. ಜಿಲ್ಲೆಯಲ್ಲಿ ಕಳೆದ ಐದಾರು ತಿಂಗಳಿಂದ 195ಕ್ಕೂ ಹೆಚ್ಚು ರೈತರು ಆತ್ಮಹತ್ಯೆ ಮಾಡಿ ಕೊಂಡಿದ್ದಾರೆ. ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ರೈತರ ಸಾಲಮನ್ನಾ ಮಾಡಿದ ಬಳಿಕವೂ 25 ಆತ್ಮಹತ್ಯೆಗಳು ನಡೆದಿವೆ. ಇದಕ್ಕೆ ಹೆಚ್.ಡಿ.ಕುಮಾರಸ್ವಾಮಿ ನಡೆಸುತ್ತಿರುವ ರೈತವಿರೋಧಿ ಆಡಳಿತವೇ ಕಾರಣ ಎಂದು ಹರಿಹಾಯ್ದರು.

ಜಿಲ್ಲೆಯ ಸಮಸ್ಯೆಗಳಿಗೆ ನೇರವಾಗಿ ಸಂಸತ್ತಿನಲ್ಲಿ ಚರ್ಚಿಸುವ ಶಕ್ತಿಯುಳ್ಳ, ತಿಳಿವಳಿಕೆ ಮತ್ತು ಭಾಷಾಜ್ಞಾನವುಳ್ಳ, ರಾಜಕೀಯ ಹಿನ್ನೆಲೆಯುಳ್ಳ ಡಾ.ಸಿದ್ದರಾಮಯ್ಯ ಅವರನ್ನು ಜಿಲ್ಲೆಯ ಜನರು ಆಶೀರ್ವದಿಸಿ, ಬಿಜೆಪಿಗೆ ಶಕ್ತಿ ನೀಡಿ ಎಂದು ಮನವಿ ಮಾಡಿದರು.

ಮಾಜಿ ಸಚಿವ ಆರ್.ಅಶೋಕ್ ಮಾತನಾಡಿ, ರಾಜಕೀಯ ನೆಲೆಯಿಲ್ಲದೆ ಪಕ್ಷಾಂತರಿಯಾಗಿದ್ದ ಎಲ್.ಆರ್.ಶಿವರಾಮೇಗೌಡರಿಗೆ ಟಿಕೆಟ್ ನೀಡಲಾಗಿದೆ. ವರಿಷ್ಠರನ್ನೇ ನಂಬಿದ್ದ ಲಕ್ಷ್ಮೀ ಅಶ್ವಿನ್‍ಕುಮಾರ್ ಎನ್ನುವ ಹೆಣ್ಣುಮಗಳಿಗೆ ಟಿಕೆಟ್ ತಪ್ಪಿಸಿ ಕಣ್ಣೀರು ಹಾಕುವಂತೆ ಮಾಡಿದ್ದಾರೆ. ಎಚ್.ಡಿ.ದೇವೇಗೌಡ ಮತ್ತು ಮಾಜಿ ಸಿಎಂ ಸಿದ್ದರಾಮಯ್ಯ ಇಬ್ಬರು 12 ವರ್ಷದ ಬಳಿಕ ಪರಸ್ಪರ ಒಬ್ಬರಿಗೊಬ್ಬರು ಆಲಿಂಗಿಸಿ ದೋಸ್ತಿಗಳ ನಾಟಕವಾಡುತ್ತಿ ದ್ದಾರೆ. ಆದರೆ, ಅದು ಮಹಾಭಾರತದ ಧೃತ ರಾಷ್ಟ್ರನ ಆಲಿಂಗನದಂತೆ, ಪ್ರಸ್ತುತ ರಾಜಕೀಯ ದಲ್ಲಿ ಕಾಂಗ್ರೆಸ್-ಜೆಡಿಎಸ್ ಕಪಿಮುಷ್ಠಿಯಲ್ಲಿ ಸಿಲುಕಿ ನರಳಾಡುತ್ತಿದ್ದು, ರಾಜ್ಯದಲ್ಲಿ ಮತ್ತು ರಾಷ್ಟ್ರದಲ್ಲಿ ದಂಡನಾಯಕನಿಲ್ಲದೆ ಪರದಾಡು ತ್ತಿವೆ ಎಂದು ಲೇವಡಿ ಮಾಡಿದರು.

ವೇದಿಕೆಯಲ್ಲಿ ಪಕ್ಷದ ಚುನಾವಣಾ ಅಭ್ಯರ್ಥಿ ಡಾ.ಸಿದ್ದರಾಮಯ್ಯ, ಶಾಸಕರಾದ ತಾರಾ, ಸಿ.ಎಸ್.ನಿರಂಜನ್‍ಕುಮಾರ್, ಮುಖಂಡರಾದ ಹೊನ್ನಪ್ಪ, ಅಶ್ವತ್ ನಾರಾ ಯಣ್, ಕೆ.ಎಸ್.ನಂಜುಂಡೇಗೌಡ, ತಾಲೂಕು ಅಧ್ಯಕ್ಷ ಟಿ.ಶ್ರೀಧರ್, ಉಪಾಧ್ಯಕ್ಷ ಪಿಹಳ್ಳಿ ರಮೇಶ್ ಸೇರಿ ಇತರರು ಹಾಜರಿದ್ದರು.

ಪಾಂಡವಪುರ: ಪಟ್ಟಣ ಹಳೇಬಸ್ ನಿಲ್ದಾಣದಲ್ಲಿ ಮಧ್ಯಾಹ್ನ ನಡೆದ ಬಹಿರಂಗ ಪ್ರಚಾರ ಸಭೆಯನ್ನು ಉದ್ಘಾಟಿಸಿ ಮಾತ ನಾಡಿದ ಬಿ.ಎಸ್.ಯಡಿಯೂರಪ್ಪ ಅವರು, ಜಿಲ್ಲೆಯ ಜೆಡಿಎಸ್ ಅಭ್ಯರ್ಥಿ ಶಿವರಾಮೇ ಗೌಡರಿಗಿಂತ ಬಿಜೆಪಿ ಅಭ್ಯರ್ಥಿ ಡಾ.ಸಿದ್ದ ರಾಮಯ್ಯ ಎಲ್ಲಾ ರೀತಿಯಲ್ಲೂ ಉತ್ತಮ ರಾಗಿದ್ದು ಈ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿ ಗೆಲುವು ನಿಶ್ಚಿತ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ತಾಲೂಕಿನ ಬೇಬಿ ಬೆಟ್ಟದ ಕಾವಲು ಪ್ರದೇಶ ದಲ್ಲಿ ನಡೆಯುತ್ತಿರುವ ಅಕ್ರಮ ಕಲ್ಲು ಗಣಿಗಾರಿಕೆಯಿಂದ ಪಕ್ಕದ ಕೆಆರ್‍ಎಸ್ ಅಣೆಕಟ್ಟೆಗೆ ಅಪಾಯವಿರುವುದರಿಂದ ಗಣಿ ಗಾರಿಕೆಯನ್ನು ಸಂಪೂರ್ಣವಾಗಿ ಸ್ಥಗಿತಗೊಳಿಸುವ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗುವುದು. ಈ ಹಿಂದೆಯೂ ಸಹ ಬಿಜೆಪಿ ಬೇಬಿಬೆಟ್ಟದಿಂದ ಪಾಂಡವಪುರ ತಾಲೂಕು ಕಚೇರಿಯವರೆಗೆ ಪಾದಯಾತ್ರೆ ನಡೆಸಿತ್ತು. ತಕ್ಷಣ ಅಕ್ರಮ ಗಣಿಗರಿಕೆ ಸ್ಥಗಿತಗೊಳಿಸದಿದ್ದರೆ ಉಗ್ರವಾದ ಹೋರಾಟವನ್ನು ನಡೆಸ ಬೇಕಾಗುತ್ತದೆ ಎಂದು ಎಚ್ಚರಿಸಿದರು.

ವೇದಿಕೆಯಲ್ಲಿ ಶಾಸಕರಾದ ನಿರಂಜನ್ ಕುಮಾರ್, ನಾಗೇಂದ್ರ, ಬಿಜೆಪಿ ರಾಜ್ಯ ಕಾರ್ಯದರ್ಶಿ ರಾಜೇಂದ್ರ, ಮೈಸೂರು ಮಾಜಿ ಮಹಾಪೌರ ಸಂದೇಶ್‍ಸ್ವಾಮಿ, ಬಿಜೆಪಿ ಜಿಲ್ಲಾಧ್ಯಕ್ಷ ನಾಗಣ್ಣಗೌಡ, ತಾಲೂಕು ಅಧ್ಯಕ್ಷ ಪ.ಮಾ.ರಮೇಶ್, ಅಶ್ವಥ್‍ನಾರಾಯಣ್, ಎಚ್.ಎನ್.ಮಂಜುನಾಥ್, ಜೆ.ಶಿವಲಿಂಗೇ ಗೌಡ, ರೈಸ್‍ಮಿಲ್ ತಮ್ಮಣ್ಣ, ಪುರಸಭೆ ಸದಸ್ಯ ಅಶೋಕ್, ಶ್ರೀನಿವಾಸ್ ನಾಯಕ್, ಧನಂಜಯ್ ಸೇರಿದಂತೆ ಹಲವರು ಉಪಸ್ಥಿತರಿದ್ದರು.

ಕೆ.ಆರ್.ಪೇಟೆ ವರದಿ: ಪಟ್ಟಣದಲ್ಲಿಯೂ ಉಪಚುನಾವಣಾ ಬಹಿರಂಗ ಪ್ರಚಾರ ನಡೆ ಸಿದ ಬಿ.ಎಸ್.ಯಡಿಯೂರಪ್ಪ, ಹೆಚ್.ಡಿ. ಕುಮಾರಸ್ವಾಮಿ ಅವರು ಕಳೆದ ವಿಧಾನಸಭಾ ಚುನಾವಣೆಯಲ್ಲಿ ಅಧಿಕಾರಕ್ಕೆ ಬರುವ ಸಲುವಾಗಿ ರೈತರ ಎಲ್ಲಾ ಸಾಲ ಮನ್ನಾ ಮಾಡು ತ್ತೇನೆ. ಸ್ತ್ರೀಶಕ್ತಿ ಸಂಘದ ಎಲ್ಲಾ ಸಾಲ ಮನ್ನಾ ಮಾಡುತ್ತೇನೆ. ವಿಕಲ ಚೇತನರಿಗೆ 6ಸಾವಿರ ವೇತನ ನೀಡುತ್ತೇನೆ. ಬಾಣಂತಿ ಯರಿಗೆ ಮಾಸಿಕ 6 ಸಾವಿರ ಕೊಡುತ್ತೇನೆ ಎಂದು ಸುಳ್ಳು ಭರವಸೆ ನೀಡಿದರು. ಆದರೆ ಕುಮಾರಸ್ವಾಮಿ ಮುಖ್ಯ ಮಂತ್ರಿಯಾಗಿ 6 ತಿಂಗಳಾದರೂ ಯಾರಿಗೂ ಏನೂ ಪ್ರಯೋಜನವಾಗಿಲ್ಲ. ಇದರಿಂದ ಜೆಡಿಎಸ್‍ಗೆ ಮತ ಹಾಕಿದ ರೈತರು, ಸ್ತ್ರೀಶಕ್ತಿ ಸಂಘದ ಮಹಿಳೆಯರು, ಬಾಣಂತಿಯರು, ವಿಕಲ ಚೇತನರು ಕುಮಾರಸ್ವಾಮಿಗೆ ಹಿಡಿ ಶಾಪ ಹಾಕುತ್ತಿದ್ದಾರೆ ಎಂದು ಹೇಳಿದರು.

ವೇದಿಕೆಯಲ್ಲಿ ಚಿತ್ರನಟಿ ಹಾಗೂ ಶಾಸಕಿ ತಾರಾ ಅನುರಾಧಾ, ವಿಧಾನಸಭೆ ಮಾಜಿ ಸದಸ್ಯ ಡಿ.ಎಸ್.ವೀರಯ್ಯ, ಅಭ್ಯರ್ಥಿ ಡಾ. ಸಿದ್ದರಾಮಯ್ಯ, ಜಿಲ್ಲಾ ಬಿಜೆಪಿ, ಪ್ರಧಾನ ಕಾರ್ಯದರ್ಶಿ ಪಾರ್ಥಸಾರಥಿ, ತಾಲೂಕು ಬಿಜೆಪಿ ಅಧ್ಯಕ್ಷ ಬೂಕಹಳ್ಳಿ ಮಂಜುನಾಥ್, ಉಪಾಧ್ಯಕ್ಷ ಶೀಳನೆರೆ ಭರತ್, ಮುಖಂಡರಾದ ವಕೀಲ ಎಂ.ಆರ್. ರಾಜೇಶ್, ಕೆ.ವಿ. ಅರುಣ್‍ಕುಮಾರ್, ಕೆ.ಎನ್. ಕುಮಾರಸ್ವಾಮಿ, ಜಯರಾಂನಾಯಕ್, ಶಿವರಾಂನಾಯಕ್, ನಗರಸಭಾ ಮಾಜಿ ಉಪಾಧ್ಯಕ್ಷೆ ಇಂದಿರಾ ಸತೀಶಬಾಬು, ಸಾಸಲು ನಾಗೇಶ್, ಬಿ.ಸಿ.ಹರೀಶ್, ತೋಟಪ್ಪ ಶೆಟ್ಟಿ, ಬೂಕನಕೆರೆ ಮಧುಸೂಧನ್, ದಬ್ಬೇಘಟ್ಟ ಭರತ್ ಇದ್ದರು.

ಸಿದ್ದರಾಮಯ್ಯ ಮೂಲೆಗುಂಪು

ಮೈತ್ರಿ ಸರ್ಕಾರ ಅಧಿಕಾರಕ್ಕೆ ಬಂದ ಮೇಲೆ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡರು ಹಾಗೂ ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ಮೂಲೆಗುಂಪು ಮಾಡಿದ್ದಾರೆ. ಇಂತಹ ಸಮಯ ಸಾಧಕ ಜೆಡಿಎಸ್ ಅನ್ನು ತಿರಸ್ಕರಿಸುವ ಮೂಲಕ ತಕ್ಕ ಪಾಠ ಕಲಿಸಬೇಕು ಎಂದು ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ತಿಳಿಸಿದರು.

ಪುಟ್ಟಣ್ಣಯ್ಯ ಪ್ರತಿಮೆ ಸ್ಥಾಪನೆ

ರಾಜ್ಯದ ಧೀಮಂತ ರೈತನಾಯಕ ದಿವಂಗತ ಕೆ.ಎಸ್.ಪುಟ್ಟಣ್ಣಯ್ಯ ಅವರು ಕೊನೆಯವರೆಗೂ ರೈತ ಚಳವಳಿಯಲ್ಲಿಯೇ ಗುರುತಿಸಿಕೊಂಡು ರೈತರ ಪರವಾಗಿ ಹೋರಾಟವನ್ನು ಮಾಡಿಕೊಂಡು ಬಂದರು. ಅವರ ಪ್ರತಿಮೆಯನ್ನು ಪಟ್ಟಣದಲ್ಲಿ ಸ್ಥಾಪನೆ ಮಾಡಲು ರೈತಸಂಘದ ಕಾರ್ಯಕರ್ತರು ಮನವಿ ಸಲ್ಲಿಸಿದ್ದಾರೆ. ಈ ಬಗ್ಗೆ ಕ್ರಮಕೈಗೊಳ್ಳುತ್ತೇನೆ ಎಂದು ಯಡಿಯೂರಪ್ಪ ಭರವಸೆ ನೀಡಿದರು.