ಸಿಎಎ ಪ್ರತಿಭಟನೆಗೆ ಕಾಂಗ್ರೆಸ್ ಪ್ರಚೋದನೆ ಕಾರಣ

ಮೈಸೂರು,ಡಿ.30(ಆರ್‍ಕೆ)-ಕೇಂದ್ರ ಸರ್ಕಾರ ಜಾರಿಗೆ ತಂದಿರುವ ಪೌರತ್ವ ತಿದ್ದುಪಡಿ ಕಾಯ್ದೆ ವಿರುದ್ಧ ಪ್ರತಿಭಟನೆಗೆ ಕಾಂಗ್ರೆಸ್ ಪ್ರಚೋದನೆ ಕಾರಣ ಎಂದು ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಹಾಗೂ ವಿಧಾನ ಪರಿಷತ್ ಸದಸ್ಯ ರವಿಕುಮಾರ್ ಇಂದಿಲ್ಲಿ ಗಂಭೀರ ಆರೋಪ ಮಾಡಿದ್ದಾರೆ.

ಮೈಸೂರಿನ ಚಾಮರಾಜಪುರಂನಲ್ಲಿ ರುವ ಬಿಜೆಪಿ ಕಚೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿದ ಅವರು, ವೋಟ್ ಬ್ಯಾಂಕಿಗಾಗಿ ಅಮಾಯಕರನ್ನು ಎತ್ತಿಕಟ್ಟಿ ಗಲಭೆ ಮಾಡಿ ಸುತ್ತಿರುವ ಕಾಂಗ್ರೆಸ್ ರಾಜ್ಯದಲ್ಲಿ ಅಶಾಂತಿ ಉಂಟು ಮಾಡುವ ಮೂಲಕ ಸರ್ಕಾರಕ್ಕೆ ಕೆಟ್ಟ ಹೆಸರು ತರಲು ಪ್ರಯತ್ನಿಸುತ್ತಿದೆ ಎಂದರು.

1955ರಲ್ಲೇ ಜಾರಿಗೆ ಬಂದ ಪೌರತ್ವ ಕಾಯ್ದೆಗೆ ಕಾಲ ಬದಲಾದಂತೆ 1985, 1992, 2003 ಹಾಗೂ 2005ರಲ್ಲಿ ತಿದ್ದುಪಡಿ ತರಲಾಗಿದೆ. ಬಾಂಗ್ಲಾ, ಪಾಕಿಸ್ತಾನ ಹಾಗೂ ಆಫ್ಘಾನಿಸ್ತಾನದಲ್ಲಿ ದೌರ್ಜನ್ಯಕ್ಕೊ ಳಗಾಗಿ ದಯನೀಯ ಸ್ಥಿತಿಯಲ್ಲಿದ್ದ ಅಲ್ಪ ಸಂಖ್ಯಾತರಿಗೆ ನಮ್ಮ ದೇಶದಲ್ಲಿ ಪೌರತ್ವ ನೀಡಿ ರಕ್ಷಿಸುವುದೇ ಈ ಕಾಯ್ದೆಯ ಉದ್ದೇಶವಾಗಿರುವುದರಿಂದ ಜನರು ಒಪ್ಪಿ ಕೊಂಡಿದ್ದಾರೆ. ಆದರೆ ಕಾಂಗ್ರೆಸ್ ಮಾತ್ರ ಅಶಾಂತಿ ಸೃಷ್ಟಿಸಲು ತಪ್ಪು ಮಾಹಿತಿ ನೀಡಿ ಪ್ರತಿಭಟನೆಗೆ ಪ್ರಚೋದನೆ ನೀಡು ತ್ತಿದೆ ಎಂದು ಅವರು ತಿಳಿಸಿದರು.

ಕಾಂಗ್ರೆಸ್‍ನವರದ್ದು ಇಬ್ಬಗೆ ನೀತಿ. ವಿಶ್ವ ವಿದ್ಯಾನಿಲಯದ ವಿದ್ಯಾರ್ಥಿಗಳನ್ನು ಬಳಸಿ ಕೊಂಡು ಕಲ್ಲು ತೂರಿಸಿ, ಬೆಂಕಿ ಹೊತ್ತಿಸಿ ದಂಗೆ ಮಾಡಿಸಿ ಸಾರ್ವಜನಿಕ ಆಸ್ತಿ-ಪಾಸ್ತಿಗೆ ಹಾನಿ ಮಾಡುತ್ತಿದ್ದಾರೆ. ಚುನಾವಣೆ ಯಲ್ಲಿ ಪ್ರಕಟಿಸಿದ ಪ್ರಣಾಳಿಕೆಯಲ್ಲಿನ ವಿಷಯ ಗಳನ್ನು ಜನರಿಗೆ ಹೇಳಿ ನಾವು ಸ್ಪಷ್ಟ ಬಹುಮತ ದೊಂದಿಗೆ ಅಧಿಕಾರಕ್ಕೆ ಬಂದಿದ್ದೇವೆಯೇ ಹೊರತು. ಕುಟುಂಬ ರಾಜಕಾರಣದಿಂದಲ್ಲ ಎಂದು ರವಿಕುಮಾರ್ ನುಡಿದರು.

ಜನವರಿ 1 ರಿಂದ 15ರವರೆಗೆ ದೇಶದ 3 ಕೋಟಿ ಹಾಗೂ ರಾಜ್ಯದ 20 ಲಕ್ಷ ಮನೆಗಳಿಗೆ ಭೇಟಿ ನೀಡಿ ಪೌರತ್ವ ತಿದ್ದು ಪಡಿ ಕಾಯ್ದೆ ಬಗ್ಗೆ ಕರಪತ್ರ ವಿತರಿಸುವ ಅಭಿಯಾನ ಮಾಡುತ್ತೇವೆ. 500 ಸಂವಾದ, ತಾಲೂಕು ಮತ್ತು ಜಿಲ್ಲಾ ಮಟ್ಟದಲ್ಲಿ ದೊಡ್ಡ ರ್ಯಾಲಿ ನಡೆಸುವ ಮೂಲಕ ಜನರಲ್ಲಿ ಜಾಗೃತಿ ಮೂಡಿಸುತ್ತೇವೆ ಎಂದೂ ತಿಳಿಸಿದರು.
ಪ್ರತಿಭಟನೆ ನೆಪದಲ್ಲಿ ಹಿಂಸೆ, ಗಲಭೆ ಮಾಡುವವರು ನಗರ ನಕ್ಸಲರು ಎಂದ ರವಿಕುಮಾರ್, ಅಮಾಯಕರು ಇಂತಹ ವರ ಪ್ರಚೋದನೆಗೆ ಕಿವಿಗೊಡಬಾರದು ಎಂದೂ ತಿಳಿಸಿದರು. ಶಾಸಕ ಎಲ್.ನಾಗೇಂದ್ರ ಬಿಜೆಪಿ ಮುಖಂಡರಾದ ಎಂ.ಶಿವಣ್ಣ, ಎಂ. ರಾಜೇಂದ್ರ, ತೋಂಟದಾರ್ಯ, ಮೈ.ವಿ. ರವಿಶಂಕರ್, ಫಣೀಶ್ ಹಾಗೂ ಇತರರು ಸುದ್ದಿಗೋಷ್ಠಿಯಲ್ಲಿ ಉಪಸ್ಥಿತರಿದ್ದರು.