ಕಲುಷಿತ ನೀರು ಸೇವನೆ: ಮತ್ತೆ 7 ಜನ ಅಸ್ವಸ್ಥ, ಕಡಕೊಳಕ್ಕೆ ಅಧಿಕಾರಿಗಳ ದಂಡು

ಕಡಕೊಳ, ಜ.22-ಮೈಸೂರು ತಾಲೂಕಿನ ಕಡಕೊಳ ಗ್ರಾಮದಲ್ಲಿ ಕಲುಷಿತ ನೀರು ಸೇವನೆಯಿಂದ ಮತ್ತೆ 7 ಮಂದಿಗೆ ವಾಂತಿ-ಭೇದಿ ಕಾಣಿಸಿಕೊಂಡಿದೆ. ಕಳೆದ ಐದಾರು ದಿನಗಳಿಂದ ಈವರೆಗೆ ಅಸ್ವಸ್ಥಗೊಂಡವರ ಸಂಖ್ಯೆ 127ಕ್ಕೆ ಏರಿಕೆಯಾಗಿದೆ. ಅಧಿಕಾರಿಗಳ ದಂಡೇ ಗ್ರಾಮಕ್ಕೆ ಆಗಮಿಸಿ, ಪರಿಸ್ಥಿತಿ ಹತೋಟಿಗೆ ಕ್ರಮ ಕೈಗೊಂಡಿದೆ.

ಗ್ರಾಮದ ಜನತಾ ಕಾಲೋನಿಯಲ್ಲಿ ಕಲುಷಿತ ನೀರು ಸೇವನೆಯಿಂದ ಐದಾರು ದಿನಗಳಿಂದ ಅಸ್ವಸ್ಥಗೊಂಡು ಆಸ್ಪತ್ರೆ ಸೇರಿದ್ದ 120 ಮಂದಿ ಚೇತರಿಸಿಕೊಳ್ಳುವಷ್ಟರಲ್ಲೇ ಬುಧವಾರ ಮತ್ತೆ 7 ಮಂದಿಗೆ ವಾಂತಿ-ಭೇದಿ ಕಾಣಿಸಿ ಕೊಂಡಿದ್ದು, ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಗ್ರಾಮಸ್ಥರಲ್ಲಿ ಸತತವಾಗಿ ವಾಂತಿ-ಭೇದಿ ಕಾಣಿಸಿಕೊಳ್ಳುತ್ತಿದ್ದು, ಗ್ರಾಮದ ಜನರಲ್ಲಿ ಆತಂಕ ಮನೆಮಾಡಿದೆ. ಆರೋಗ್ಯ ಇಲಾಖೆ ಸಿಬ್ಬಂದಿ ಗ್ರಾಮದಲ್ಲೇ ಬೀಡುಬಿಟ್ಟು ಅಗತ್ಯ ಕ್ರಮ ವಹಿಸಿದ್ದಾರೆ.

ಗ್ರಾಮಕ್ಕೆ ಮಂಗಳವಾರ ಶಾಸಕ ಜಿ.ಟಿ.ದೇವೇಗೌಡರು ಭೇಟಿ ನೀಡಿ, ಅಧಿಕಾರಿಗಳ ಸಭೆ ನಡೆಸಿ ಪರಿಸ್ಥಿತಿ ಹತೋಟಿಗೆ ತರುವಂತೆ ಸೂಚಿಸಿದ ಹಿನ್ನೆಲೆಯಲ್ಲಿ ವಿವಿಧ ಇಲಾಖೆ ಅಧಿಕಾರಿಗಳ ದಂಡೇ ಗ್ರಾಮಕ್ಕೆ ಧಾವಿಸಿದ್ದು, ಸಮಸ್ಯೆ ಬಗೆಹರಿಸುವ ನಿಟ್ಟಿನಲ್ಲಿ ಕಾರ್ಯಪ್ರವೃತ್ತರಾಗಿದೆ.

ಮುಡಾ ಅವೈಜ್ಞಾನಿಕವಾಗಿ ಸೆಪ್ಟಿಕ್ ಟ್ಯಾಂಕ್ ನಿರ್ಮಿಸಿ ರುವ ಬಗ್ಗೆ ದೂರು ಬಂದ ಹಿನ್ನೆಲೆಯಲ್ಲಿ ಮುಡಾ ಇಂಜಿನಿ ಯರ್‍ಗಳು ಗ್ರಾಮಕ್ಕೆ ಭೇಟಿ ನೀಡಿ, ಆಗಿರುವ ಪ್ರಮಾದ ವನ್ನು ಸರಿಪಡಿಸಲು ಮುಂದಾದರು. ಗ್ರಾಮಕ್ಕೆ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ವಿಭಾಗೀಯ ಸಹ ನಿರ್ದೇಶಕ ರಾಮಚಂದ್ರಪ್ಪ ಹಾಗೂ ಬೆಂಗಳೂರಿ ನಿಂದ ಸರ್ವೇಕ್ಷಣಾ ಮತ್ತು ಸೂಕ್ಷ್ಮ ಜೀವಾಣು ಪರೀಕ್ಷಾ ತಂಡ ಭೇಟಿ ನೀಡಿ ಪರಿಸ್ಥಿತಿ ಅವಲೋಕಿಸಿದರು.

ಜಿಲ್ಲಾ ಆರೋಗ್ಯಾಧಿಕಾರಿ ವೆಂಕಟೇಶ್, ತಾಲೂಕು ಆರೋ ಗ್ಯಾಧಿಕಾರಿ ಮಹದೇವಪ್ರಸಾದ್, ಡಿಎಸ್‍ಓ ಶಿವಪ್ರಕಾಶ್ ಹಾಗೂ ಕಾಲರಾ ನಿಯಂತ್ರಣಾಧಿಕಾರಿ ಡಾ.ಉಮೇಶ್, ಕಾಲರಾ ನಿಯಂತ್ರಣ ತಂಡದ ಸದಸ್ಯರು ಗ್ರಾಮದಲ್ಲೇ ಮೊಕ್ಕಾಂ ಹೂಡಿದ್ದು, ಅಗತ್ಯ ಕ್ರಮ ವಹಿಸಿದ್ದಾರೆ.

ಕಬಿನಿ ನೀರು: ಗ್ರಾಮಸ್ಥರು ಮಂಗಳವಾರ ಕಬಿನಿ ನೀರಿನ ಪೂರೈಕೆಗಾಗಿ ಶಾಸಕರಲ್ಲಿ ಮನವಿ ಮಾಡಿದ್ದ ಹಿನ್ನೆಲೆಯಲ್ಲಿ ಇಂದು ಕಬಿನಿ ನೀರು ಪೂರೈಕೆ ನಿಟ್ಟಿನಲ್ಲಿ ಕುಡಿಯುವ ನೀರು ಮತ್ತು ನೈರ್ಮಲ್ಯ ಮಂಡಳಿಯ ಕಾರ್ಯಪಾಲಕ ಅಭಿಯಂತರ ಲಕ್ಷ್ಮೀಶ್ ಗ್ರಾಮಸ್ಥರೊಂದಿಗೆ ಚರ್ಚಿಸಿದರು.

ಚರಂಡಿಯ ಕೊಳವೆ ಬಾವಿಗೆ ಸೇರಿ ಸರಬರಾಜಾಗು ತ್ತಿರುವ ಹಿನ್ನೆಲೆಯಲ್ಲಿ ನೀರಾವರಿ ಇಲಾಖೆ ಇಇ ರಘುಪತಿ, ಎಇಗಳಾದ ಜೈದೀಪ್ ಮತ್ತು ಅನಿಲ್ ಭೇಟಿ ನೀಡಿ, ಪರಿಶೀಲನೆ ನಡೆಸಿದರು. ಜನತಾ ಕಾಲೋನಿಯಲ್ಲಿ ಹಾದು ಹೋಗಿರುವ ಕಾಲುವೆಯಲ್ಲಿ ನೀರು ನಿಂತಿರುವ ಕೂಡಲೇ ನೀರು ಹೊರಹಾಕಿಸÀಲು ಕ್ರಮ ಕೈಗೊಂಡರು.

ಸದ್ಯ ಕಡಕೊಳ ಗ್ರಾಮಸ್ಥರಿಗೆ ವಾಣಿವಿಲಾಸ ನೀರು ಸರಬರಾಜು ಮಂಡಳಿಯಿಂದ ಟ್ಯಾಂಕರ್‍ಗಳ ಮೂಲಕ ಇಂದು ನೀರನ್ನು ಪೂರೈಕೆ ಮಾಡಲಾಯಿತು. ಇನ್ನು ಶಾಲೆಗಳಿಗೆ ಅಕ್ಷರ ದಾಸೋಹದ ಸಹಾಯಕ ನಿರ್ದೇಶಕ ಲಿಂಗರಾಜಯ್ಯ ಶಾಲೆಗಳಿಗೆ ಭೇಟಿ ನೀಡಿ ಮಕ್ಕಳ ಆರೋಗ್ಯದ ಬಗ್ಗೆ ಮುಂಜಾಗ್ರತಾ ವಹಿಸುವಂತೆ ಸೂಚನೆ ನೀಡಿದರು.

ಈ ಸಂದರ್ಭದಲ್ಲಿ ಗ್ರಾಪಂ ಅಧ್ಯಕ್ಷ ರಮೇಶ್ ಹಾಗೂ ಗ್ರಾಪಂ ಸದಸ್ಯರಾದ ಗೆಜ್ಜಗಳ್ಳಿ ಲೋಕೇಶ್, ಶಿವ ಕುಮಾರ್, ಪಿಡಿಓ ಶಾಂತಮ್ಮ, ಕನ್ನಡ ಗೆಳೆಯರ ಬಳಗದ ಸಂಚಾಲಕರಾದ ಕಡಕೊಳ ಕುಮಾರಸ್ವಾಮಿ, ಗ್ರಾಮಾಭಿವೃದ್ಧಿ ಸಂಘದ ಅಧ್ಯಕ್ಷ ನಂಜಪ್ಪ, ಗ್ರಾಮದ ಮುಖಂಡರಾದ ಎಲ್ಲಪ್ಪನಾಯಕ, ಮಹದೇವು, ಅಂದಾನಿ ನಾಯಕ ಮುಂತಾದವÀರಿದ್ದರು.