ದಕ್ಷಿಣ ಭಾರತದ 11ನೇ ಕುಂಭಮೇಳಕ್ಕೆ ಕ್ಷಣಗಣನೆ

ಡಿಸಿ, ಸೇನಾ ಮುಖ್ಯಸ್ಥರಿಂದ ಅಂತಿಮ ಸಿದ್ಧತೆ ಪರಿಶೀಲನೆ
ತಿ.ನರಸೀಪುರ: ದಕ್ಷಿಣ ಭಾರತದ 11ನೇ ಕುಂಭಮೇಳಕ್ಕೆ ಕ್ಷಣಗಣನೆ ಆರಂಭ ಗೊಂಡಿದ್ದು, ಅಂತಿಮ ಗಳಿಗೆ ಸಿದ್ಧತೆಗಳು ಮುಕ್ತಾಯ ಹಂತದಲ್ಲಿವೆ.

ಈಗಾಗಲೇ ಭಾರತೀಯ ಸೇನಾ ಯೋಧರು ಭಕ್ತಾದಿಗಳ ಅನುಕೂಲಕ್ಕಾಗಿ ಕಪಿಲಾ ನದಿಗೆ ಅಡ್ಡಲಾಗಿ ಆಕರ್ಷಣೀಯವಾದ ತೇಲುವ ಸೇತುವೆ ನಿರ್ಮಿಸಿದ್ದು, ಸೇನೆ ಮೇಜರ್ ಜನರಲ್ ಕೆ.ಜೆ.ಬಾಬು ಹಾಗೂ ಜಿಲ್ಲಾಧಿಕಾರಿ ಅಭಿರಾಮ್ ಜಿ.ಶಂಕರ್ ಇಂದು ಸೇತುವೆ ಪರಿಶೀಲಿಸಿದರು.

ಸದ್ಯ ತ್ರಿವೇಣಿ ಸಂಗಮದ ಮಧ್ಯ ಭಾಗ ದಲ್ಲಿ ವೃತ್ತಾಕಾರವಾಗಿ ನಿರ್ಮಾಣವಾಗುತ್ತಿ ರುವ ಧಾರ್ಮಿಕ ವೇದಿಕೆಯ ಕಾಮಗಾರಿಗೆ ಅಂತಿಮ ರೂಪ ನೀಡಲಾಗುತ್ತಿದ್ದು, ಪಿಟೀಲು ಚೌಡಯ್ಯ ವೃತ್ತದಿಂದ ಅಗಸ್ತ್ಯೇಶ್ವರ ದೇವಾ ಲಯದವರೆಗಿನ ಮಣ್ಣಿನ ರಸೆಯನ್ನು ಡಾಂಬರೀಕರಣದ ಮೂಲಕ ಅಂದ ಗೊಳಿಸಲಾಗಿದೆ. ಸೆಸ್ಕಾಂ ಇಲಾಖೆಯವರು ಮೇಳದ ಸ್ಥಳದಲ್ಲಿ ನೂತನವಾಗಿ ಟ್ರಾನ್ಸ್ ಫಾರ್ಮರ್ ಅಳವಡಿಸಿ ವಿದ್ಯುತ್ ಕೊರತೆ ಯಾಗದಂತೆ ಕ್ರಮವಹಿಸಿದ್ದಾರೆ.

ಇದೇ ಮೊದಲ ಬಾರಿಗೆ ಜಿಲ್ಲಾ ಉಸ್ತು ವಾರಿ ಸಚಿವ ಜಿ.ಟಿ.ದೇವೇಗೌಡರ ಅಣತಿ ಯಂತೆ ಕಾವೇರಿ ನದಿಯ ಮಧ್ಯಭಾಗ ದಲ್ಲಿರುವ ರುದ್ರಪಾದಕ್ಕೆ ಮರಳಿನ ಮೂಟೆಯ ಸೇತುವೆ ನಿರ್ಮಾಣ ಮಾಡಿ ಭಕ್ತರ ದರ್ಶನಕ್ಕೆ ಅವಕಾಶ ಕಲ್ಪಿಸಲಾಗಿದೆ.
ಕುಂಭ ಮೇಳದ ಅಂಗವಾಗಿ ಪಟ್ಟಣದ ಪ್ರಮುಖ ದೇವಾಲಯಗಳಿಗೆ ಸುಣ್ಣ ಬಣ್ಣಗಳಿಂದ ಅಂದಗೊಳಿಸಲಾಗಿದ್ದು, ಈ ಬಾರಿ ವಿದ್ಯುತ್ ದೀಪಾಲಂಕಾರಕ್ಕೆ ಹೆಚ್ಚಿನ ಒತ್ತು ನೀಡಲಾಗುತ್ತಿದೆ. ದಸರಾ ಮಾದರಿ ಯಂತೆ ಈಗಾಗಲೇ ಪಟ್ಟಣ ವಿದ್ಯುತ್ ದೀಪ ಗಳಿಂದ ಸಿಂಗಾರಗೊಂಡಿದೆ. ಪಟ್ಟಣದ ಪ್ರಮುಖ ರಸ್ತೆಗಳು, ಸರ್ಕಾರಿ ಕಚೇರಿಗಳು ದೀಪಾಲಂಕಾರದಿಂದ ಕಂಗೊಳಿಸುತ್ತಿವೆ. ತ್ರಿವೇಣಿ ಸಂಗಮದಲ್ಲಿ ಜರುಗುವ ಕುಂಭ ಮೇಳಕ್ಕೆ ಭಾಗಶಃ ಸಿದ್ಧತೆ ಪೂರ್ಣಗೊಂಡಿದ್ದು, ಅಂತಿಮ ಸಿದ್ಧತೆ ಚುರುಕಾಗಿ ನಡೆಯುತ್ತಿದೆ.

ಪ್ರಚಾರದ ಕೊರತೆ
ದಕ್ಷಿಣ ಭಾರತದ 11ನೇ ಕುಂಭ ಮೇಳಕ್ಕೆ ಕ್ಷಣಗಣನೆ ಆರಂಭವಾಗಿ ದ್ದರೂ ತೀವ್ರವಾದ ಪ್ರಚಾರದ ಕೊರತೆ ಎದ್ದುಕಾಣುತ್ತಿದೆ.

ಪಟ್ಟಣದ ನಾಲ್ಕುಕಡೆ ಮಾತ್ರ ಮೇಳದ ಸ್ವಾಗತದ ಪ್ಲೆಕ್ಸ್‍ಗಳನ್ನು ಅಳವಡಿಸಲಾಗಿ ರುವುದು ಬಿಟ್ಟರೆ ಇನ್ಯಾವುದೇ ರೀತಿಯಲ್ಲೂ ಪ್ರಚಾರದ ಗೋಜಿಗೆ ಸಂಬಂಧಪಟ್ಟವರು ಕ್ರಮ ವಹಿಸಿಲ್ಲ. ಕುಂಭಮೇಳದ ಪೂರ್ವ ಭಾವಿ ಸಭೆಯಲ್ಲಿ ತೀರ್ಮಾನವಾದಂತೆ ಸರ್ಕಾರಿ ಸಾರಿಗೆ ಸಂಸ್ಥೆಯವರೂ ಸಹ ಒಂದೇ ಒಂದು ಪೋಸ್ಟರ್‍ಗಳನ್ನು ಕೂಡ ಬಸ್‍ಗಳ ಮೇಲೆ ಹಾಕಿಲ್ಲದಿರುವುದನ್ನು ನೋಡಿದರೆÀ ಕೇವಲ ಪಟ್ಟಣದ ಜನತೆಗೆ ಮಾತ್ರ ಕುಂಭಮೇಳ ಸೀಮಿತವಾಗಿದೆಯೇ ಎಂಬ ಪ್ರಶ್ನೆ ಮೂಡುತ್ತಿದೆ.