ಅ. 14ರಂದು ಜಂಬೂ ಸವಾರಿ ಮಾರ್ಗದಲ್ಲಿ ಸಾಂಸ್ಕೃತಿಕ ಕಲಾ ಪ್ರದರ್ಶನ

ಮೈಸೂರು: ವಿಜಯ ದಶಮಿ ಮೆರವಣಿಗೆಗೂ ಮುನ್ನ, ಅಕ್ಟೋಬರ್ 14 ರಂದು ಜಂಬೂ ಸವಾರಿ ಮಾರ್ಗದಲ್ಲಿ ಜಾನಪದ ಕಲಾ ತಂಡಗಳು, ಯುವ ಕಲಾ ತಂಡಗಳು ಹಾಗೂ ಯುವ ಸಂಭ್ರಮದಲ್ಲಿ ಭಾಗವಹಿಸುವ ಕಾಲೇಜು ವಿದ್ಯಾರ್ಥಿಗಳ ತಂಡದ ವರಿಂದ ಸಾಂಸ್ಕøತಿಕ ಕಲಾ ಪ್ರದರ್ಶನ ನಡೆಯಲಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಜಿ.ಟಿ. ದೇವೇಗೌಡರು ತಿಳಿಸಿದ್ದಾರೆ. ಮೈಸೂರಿನ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ದಸರಾ ಪೂರ್ವಭಾವಿ ಸಭೆ ನಡೆಸಿದ ಸಚಿವರು, ಸುದ್ದಿಗಾರರಿಗೆ ಈ ವಿಷಯ ತಿಳಿಸಿದರು. ಅಕ್ಟೋಬರ್ 19 ರಂದು ವಿಜಯದಶಮಿ ಜಂಬೂ ಸವಾರಿ ನಡೆಯಲಿದ್ದು, ಆ ವೈಭವ ಕಣ್ತುಂಬಿಕೊಳ್ಳಲು ಲಕ್ಷಾಂತರ ಮಂದಿ ಆಗಮಿಸುವುದರಿಂದ ನೂಕು-ನುಗ್ಗಲು ಉಂಟಾಗಿ ಎಷ್ಟೋ ಮಂದಿಗೆ ಅದನ್ನು ನೋಡಲು ಸಾಧ್ಯವಾಗದೇ ತ್ರಾಸಪಡಬೇಕಾಗುತ್ತದೆ ಎಂದರು.

ಜಂಬೂ ಸವಾರಿಗೂ ಐದು ದಿನ ಮುಂಚಿತವಾಗಿ ಅಕ್ಟೋಬರ್ 14 ರಂದು ಮಧ್ಯಾಹ್ನ ಜಂಬೂ ಸವಾರಿ ಮಾರ್ಗದಲ್ಲಿ ಜಾನಪದ ಕಲಾ ತಂಡಗಳು ಮತ್ತು ಯುವ ಸಂಭ್ರಮದಲ್ಲಿ ಪಾಲ್ಗೊಳ್ಳುವ ರಾಜ್ಯದ ವಿವಿಧ ಜಿಲ್ಲೆಗಳ ವಿದ್ಯಾರ್ಥಿ-ವಿದ್ಯಾರ್ಥಿನಿಯರ ಕಲಾ ತಂಡಗಳಿಂದ ಸಾಂಸ್ಕøತಿಕ ಕಲಾ ಪ್ರದರ್ಶನದ ಮೆರವಣಿಗೆ ನಡೆಸುವುದರಿಂದ ವಿಜಯ ದಶಮಿ ಮೆರವಣಿಗೆ ಜನಸಂದಣಿ ನಿಯಂತ್ರಿಸಬಹುದೆಂದು ಸಚಿವರು ತಿಳಿಸಿದರು. ಒಂದು ರೀತಿ ಜಂಬೂ ಸವಾರಿ ತಾಲೀಮಿನಂತಿರುವ ಸಾಂಸ್ಕøತಿಕ ಕಲಾ ಪ್ರದರ್ಶನದ ಮೆರವಣಿಗೆಯು ಅರಮನೆ ಮುಂಭಾಗದಿಂದ ಹೊರಟು ಕೆ.ಆರ್. ಸರ್ಕಲ್, ಸಯ್ಯಾಜಿರಾವ್ ರಸ್ತೆ, ಹಳೇ ಆರ್‍ಎಂಸಿ ಸರ್ಕಲ್, ಹೈವೇ ಸರ್ಕಲ್ ಮೂಲಕ ಬನ್ನಿಮಂಟಪ ತಲುಪಿ ಅಲ್ಲಿ ಅಂತ್ಯಗೊಳ್ಳಲಿದೆ ಎಂದು ಜಿ.ಟಿ. ದೇವೇಗೌಡರು ತಿಳಿಸಿದರು. ದಸರಾ ಮೆರವಣಿಗೆ ಉಪಸಮಿತಿಗೆ ಸದಸ್ಯರನ್ನು ನೇಮಿಸಿದ ನಂತರ ಚರ್ಚಿಸಿ ಮೆರವಣಿಗೆಯ ರೂಪುರೇಷೆ ಅಂತಿಮಗೊಳಿಸಲಾಗುವುದು ಎಂದು ಅವರು ಇದೇ ಸಂದರ್ಭ ನುಡಿದರು.