ನೀರಿನ ತೊಟ್ಟಿಗೆ ಬಿದ್ದು ಮಗು ಸಾವು

ಬೆಟ್ಟದಪುರ: ಮನೆಯವರ ನಿರ್ಲಕ್ಷ್ಯಕ್ಕೆ ಮಗು ಬಲಿಯಾಗಿರುವ ಘಟನೆ ಪಿರಿಯಾ ಪಟ್ಟಣ ತಾಲೂಕಿನ ಬೆಟ್ಟದತುಂಗದ ಕೆಳಗಿನ ಕೊಪ್ಪಲು ಗ್ರಾಮದಲ್ಲಿ ನಡೆದಿದೆ. ಗ್ರಾಮದ ಜಗದೀಶ ಮತ್ತು ಲಕ್ಷ್ಮೀ ದಂಪತಿಯ 2 ವರ್ಷದ ಯಶಸ್ ಮೃತಪಟ್ಟ ಮಗು.

ಘಟನೆ ವಿವರ: ತಂದೆ ತಾಯಿ ಮನೆಯ ಹಿಂಭಾಗದಲ್ಲಿ ಇರುವ ಜಮೀನಿನಲ್ಲಿ ಕೆಲಸ ಮಾಡುತ್ತಿದ್ದ ವೇಳೆ ಮಗು ಸಹ ಅಲ್ಲೇ ಆಟವಾಡುತ್ತಿತ್ತೆನ್ನಲಾಗಿದೆ. ತಾಯಿ ಲಕ್ಷ್ಮಿ ಮನೆಗೆ ಹೋಗಿದ್ದನ್ನು ನೋಡಿ ಮಗು ಹಿಂಬಾಲಿಸಿದೆ. ತಾಯಿ ಮನೆಯೊಳಗೆ ಕಾಫಿ ಮಾಡಲು ನಿರತಳಾದಾಗ ಮಗು ಹಿಂದಯೇ ಓಡಿ ಬಂದು ಮನೆಯ ಸಮೀಪವಿರುವ ನೀರಿನ ತೊಟ್ಟಿಗೆ ಕಾಲು ಜಾರಿ ಬಿದ್ದು ಮೃತಪಟ್ಟಿದೆ. ಆದರೆ ಮಗು ತೊಟ್ಟಿಗೆ ಬಿದ್ದಿದ್ದು ಯಾರ ಗಮನಕ್ಕೂ ಬಾರದೆ ಮಗುವನ್ನು ಹುಡುಕುತ್ತಿದ್ದರು. ನಂತರ ತೊಟ್ಟಿಯಲ್ಲಿ ಮಗುವಿನ ಶವ ಕಂಡು ಗಾಬರಿಗೊಂಡು ಮಗುವನ್ನು ಎತ್ತುಕೊಂಡು ನೋಡುವಷ್ಟರಲ್ಲಿ ಮಗುವಿನ ಪ್ರಾಣಪಕ್ಷಿ ಹಾರಿಹೋಗಿತ್ತು.

ಸ್ಥಳಕ್ಕೆ ಗ್ರಾಮದ ಮುಖಂಡರಾದ ಪ್ರಭುಗೌಡ, ಚಿಕ್ಕೇಗೌಡ, ಜಯಂತಿ, ರಮೇಶ್, ಅಂಗಡಿ ಆಗಮಿಸಿ ಮಾತನಾಡಿ, ಇಂತಹ ಘಟನೆಗಳು ನಡೆಯುತ್ತಿದ್ದರೂ ಗ್ರಾಮ ಪಂಚಾಯಿತಿ ಸರಿಯಾದ ಮಾರ್ಗದರ್ಶನವನ್ನು ನೀಡುತ್ತಿಲ್ಲ. ಮನೆಗಳ ನಿರ್ಮಾಣ ಮಾಡುವವರು ರಕ್ಷಣಾತ್ಮಕ ವಾಗಿ ನೀರಿನ ತೊಟ್ಟಿಗಳನ್ನು ನಿರ್ಮಿಸಬೇಕು. ಈ ಬಗ್ಗೆ ಗ್ರಾಮ ಪಂಚಾಯಿತಿ ಎಚ್ಚರಿಕೆ ನೀಡಿ ಇಂತಹ ದುರಂತ ಘಟನೆಗಳು ಮರುಕಳಿಸದಂತೆ ತಡೆಯಬೇಕು ಎಂದು ಆಗ್ರಹಿಸಿದರು.