ಮೊಮ್ಮಗನ ಹಾದಿ ಸುಗಮಕ್ಕೆ ಮೈಸೂರಲ್ಲಿ ಕಾಂಗ್ರೆಸ್‍ನಿಂದ ಸುಮಲತಾ ಕಣಕ್ಕಿಳಿಸಲು ದೇವೇಗೌಡರ ಮಾಸ್ಟರ್ ಪ್ಲಾನ್

ಬೆಂಗಳೂರು: ಲೋಕಸಭಾ ಚುನಾವಣೆಯಲ್ಲಿ ಮೊಮ್ಮಗ ನಿಖಿಲ್ ಗೆಲುವನ್ನು ಖಚಿತಪಡಿಸಿಕೊಳ್ಳುವ ತಂತ್ರವಾಗಿ ಸುಮಲತಾ ಅಂಬರೀಷ್ ಅವರನ್ನು ಮೈಸೂರು ಕ್ಷೇತ್ರದಿಂದ ಕಾಂಗ್ರೆಸ್ ಅಭ್ಯರ್ಥಿಯಾಗಿ ಕಣಕ್ಕಿಳಿಸಲು ಜೆಡಿಎಸ್ ರಾಷ್ಟ್ರೀಯ ಅಧ್ಯಕ್ಷ ಹೆಚ್.ಡಿ. ದೇವೇಗೌಡ ರಾಜಕೀಯ ದಾಳ ಉರುಳಿಸಿದ್ದಾರೆ.

ಇದೇ ಕಾರಣಕ್ಕೆ ಮೈಸೂರು ಕ್ಷೇತ್ರವನ್ನು ಕೊನೆಗಳಿಗೆಯಲ್ಲಿ ಬಿಟ್ಟುಕೊಟ್ಟು, ಸಿಎಲ್‍ಪಿ ನಾಯಕ ಹಾಗೂ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಚೆಕ್‍ಮೇಟ್ ನೀಡಿದ್ದಾರೆ. ಗೌಡರ ಸಲಹೆ ಮೇರೆಗೆ ರಾಜ್ಯದ ಉಸ್ತುವಾರಿ ಹೊಣೆ ಹೊತ್ತ ಎಐಸಿಸಿ ಪ್ರಧಾನ ಕಾರ್ಯದರ್ಶಿ ಕೆ.ಸಿ. ವೇಣುಗೋಪಾಲ್, ಮೈಸೂರು ಕ್ಷೇತ್ರದಿಂದ ಸ್ಪರ್ಧಿಸುವಂತೆ ಸುಮಲತಾ ಅಂಬರೀಷ್ ಅವರನ್ನು ಒಪ್ಪಿ ಸುವ ಹೊಣೆಗಾರಿಕೆಯನ್ನು ಸಚಿವ ಡಿ.ಕೆ ಶಿವಕುಮಾರ್ ಅವರಿಗೆ ವಹಿಸಿದ್ದಾರೆ.

ಮೈಸೂರು ಅಥವಾ ಬೆಂಗಳೂರು ದಕ್ಷಿಣ ಕ್ಷೇತ್ರದಿಂದ ಸುಮಲತಾ ಸ್ಫರ್ಧಿಸಿದರೂ ಪಕ್ಷ ಟಿಕೆಟ್ ನೀಡಲಿದೆ ಎಂಬುದನ್ನು ಮನದಟ್ಟು ಮಾಡಲಿದ್ದಾರೆ. ಅಂಬರೀಷ್ ಅವರಿಗೆ ಮಂಡ್ಯದಂತೆ ಮೈಸೂರಿನ ಜೊತೆಗೂ ಅವಿನಾಭಾವ ಸಂಬಂಧ ಇತ್ತು. ಅವರ ಶಿಕ್ಷಣ, ಚಲನಚಿತ್ರ ಪ್ರವೇಶ, ಸ್ನೇಹಿತರ ಬಳಗ ಎಲ್ಲಕ್ಕೂ ಮೈಸೂರೇ ಕೇಂದ್ರ ಬಿಂದು. ಮಂಡ್ಯ ಲಕ್ಷಾಂತರ ಅಭಿಮಾನಿಗಳನ್ನು ಹೊಂದಿದ್ದ ಜಿಲ್ಲೆಯಾಗಿತ್ತು. ಆದ್ದರಿಂದ ಸುಮಲತಾ ಅವರು ಮೈಸೂರು ಕ್ಷೇತ್ರದಿಂದ ಸ್ಪರ್ಧಿಸಲು ಕಾಂಗ್ರೆಸ್ ಟಿಕೆಟ್ ನೀಡಿ, ಇದರಿಂದ ಪಕ್ಷಕ್ಕೆ ಒಂದು ಸ್ಥಾನ ಹೆಚ್ಚಾಗಿ ಗಳಿಸಿದಂತಾಗುತ್ತದೆ. ಮಂಡ್ಯ ಕ್ಷೇತ್ರದ ಗೊಂದಲವೂ ನಿವಾರಣೆಯಾಗಲಿದೆ, ಸುಮಲತಾ ಅವರ ಗೆಲುವೂ ಸುಲಭವಾಗ ಲಿದೆ ಎಂದಿದ್ದಾರೆ.

ತಮ್ಮ ತವರು ಜಿಲ್ಲೆ ಮೈಸೂರಿನಿಂದ ಕಾಂಗ್ರೆಸ್ ಅಭ್ಯರ್ಥಿಯೇ ಕಣಕ್ಕಿಳಿಯಬೇಕು ಎಂದು ಪಟ್ಟು ಹಿಡಿ ದಿರುವ ಸಿದ್ದರಾಮಯ್ಯ ಅವರ ಆಸೆಯೂ ಈಡೇರುತ್ತದೆ, ಒಬ್ಬ ಅಭ್ಯರ್ಥಿಯನ್ನೂ ಗೆಲ್ಲಿಸಿಕೊಂಡಂತಾಗುತ್ತದೆ. ಸಿದ್ದರಾಮಯ್ಯ ಹೆಸರಿಸುವ ಅಭ್ಯರ್ಥಿಗೆ ಪಕ್ಷ ಟಿಕೆಟ್ ನೀಡಿದರೂ ಅವರ ಗೆಲುವು ಮರೀಚಿಕೆ. ಒಂದು ವೇಳೆ ಅವರು ತಮ್ಮ ನಿಲುವಿಗೇ ಅಂಟಿಕೊಂಡರೆ, ಮೈಸೂರಿಗೆ ಅವರನ್ನೇ ಅಭ್ಯರ್ಥಿಯನ್ನಾಗಿ ಮಾಡಿಬಿಡಿ ಎಂದು ಗೌಡರು ಚೆಕ್‍ಮೇಟ್ ಹಾಕಿದ್ದಾರೆ. ಇಲ್ಲಿ ಒಬ್ಬರ-ಮತ್ತೊಬ್ಬರ ಗೆಲುವು ಎಂಬು ದಲ್ಲ, ಮೈತ್ರಿ ಕೂಟಕ್ಕೆ ಹೆಚ್ಚು ಸ್ಥಾನ ಬರ ಬೇಕೆಂಬುದೇ ನನ್ನ ಉದ್ದೇಶ, ನಿಮ್ಮ ಮಾತಿಗೆ ಮನ್ನಣೆ ನೀಡಿ ಕ್ಷೇತ್ರ ಬಿಟ್ಟುಕೊಟ್ಟಿ ದ್ದೇವೆ, ಅದನ್ನು ಉಳಿಸಿಕೊಳ್ಳಲು ಸುಮಲತಾರನ್ನು ಅಭ್ಯರ್ಥಿಯನ್ನಾಗಿ ಮಾಡಿ ಎಂಬ ಗೌಡರ ಮಾತಿಗೆ ಎಐಸಿಸಿ ಸಮ್ಮತಿಸಿದೆ ಎನ್ನಲಾಗುತ್ತಿದೆ.