ಒಡೆಯದ ಈಡುಗಾಯಿ, ಮೂಸಂಬಿ ಸ್ವೀಕರಿಸದ ಆನೆ!: ಶೃಂಗೇರಿಯಲ್ಲಿ ಗೌಡರ ಕುಟುಂಬ ಗಲಿಬಿಲಿ

ಶೃಂಗೇರಿ: ದೇವರು ಮತ್ತು ಶಕುನಗಳಲ್ಲಿ ಅಪಾರ ನಂಬಿಕೆ ಹೊಂದಿರುವ ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡರ ಕುಟುಂಬ ಇಂದು ಶೃಂಗೇರಿ ಶಾರದಾಂಬೆ ದೇವಸ್ಥಾನದಲ್ಲಿ ಹೋಮ-ಹವನ ಹಾಗೂ ವಿಶೇಷ ಪೂಜೆ ಸಲ್ಲಿಸಿದ ವೇಳೆ ಅಶುಭ, ಶಕುನಗಳು ಎದುರಾಗಿವೆ.

ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ಅವರು 11 ಈಡುಗಾಯಿಗಳನ್ನು ಹಾಕಬೇಕೆಂದು ಅರ್ಚಕರು ತಿಳಿಸಿದಾಗ ಮುಖ್ಯ ಮಂತ್ರಿಗಳು ಶ್ರದ್ಧಾಭಕ್ತಿಯಿಂದ ಈಡುಗಾಯಿ ಹಾಕಲು ಆರಂಭಿಸಿದರು. ಆದರೆ ಅವರು ಹಾಕಿದ 9ನೇ ಈಡುಗಾಯಿ ಒಡೆಯದೆ ಮೆಟ್ಟಲಲ್ಲಿ ಉರುಳಿ ಹೋಯಿತು. ಅದನ್ನು ಕಂಡು ಕುಮಾರಸ್ವಾಮಿ ಗಾಬರಿ ಗೊಂಡು, ಒಂದು ಕ್ಷಣ ಹಾಗೇ ನಿಂತುಬಿಟ್ಟರು.

ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡರು ಶೃಂಗೇರಿ ಪ್ರವೇಶಿಸುತ್ತಿದ್ದಂತೆಯೇ ಅವರ ಕಾರಿನ ಇಂಡಿಕೇಟರ್ ಒಡೆದು ಹೋಯಿತು. ಅಲ್ಲದೆ ಪೂಜೆಯ ನಂತರ ದೇವೇಗೌಡರು ದೇವಸ್ಥಾನದ ಆನೆಗೆ ಮೂಸಂಬಿ ನೀಡಿದರೆ, ಆನೆ ಅದನ್ನು ಸ್ವೀಕರಿಸಲಿಲ್ಲ. ಗೌಡರು ಎಷ್ಟೇ ಪ್ರಯತ್ನಿಸಿದರು ಆನೆಯಂತೂ ಮೂಸಂಬಿ ತೆಗೆದುಕೊಳ್ಳಲು ಸೊಂಡಿಲು ಚಾಚಲೇ ಇಲ್ಲ. ಗೌಡರ ಜೊತೆಗಿದ್ದವರು ಆನೆ ಮೂಸಂಬಿ ಸ್ವೀಕರಿಸುವಂತೆ ಮಾಡಲು ಮಾವುತನಿಗೆ ತಿಳಿಸಿದರು. ಮಾವುತ ಎಷ್ಟೇ ಪ್ರಯತ್ನಿಸಿದರೂ ಆನೆಯಂತೂ ಮೂಸಂಬಿಗಾಗಿ ಸೊಂಡಿಲು ಚಾಚಲೇ ಇಲ್ಲ.

ಬಿಜೆಪಿಯ ಆಪರೇಷನ್ ಕಮಲ ಭೀತಿ ಹಾಗೂ ಕಾಂಗ್ರೆಸ್‍ನ ಅತೃಪ್ತ ಶಾಸಕರ ಅಸಮಾಧಾನ ಇವುಗಳ ಮಧ್ಯೆ ಸರ್ಕಾರದ ಅಸ್ಥಿರತೆ ಕಾಡುತ್ತಿರುವ ಹಿನ್ನೆಲೆಯಲ್ಲಿ ದೇವೇಗೌಡರ ಕುಟುಂಬ ಸರ್ಕಾರ ಉಳಿಸಿ ಕೊಳ್ಳಲು ಶೃಂಗೇರಿ ಶಾರದಾಂಬೆಯ ಮೊರೆ ಹೋಗಿತ್ತು ಎಂಬ ಮಾತುಗಳು ಕೇಳಿ ಬರುತ್ತಿವೆ. ಪೂಜೆ ಸಂದರ್ಭದಲ್ಲೂ ಗುಪ್ತಚರ ಇಲಾಖೆಯ ಅಧಿಕಾರಿಗಳೂ ಸೇರಿದಂತೆ ಹಲವರು
ತಮ್ಮ ಮೊಬೈಲ್‍ಗೆ ಮಾಡಿದ ಕರೆಗಳನ್ನು ಮುಖ್ಯಮಂತ್ರಿಗಳು ನಿರಂತರವಾಗಿ ಸ್ವೀಕರಿಸುತ್ತಿದ್ದರು. ಈ ವೇಳೆ ಅವರು ಪದೇ ಪದೆ ಗಲಿಬಿಲಿಗೊಳ್ಳುತ್ತಿದ್ದರು ಎಂದು ಪ್ರತ್ಯಕ್ಷದರ್ಶಿ ಗಳು ತಿಳಿಸಿದ್ದಾರೆ.

ಕಾಂಗ್ರೆಸ್‍ನ ಹಲವು ಶಾಸಕರು ಮುಂಬೈಗೆ ತೆರಳುತ್ತಿದ್ದಾರೆ ಹಾಗೂ ಮೂವರು ಶಾಸಕರು ಚೆನ್ನೈ ಕಡೆ ಪ್ರಯಾಣ ಬೆಳೆಸಿದ್ದು, ಅವರು ಅಲ್ಲಿಂದ ಮುಂಬೈಗೆ ತೆರಳಲಿದ್ದಾರೆ ಎಂಬಂತಹ ಮಾಹಿತಿಗಳು ಬಂದ ಕಾರಣದಿಂದ ಮುಖ್ಯಮಂತ್ರಿಗಳು ಗಲಿಬಿಲಿಗೊಂಡಿದ್ದರು ಎಂದು ಹೇಳಲಾಗಿದೆ. ಕುಮಾರಸ್ವಾಮಿ ಅವರ 9ನೇ ಈಡುಗಾಯಿ ಒಡೆಯದೇ ಇದ್ದದ್ದು, ಶೃಂಗೇರಿ ಪ್ರವೇಶಿಸುತ್ತಿದ್ದಂತೆಯೇ ದೇವೇಗೌಡರ ಕಾರಿನ ಇಂಡಿಕೇಟರ್ ಒಡೆದು ಹೋದದ್ದು, ದೇವಸ್ಥಾನದ ಆನೆ ಗೌಡರು ನೀಡಿದ ಮೂಸಂಬಿ ಸ್ವೀಕರಿಸಲು ನಿರಾಕರಿಸಿದ್ದು, ಇವೆಲ್ಲವೂ ಕಾಕತಾಳೀಯವೇ ಆಗಿರಬಹುದು. ಆದರೆ ದೇವರು, ಶಕುನ, ಶಾಸ್ತ್ರಗಳಲ್ಲಿ ಅಪಾರ ನಂಬಿಕೆ ಇರುವ ಗೌಡರ ಕುಟುಂಬ ಈ ಘಟನಾವಳಿಗಳನ್ನು ಅಪಶಕುನ ವೆಂದು ಭಾವಿಸಿರಬಹುದು ಎಂಬ ಮಾತುಗಳು ಕೇಳಿ ಬರುತ್ತಿವೆ. ಅದೇ ವೇಳೆ ಶಕುನದಲ್ಲಿ ತೀರಾ ನಂಬಿಕೆ ಹೊಂದಿರುವ ಹೆಚ್.ಡಿ.ರೇವಣ್ಣ ಅವರಂತೂ ಬಹಳ ಗಾಬರಿಯಾಗಿದ್ದರು ಎಂದು ಹೇಳಲಾಗುತ್ತಿದೆ.