ಕ್ರೈಸ್ತ ಬಾಂಧವರಿಂದ ಭಕ್ತಿ ಭಾವ, ಸಂಭ್ರಮದ ಕ್ರಿಸ್‍ಮಸ್ ಪ್ರಾರ್ಥನೆ

ಮೈಸೂರು: ಸೇಂಟ್ ಫಿಲೋಮಿನಾ ಚರ್ಚ್ ಸೇರಿದಂತೆ ಮೈಸೂರಿನ ವಿವಿಧ ಚರ್ಚ್‍ಗಳಲ್ಲಿ ಸೋಮವಾರ ರಾತ್ರಿಯಿಂದಲೇ ಕ್ರೈಸ್ತ ಬಾಂಧವರ ಪವಿತ್ರ ಹಬ್ಬ ಕ್ರಿಸ್‍ಮಸ್ ಸಂಭ್ರಮ, ಸಡಗರ ಮುಗಿಲು ಮುಟ್ಟಿತ್ತು.

ಸೇಂಟ್ ಫಿಲೋ ಮಿನಾ ಚರ್ಚ್‍ನಲ್ಲಿ ಇಂದು ರಾತ್ರಿ 11 ರಿಂದ 12ರ ಸಮಯದಲ್ಲಿ ಕ್ರೈಸ್ತಬಾಂಧವರು ಬಾಲಯೇಸುವಿಗೆ ವಿಶೇಷ ಪೂಜೆ ಸಲ್ಲಿಸಿ, ಭಕ್ತಿಯ ಪರಕಾಷ್ಠೆ ಮೆರೆದರು. ರಾತ್ರಿಯಿಂದಲೇ ವಿವಿಧ ಬಡಾವಣೆಗಳಿಂದ ತಂಡೋಪತಂಡವಾಗಿ ಆಗಮಿಸುತ್ತಿದ್ದ ಕ್ರೈಸ್ತ ಬಾಂಧವರು ಕರೋಲ್ ಗೀತೆಗಳನ್ನು ಹಾಡುತ್ತ, ಯೇಸುವಿನ ಗುಣಗಾನ ಮಾಡಿದರು. ಇದರಿಂದಾಗಿ ಸೇಂಟ್ ಫಿಲೋಮಿನಾ ಚರ್ಚ್ ಆವರಣದಲ್ಲಿ ಕ್ರಿಸ್‍ಮಸ್ ಹಬ್ಬದ ಸಂಭ್ರಮ ಮನೆ ಮಾಡಿತ್ತು. ರಾತ್ರಿ 12 ಗಂಟೆ ಸುಮಾರಿನಲ್ಲಿ ಮೈಸೂರು ಧರ್ಮಕ್ಷೇತ್ರದ ಕ್ರೈಸ್ತ ಧರ್ಮಗುರು ಡಾ.ಕೆ.ಎ.ವಿಲಿಯಮ್ಸ್ ಅವರು, ಬಾಲಯೇಸುವಿನ ಮೂರ್ತಿಯನ್ನು ಸ್ಥಾಪಿಸಿ, ಧಾರ್ಮಿಕ ವಿಧಿ-ವಿಧಾನಗಳನ್ನು ಪೂರೈಸಿದರು. ನಂತರ ತಮ್ಮ ಪ್ರವಚನದಲ್ಲಿ ಬಾಲಯೇಸುವಿನ ಗುಣಗಾನ ಮಾಡಿದರು.

ಪರಮ ಪ್ರಸಾದ: ಯೇಸುಕ್ರಿಸ್ತರು ತಾವು ಮರಣ ಹೊಂದಿದ ಹಿಂದಿನ ದಿನ ರಾತ್ರಿ ಭೋಜನ ವೇಳೆಯಲ್ಲಿ ಪರಮ ಪ್ರಸಾದವನ್ನು ಸ್ಥಾಪಿಸಿದ್ದರು.
ರೊಟ್ಟಿ ಮತ್ತು ದ್ರಾಕ್ಷಾರಸಗಳ ಗುಣಗಳಲ್ಲಿ ಯೇಸುವಿನ ಶರೀರವೂ, ಆತ್ಮವೂ, ದೈವಸ್ವಭಾವವೂ ಅಡಗಿರುವ ಸಂಸ್ಕಾರವೇ ಪರಮ ಪ್ರಸಾದ. ಕೊನೆ ದಿನದಲ್ಲಿ ಯೇಸುಕ್ರಿಸ್ತರು ಮಾಡಿದ ಕ್ರಿಯೆ ಮತ್ತು ಅವರು ಆಡಿದ ಕೊನೆಯ ಮಾತುಗಳನ್ನು ಧರ್ಮಗುರುಗಳ ಮುಖೇನ ಪುನರಾವರ್ತಿಸುವುದೇ `ದಿವ್ಯ ಬಲಿಪೂಜೆ’ ಎಂದು ಫಾದರ್ ಕೆ.ಎನ್.ಜೋಸೆಫ್ ಅವರು, ಈ ದಿನದ ವಿಶೇಷತೆಯನ್ನು `ಮೈಸೂರು ಮಿತ್ರ’ನಿಗೆ ತಿಳಿಸಿದರು.

ಈ ಪೂಜೆಯಲ್ಲಿ `ಸಿದ್ಧತೆ ಮತ್ತು ಬಲಿ’ ಎಂಬ ಎರಡು ಭಾಗಗಳಿವೆ. ಧರ್ಮಗುರು ಗಳ ನೇತೃತ್ವದಲ್ಲಿ ಸಮಸ್ತ ಕ್ರೈಸ್ತ ಬಾಂಧವರು ಒಂದೆಡೆ ಸೇರಿ, ಲೋಕಕಲ್ಯಾಣಕ್ಕಾಗಿ ಬೇಡುತ್ತೇವೆ. ಕಾಣಿಕೆಯ ವೇಳೆ `ಬಲಿ’ಗೆ ಬೇಕಾದ ರೊಟ್ಟಿ, ದ್ರಾಕ್ಷಾರಸ ಪ್ರಸಾದವನ್ನು ಗುರುಗಳ ಮುಖೇನ ಯೇಸುಕ್ರಿಸ್ತರಿಗೆ ಪ್ರಸಾದವಾಗಿ ಒಪ್ಪಿಸುತ್ತೇವೆ. ಈ ಕ್ರಿಯೆ ಪ್ರತಿಯೊಬ್ಬರ ಶರೀರ, ಆತ್ಮಗಳ ಸಮರ್ಪಣೆಯನ್ನು ಸೂಚಿಸುತ್ತದೆ ಎಂದು ಧಾರ್ಮಿಕ ವಿಧಿ-ವಿಧಾನಗಳ ಬಗ್ಗೆ ವಿವರಿಸಿದರು. ಸೇಂಟ್ ಫಿಲೋಮಿನಾ ಚರ್ಚ್ ಆವರಣದಲ್ಲಿ ಧಾರ್ಮಿಕ ವಿಧಿ-ವಿಧಾನಗಳು ಮುಗಿದ ಬಳಿಕ ಚರ್ಚ್ ಮುಂಭಾಗ ಕೆಲವರು ಸೆಲ್ಫಿಗೆ ಫೋಸ್ ನೀಡುತ್ತಿದ್ದರೆ, ಆವರಣದಲ್ಲೇ ಸ್ಥಾಪಿಸಿದ್ದ `ಬಾಲಯೇಸು’ ಜನ್ಮಸ್ಥಾನ ಗೋದಲಿ ಮುಂದೆ ನಿಂತು ಯುವಕ-ಯುವತಿಯರು ಸೆಲ್ಫಿ, ಫೋಟೋ ತೆಗೆದುಕೊಳ್ಳುವುದು, ಪರಸ್ಪರ ಕೇಕ್ ವಿತರಿಸಿ, ಶುಭಾಶಯ ವಿನಿಮಯ ಮಾಡಿಕೊಳ್ಳುವ ದೃಶ್ಯ ಸಾಮಾನ್ಯ ವಾಗಿತ್ತು. ಇದಕ್ಕೆ ಪೂರಕವಾಗಿ ಚರ್ಚ್‍ನ ದೀಪಾಲಂಕಾರ ಮತ್ತಷ್ಟು ಮೆರಗು ನೀಡಿತ್ತು.

ಬೆಂಗಳೂರು-ಬಿ.ಎನ್.ರಸ್ತೆಯ ವೆಸ್ಲಿ ಚರ್ಚ್, ಹಿನಕಲ್, ರಾಜೀವ್‍ನಗರ, ಎನ್.ಆರ್. ಮೊಹಲ್ಲಾ, ಲಕ್ಷ್ಮೀಪುರಂ ಜೋಡಿ ಟ್ಯಾಂಕ್ ಬಳಿಯ ಚರ್ಚ್‍ನಲ್ಲಿ ಭಕ್ತರು ಪ್ರಾರ್ಥನೆ ಸಲ್ಲಿಸಿದರು.