ಹುಬ್ಬಳ್ಳಿ ರೈಲು ನಿಲ್ದಾಣದಲ್ಲಿ ಸ್ಫೋಟ: ಇಬ್ಬರ ಅಮಾನತು

ಹುಬ್ಬಳ್ಳಿ,ಅ.28-ಹುಬ್ಬಳ್ಳಿ ರೈಲ್ವೆ ನಿಲ್ದಾಣ ದಲ್ಲಿ ನಡೆದ ಸ್ಫೋಟ ಪ್ರಕರಣಕ್ಕೆ ಸಂಬಂ ಧಿಸಿದಂತೆ ಇಬ್ಬರನ್ನು ಅಮಾನತು ಮಾಡ ಲಾಗಿದೆ. ಅ.21ರಂದು ನಡೆದ ಲಘು ಸ್ಫೋಟ ದಲ್ಲಿ ಒಬ್ಬ ಪ್ರಯಾಣಿಕ ಗಾಯಗೊಂಡಿದ್ದ.

ರೈಲ್ವೆ ನಿಲ್ದಾಣದ ಭದ್ರತೆ ಉಸ್ತುವಾರಿ ನೋಡಿಕೊಳ್ಳುತ್ತಿದ್ದ ನೈಋತ್ಯ ರೈಲ್ವೆಯ ಇಬ್ಬರು ಅಧಿಕಾರಿಗಳನ್ನು ಅಮಾನತು ಮಾಡಲಾಗಿದೆ. ಆರ್‍ಪಿಎಫ್‍ನ ಸಹಾಯಕ ಸಬ್ ಇನ್ಸ್ ಪೆಕ್ಟರ್ ಮಂಜುನಾಥ್, ಸ್ಟೇಷನ್ ಮಾಸ್ಟರ್ ವರುಣ್ ಕುಮಾರ್ ದಾಸ್ ಅಮಾನತು ಆದವರು. “ರೈಲ್ವೆ ನಿಲ್ದಾಣದಲ್ಲಿ ನಡೆದ ಸ್ಫೋಟಕ್ಕೆ ಸಂಬಂಧಿಸಿದಂತೆ ಏನೂ ಹೇಳಲು ಸಾಧ್ಯವಿಲ್ಲ. ತನಿಖೆ ನಡೆಸುತ್ತಿರುವ ಅಧಿಕಾರಿಗಳು ಈ ಬಗ್ಗೆ ವರದಿ ನೀಡಲು ಮೂರು ದಿನಗಳ ಕಾಲಾವಕಾಶ ಕೇಳಿ ದ್ದಾರೆ” ಎಂದು ರೈಲ್ವೆ ಖಾತೆ ರಾಜ್ಯ ಸಚಿವ ಸುರೇಶ್ ಅಂಗಡಿ ಹೇಳಿದರು.

ಬೆಂಗಳೂರಿನಿಂದ ಆಗಮಿಸಿದ್ದ ಬಾಂಬ್ ನಿಷ್ಕ್ರಿಯ ದಳದ 6 ಮಂದಿಯ ತಂಡ ರೈಲ್ವೆ ನಿಲ್ದಾಣದಲ್ಲಿ ಸಿಕ್ಕಿದ 15 ಜೀವಂತ ಸ್ಫೋಟಕಗಳನ್ನು ನಿಷ್ಕ್ರಿಯಗೊಳಿಸಿವೆ. ರೈಲ್ವೆ ನಿಲ್ದಾಣದಿಂದ ಸ್ಫೋಟಕಗಳನ್ನು ನಗರದ ಹೊರವಲಯದ ಸಿಆರ್‍ಪಿ ಮೈದಾನಕ್ಕೆ ಸಾಗಿಸ ಲಾಗಿತ್ತು. ವಿಮಾನ ನಿಲ್ದಾಣದಲ್ಲಿ ಇರುವ ಮಾದರಿಯಲ್ಲಿ ರೈಲ್ವೆ ನಿಲ್ದಾಣದಲ್ಲಿಯೂ ಸ್ಕ್ಯಾನಿಂಗ್ ಯಂತ್ರಗಳನ್ನು ಅಳವಡಿಸಲು ಇಲಾಖೆ ಚಿಂತನೆ ನಡೆಸಿದೆ. ನಿಲ್ದಾಣದಲ್ಲಿ ನಡೆದ ಸ್ಫೋಟದಲ್ಲಿ ಗಾಯಗೊಂಡ ಹುಸೇನಸಾಬ್ ನಾಯಕವಾಲೆ ಕಿಮ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.