ಕರ್ನಾಟಕ ಮುಕ್ತ ವಿವಿ ಸಿಬ್ಬಂದಿ ಸಂಭ್ರಮಾಚರಣೆ

ಮೈಸೂರು: ಮಾನ್ಯತೆ ರದ್ದುಗೊಳಿಸಿದ್ದರಿಂದ ಕಳೆದ ಮೂರು ವರ್ಷಗಳಿಂದ ಚಟುವಟಿಕೆ ಸ್ಥಗಿತಗೊಂಡು, ಸದಾ ಬಿಕೋ ಎನ್ನುತ್ತಿದ್ದ ಮೈಸೂರಿನ ಮಾನಸಗಂಗೋತ್ರಿ ಆವರಣದ ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾನಿಲಯದ ಕ್ಯಾಂಪಸ್‍ನಲ್ಲೀಗ ಸಂತಸ ಮನೆ ಮಾಡಿದೆ.

ವಿಜ್ಞಾನ ವಿಷಯಗಳನ್ನೊರತುಪಡಿಸಿ ಇತರ 17 ಕೋರ್ಸುಗಳಿಗೆ ಯುಜಿಸಿ ಮಾನ್ಯತೆ ನೀಡಿ ಗುರುವಾರ ಅಧಿಸೂಚನೆ ಪ್ರಕಟಿಸುತ್ತಿದ್ದಂತೆಯೇ ಮುಕ್ತ ವಿಶ್ವವಿದ್ಯಾನಿಲಯದ ಅಧಿಕಾರಿಗಳು, ಬೋಧಕ-ಬೋಧಕೇತರ ಸಿಬ್ಬಂದಿ ಮೊಗದಲ್ಲಿ ನಗೆ ಬೀರಿದೆ.

ಕಳೆದ ಮೂರು ವರ್ಷಗಳಿಂದ ಪಾಠ ಪ್ರವಚನಗಳು, ಶೈಕ್ಷಣಿಕ ಚಟುವಟಿಕೆಗಳು ಸ್ಥಗಿತವಾಗಿದ್ದ ಕಾರಣ ಸಿಬ್ಬಂದಿ ಹಾಗೂ ಪ್ರಾಧ್ಯಾಪಕರು ಚಿಂತೆಗೀಡಾಗಿದ್ದರು. ಹೊಸ ಸುಸಜ್ಜಿತ ಕಟ್ಟಡಗಳಿದ್ದಾಗ್ಯೂ ಮುಕ್ತ ವಿಶ್ವವಿದ್ಯಾನಿಲಯದ ಇಡೀ ಕ್ಯಾಂಪಸ್ ಬಿಕೋ ಎನ್ನುತ್ತಿತ್ತು.

ಇದೀಗ ಯುಜಿಸಿಯಿಂದ ಮಾನ್ಯತೆ ದೊರೆತಿರುವುದರಿಂದ ಸಿಬ್ಬಂದಿ ಇಂದು ಕ್ಯಾಂಪಸ್‍ನಲ್ಲಿ ಪಟಾಕಿ ಸಿಡಿಸಿ, ಸಿಹಿ ಹಂಚುವ ಮೂಲಕ ಸಂಭ್ರಮ ಆಚರಿಸಿದರು.

ನವದೆಹಲಿಯ ಯುಜಿಸಿ ಅಧಿಕಾರಿಗಳೊಂದಿಗೆ ನಿರಂತರ ಸಂಪರ್ಕದಲ್ಲಿದ್ದು, ರಾಜ್ಯ ಸರ್ಕಾರ, ಕೇಂದ್ರ ಸರ್ಕಾರದ ಅಧಿಕಾರಿಗಳು, ಸಚಿವರು, ಸಂಸದರ ಸಹಕಾರದಿಂದ ಮಾನ್ಯತೆ ಪಡೆಯಲು ಶ್ರಮಿಸಿದ ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾನಿಲಯದ ಕುಲಪತಿ ಪ್ರೊ. ಡಿ. ಶಿವಲಿಂಗಯ್ಯ ಅವರಿಗೆ, ಸಿಬ್ಬಂದಿ ಪುಷ್ಪಗುಚ್ಛ ನೀಡಿ, ಸಿಹಿ ತಿನ್ನಿಸಿ ಶುಭಾಶಯ ಕೋರಿದರು.