ಕೋವಿಡ್ ಲಸಿಕೆ ಪಡೆಯಲು ಹಿರಿಯ ನಾಗರಿಕರಿಗೆ ನಗರ ಪಾಲಿಕೆಯಿಂದ ಉಚಿತ ವಾಹನ ವ್ಯವಸ್ಥೆ

ಮೈಸೂರು,ಮಾ.23(ಪಿಎಂ)- ಹಿರಿಯ ನಾಗರಿಕ ರನ್ನು ಮನೆಯಿಂದ ಕರೆತಂದು ಕೋವಿಡ್ ಲಸಿಕೆ ಹಾಕಿಸಿ, ಮತ್ತೆ ಮನೆಗೆ ತಲುಪಿಸಲು ಮೈಸೂರು ಮಹಾ ನಗರ ಪಾಲಿಕೆ ಉಚಿತ ವಾಹನ ಸೌಲಭ್ಯ ಕಲ್ಪಿಸಿದೆ.

ವಿವಿಧ ಸಂಘ-ಸಂಸ್ಥೆಗಳ ಸಹಯೋಗದಲ್ಲಿ ಈ ಸೌಲಭ್ಯ ಕಲ್ಪಿಸಲು ಮುಂದಾಗಿರುವ ನಗರ ಪಾಲಿಕೆ, ಜೆಎಸ್‍ಎಸ್ ವತಿಯಿಂದ ನೀಡಿರುವ ವ್ಯಾನ್‍ನಲ್ಲಿ ಮಂಗಳವಾರ ಆಲನಹಳ್ಳಿಯ ಅನಾಥಾಶ್ರಮವೊಂದರ 40 ಹಿರಿಯ ನಾಗರಿಕರನ್ನು ಟ್ರಾಮಾ ಕೇರ್ ಸೆಂಟರ್‍ಗೆ ಕರೆದೊಯ್ದು ಲಸಿಕೆ ಕೊಡಿಸಿ, ಮತ್ತೆ ಅವರ ಸ್ಥಳಕ್ಕೆ ತಲುಪಿಸಲಾಯಿತು. ವಿವಿಧ ಸಂಸ್ಥೆಗಳ ಸಹಯೋಗದಲ್ಲಿ ಈ ಸೌಲಭ್ಯ ವಿಸ್ತರಿಸಲು ಪಾಲಿಕೆ ಉದ್ದೇಶಿಸಿದೆ.

ಇದಕ್ಕೂ ಮುನ್ನ ಮೈಸೂರು ಮಹಾನಗರ ಪಾಲಿಕೆ ಆವರಣದಲ್ಲಿ ಈ ಸೌಲಭ್ಯಕ್ಕೆ ಪಾಲಿಕೆ ಆಯುಕ್ತೆ ಶಿಲ್ಪಾ ನಾಗ್ ಚಾಲನೆ ನೀಡಿದರು. ಬಳಿಕ ಮಾಧ್ಯಮದವರಿಗೆ ಪ್ರತಿಕ್ರಿಯೆ ನೀಡಿದ ಅವರು, 3ನೇ ಹಂತದ ಕೋವಿಡ್-19 ಲಸಿಕೆ ಅಭಿಯಾನ ಮಾ.1ರಿಂದ ರಾಜ್ಯದಲ್ಲಿ ಆರಂಭ ವಾಗಿದೆ. ಈ ಹಂತದಲ್ಲಿ 60 ವರ್ಷ ಮೇಲ್ಪಟ್ಟ ಹಿರಿಯ ನಾಗರಿಕರು ಹಾಗೂ ಸಹ ಅಸ್ವಸ್ಥತೆಗಳಿಂದ (ಕೋಮಾಬ್ರ್ಡಿ ಟೋಸ್) ಬಳಲುತ್ತಿರುವ 45ರಿಂದ 59 ವರ್ಷದೊಳಗಿ ನವರಿಗೆ ಆದ್ಯತೆ ಮೇರೆಗೆ ಲಸಿಕೆ ನೀಡಲಾಗುತ್ತಿದೆ. ಅಂತೆಯೇ ಪಾಲಿಕೆ ವ್ಯಾಪ್ತಿಯಲ್ಲಿ 86 ಸಾವಿರ ಹಿರಿಯ ನಾಗರಿಕರನ್ನು ಗುರುತಿಸಲಾಗಿದೆ. ಅವರಿಗೆ ವ್ಯವಸ್ಥಿತವಾಗಿ ಲಸಿಕೆ ಕೊಡಿ ಸುವ ಸಂಬಂಧ ಈ ವಾಹನ ಸೌಲಭ್ಯ ವ್ಯವಸ್ಥೆ ಮಾಡ ಲಾಗಿದೆ ಎಂದು ಆಯುಕ್ತರು ತಿಳಿಸಿದರು.

ಸೌಲಭ್ಯಕ್ಕೆ ಕಂಟ್ರೋಲ್ ರೂಂ ಸಂಪರ್ಕಿಸಿ: ಕೋರಿಕೆ ಮೇರೆಗೆ ಜೆಎಸ್‍ಎಸ್ ಸಂಸ್ಥೆಯವರು ಒಂದು ವ್ಯಾನ್ ನೀಡಿದ್ದಾರೆ. ಅದೇ ರೀತಿ ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ ದಿಂದಲೂ ಒಂದು ವ್ಯಾನ್ ಪಡೆಯಲು ಉದ್ದೇಶಿಸಲಾ ಗಿದೆ. ಪಾಲಿಕೆ ವ್ಯಾಪ್ತಿಯ ಯಾವುದೇ ಪ್ರದೇಶದಲ್ಲಿ 15 ಮಂದಿಗಿಂತ ಹೆಚ್ಚು ಮಂದಿ ಹಿರಿಯ ನಾಗರಿಕರು ಒಂದೇ ದಿನ ಲಸಿಕೆ ಪಡೆಯಲು ಸಿದ್ಧವಾದರೆ ವ್ಯಾನ್ ಸೌಲಭ್ಯ ಕಲ್ಪಿಸಲಾಗುವುದು. ಇದಕ್ಕಾಗಿ ಅವರು ಮುಂಗಡವಾಗಿ ಪಾಲಿಕೆ ಕಂಟ್ರೋಲ್ ರೂಂಗೆ (94498 41196) ಮಾಹಿತಿ ನೀಡ ಬೇಕಾಗುತ್ತದೆ ಎಂದು ಶಿಲ್ಪಾ ನಾಗ್ ತಿಳಿಸಿದರು.
ವಲಯವಾರು ವೃದ್ಧಾಶ್ರಮ, ನಿರಾಶ್ರಿತರ ಕೇಂದ್ರಗಳ ಮಾಹಿತಿ ಕಲೆ ಹಾಕುತ್ತಿದ್ದೇವೆ. ವೇಳಾಪಟ್ಟಿ ಸಿದ್ಧಪಡಿಸಿ ಆ ಪ್ರದೇಶಗಳ ಹಿರಿಯ ನಾಗರಿಕರನ್ನು ಕರೆತಂದು ಲಸಿಕೆ ಹಾಕಿಸಿ, ಮತ್ತೆ ಅವರ ಪ್ರದೇಶಗಳಿಗೆ ತಲುಪಿಸಲಾಗು ವುದು. ಇಡೀ ಜಿಲ್ಲೆಯಲ್ಲಿ 56 ಸಾವಿರ ಹಿರಿಯ ನಾಗರಿಕರು ಲಸಿಕೆ ಪಡೆದಿದ್ದು, ಮೈಸೂರು ನಗರ ವ್ಯಾಪ್ತಿಯಲ್ಲಿ ಶೇ.40 ರಷ್ಟು ಆಗಿದೆ. ಮಾ.31ರೊಳಗೆ ಉಳಿದವರಿಗೆ ಲಸಿಕೆ ಹಾಕಿಸಲು ಉದ್ದೇಶಿಸಲಾಗಿದೆ. ವೈಯಕ್ತಿಕವಾಗಿಯೂ ನಗರ ಪ್ರಾಥಮಿಕ ಆರೋಗ್ಯ ಕೇಂದ್ರಗಳಿಗೆ ಭೇಟಿ ನೀಡಿ, ಲಸಿಕೆ ಪಡೆಯಬಹುದು ಎಂದು ಹೇಳಿದರು.

`ಮೈಸೂರು ಮಿತ್ರ’ನೊಂದಿಗೆ ಮಾತನಾಡಿದ ಪಾಲಿಕೆ ಆರೋಗ್ಯಾಧಿಕಾರಿ ಡಾ.ನಾಗರಾಜು, ಹಿರಿಯ ನಾಗರಿ ಕರಿಗೆ ಲಸಿಕೆ ನೀಡುವ ಅಭಿಯಾನದಲ್ಲಿ ಗುರಿ ತಲುಪ ಬೇಕೆಂದು ಈ ಸೌಲಭ್ಯ ಕಲ್ಪಿಸಲಾಗಿದೆ. ಹಿರಿಯ ನಾಗರಿಕ ರಿಗೆ ಲಸಿಕೆ ನೀಡಲು ಪಾಲಿಕೆ ಕೋರಿಕೆ ಮೇರೆಗೆ ಟ್ರಾಮಾ ಕೇರ್ ಸೆಂಟರ್‍ನಲ್ಲಿ ಪ್ರತ್ಯೇಕವಾಗಿ ಎರಡು ಕೌಂಟರ್ ತೆರೆಯಲಾಗಿದೆ. ಇಂದು ಆಲನಹಳ್ಳಿಯ ವೃದ್ಧಾಶ್ರಮವೊಂ ದರ 40 ಮಂದಿಯನ್ನು ವ್ಯಾನ್‍ನಲ್ಲಿ ಕರೆದುತಂದು ಲಸಿಕೆ ಹಾಕಿಸಿ, ಮತ್ತೆ ಅವರ ಜಾಗಕ್ಕೆ ತಲುಪಿಸಲಾಗಿದೆ ಎಂದರು.

ಜೆಎಸ್‍ಎಸ್‍ನಿಂದ ಮಾ.31ರವರೆಗೆ ವ್ಯಾನ್ ಬಳಸಲು ನೀಡಿದ್ದಾರೆ. ಅಗತ್ಯವಿದ್ದರೆ ವಿಸ್ತರಣೆಗೂ ಸಮ್ಮತಿಸಿದ್ದಾರೆ. ವಾಹನದೊಂದಿಗೆ ಚಾಲಕರನ್ನು ಕೊಟ್ಟಿದ್ದು, ಡೀಸೆಲ್ ವ್ಯವಸ್ಥೆ ಪಾಲಿಕೆ ಮಾಡಲಿದೆ. ಈ ಸೌಲಭ್ಯ ಸಂಪೂರ್ಣ ಉಚಿತ ವಾಗಿದೆ. ನಗರ ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ವಾರದ 4 ದಿನಗಳು ಲಸಿಕೆ ಪಡೆಯಲು ಅವಕಾಶವಿದೆ. ಸೋಮವಾರ, ಬುಧವಾರ, ಶುಕ್ರವಾರ ಮತ್ತು ಶನಿವಾರ ಲಸಿಕೆ ನೀಡಲಾಗು ತ್ತದೆ. ಜಿಲ್ಲಾಸ್ಪತ್ರೆ ಹಾಗೂ ಟ್ರಾಮಾ ಕೇರ್ ಸೆಂಟರ್‍ನಲ್ಲಿ ಪ್ರತಿದಿನ ಲಸಿಕೆ ನೀಡಲಾಗುತ್ತದೆ ಎಂದು ಮಾಹಿತಿ ನೀಡಿದರು.