ಕೊಡಗಿನ ನಿರಾಶ್ರಿತರ ಶಿಬಿರದಲ್ಲಿ ಗೌರಿ ಹಬ್ಬದ ಸಂಭ್ರಮ

ಮಡಿಕೇರಿ: ಕೊಡಗಿನಲ್ಲಿ ಪ್ರಕೃತ್ತಿ ವಿಕೋಪದ ಹಿನ್ನಲೆಯಲ್ಲಿ ಗಣೇಶ ಚತುರ್ಥಿಗೆ ಕಾರ್ಮೋಡ ಕವಿದಂತಾಗಿದೆ. ಪುನರ್ವಸತಿ ಕೇಂದ್ರಗಳಲ್ಲಿಯೇ ಇರುವ ನೂರಾರು ಜನರು ಹಬ್ಬದ ಸಡಗರವಿಲ್ಲದೇ ಮಂಕಾಗಿದ್ದಾರೆ. ಆದರೆ, ಜಿಲ್ಲಾ ಉಸ್ತುವಾರಿ ಸಚಿವ ಸಾ.ರಾ.ಮಹೇಶ್ ಜಿಲ್ಲೆಯಲ್ಲಿನ 17 ಪುನರ್ವಸತಿ ಕೇಂದ್ರಗಳಲ್ಲಿರುವ ನಿರಾಶ್ರಿತರಿಗೆ ಗೌರಿಹಬ್ಬದ ಉಡುಗೊರೆಯಾಗಿ ಸರ್ಕಾರದಿಂದ ಮಹಿಳೆಯರಿಗೆ ರೇಷ್ಮೆ ಸೀರೆ, ಮಕ್ಕಳಿಗೆ ಬಟ್ಟೆ, ಪುರುಷರಿಗೆ ಷರ್ಟ್, ಪ್ಯಾಂಟ್ ವಿತರಿಸಿದರು.

ಮಡಿಕೇರಿಯಲ್ಲಿರುವ ಮೈತ್ರಿ ಸಮುದಾಯ ಭವನಕ್ಕೆ ಬಂದ ಸಚಿವರು ಇಲ್ಲಿನ ನಿರಾಶ್ರಿತರಿಗೆ ಬಟ್ಟೆ ವಿತರಿಸಿದರಲ್ಲದೇ ನಿರಾಶ್ರಿತ ಮಹಿಳೆ ಉದಯಗಿರಿಯ ಜಯಂತಿ ಅವರೊಂದಿಗೆ ಕುಳಿತು ಕೇಸರಿ ಬಾತ್ ಸವಿದರು. ಆ ಬಳಿಕ ಸುದ್ದಿಗಾರ ರೊಂದಿಗೆ ಮಾತನಾಡಿದ ಸಚಿವರು, ಈಗಾಗಲೇ ಮನೆ ಕಳೆದುಕೊಂಡವರಿಗೆ ರಾಜ್ಯ ಸರ್ಕಾರ ತೋಟಗಾರಿಕೆ, ಕೃಷಿ ಇಲಾಖೆಗಳಿಗೆ ಸೇರಿದ ತಲಾ 20 ಎಕರೆ ಜಾಗವನ್ನು ಗುರುತಿಸಿದೆ. 5 ಪಂಚಾಯತ್ ವ್ಯಾಪ್ತಿಯಲ್ಲಿ 30 ಎಕರೆ ಜಾಗವನ್ನೂ ಗುರುತಿಸಲಾಗಿದೆ. ಹಾಗೇ ಮಡಿಕೇರಿ ನಗರ ವ್ಯಾಪ್ತಿಯಲ್ಲಿ ಮನೆ ಕಳೆದುಕೊಂಡವರಿಗೆ 500 ಮನೆಗಳ ನಿರ್ಮಾಣವಾಗಬೇಕಾ ಗಿದ್ದು ಇದಕ್ಕಾಗಿ ಅರಣ್ಯ ಭೂಮಿಯನ್ನು ಮಡಿಕೇರಿ ಸಮೀಪ ಗುರುತಿಸಲಾಗಿದೆ ಎಂದು ಮಾಹಿತಿ ನೀಡಿದರು.

ಮನೆಯನ್ನು ತಾವೇ ನಿರ್ಮಿಸಲು ಮುಂದಾಗುವವರಿಗೆ ಪ್ರತೀ ಕುಟುಂಬಕ್ಕೆ 6 ಲಕ್ಷ ರೂಪಾಯಿ ನೀಡಲಿದೆ. ಮನೆಯನ್ನು ಕಟ್ಟಿಸಿ ಕೊಡಿ ಎಂದು ಬಯಸುವವರಿಗೆ ಸರ್ಕಾರವೇ ಮನೆ ನಿರ್ಮಿಸಲಿದೆ ಎಂದರಲ್ಲದೇ, ಶಾಶ್ವತವಾಗಿ ಸೂರು ದೊರಕುವವರೆಗೆ ಬಾಡಿಗೆ ಮನೆಯಲ್ಲಿ ಇರುತ್ತೇವೆ ಎಂದು ಬಯಸುವವರಿಗೆ ಮನೆ ಬಾಡಿಗೆಯನ್ನು ಸರ್ಕಾರವೇ ನೀಡಲಿದೆ ಎಂದು ತಿಳಿಸಿದರು. ನೂತನ ಮನೆಗಳನ್ನು 10 ತಿಂಗಳ ಅವಧಿಯಲ್ಲಿ ನಿರ್ಮಿಸಿಕೊಡಲಾಗುತ್ತದೆ ಎಂದೂ ಸಚಿವರು ಭರವಸೆ ನೀಡಿದರು.

ಕೇಂದ್ರದಿಂದ 4 ಜನರ ತಂಡ ಕೊಡಗಿನ ಅತಿವೃಷ್ಟಿ ಹಾನಿ ಪರಿಶೀಲನೆಗಾಗಿ ಜಿಲ್ಲೆಗೆ ಭೇಟಿ ನೀಡಿದ್ದು, ಈಗಾಗಲೇ ಸರ್ಕಾರದ ವತಿಯಿಂದ ಹಾನಿಯ ವಿವರಗಳನ್ನು ಈ ತಂಡಕ್ಕೆ ನೀಡಲಾಗಿದೆ ಎಂದು ತಿಳಿಸಿದ ಸಚಿವರು, ಕೇಂದ್ರದಿಂದ ಹೆಚ್ಚಿನ ಅನುದಾನ ಪ್ರಕೃತ್ತಿ ವಿಕೋಪ ಸಮಸ್ಯೆ ಪರಿಹಾರಕ್ಕೆ ಲಭಿಸುವ ನಿರೀಕ್ಷೆಯಿದೆ ಎಂದು ತಿಳಿಸಿದರು.

ರಾಜ್ಯ ಸಮ್ಮಿಶ್ರ ಸರ್ಕಾರ ಪತನವಾಗಲಿದೆ ಎಂಬುದೆಲ್ಲಾ ವದಂತಿಗಳು ಎಂದು ಹೇಳಿದ ಸಚಿವ ಸಾ.ರಾ. ಮಹೇಶ್, ಒಂದೇ ಸುಳ್ಳನ್ನು 100 ಬಾರಿ ಹೇಳಿ ಸತ್ಯವೆಂದು ಸಾಬೀತುಪಡಿಸುವ ವ್ಯರ್ಥ ಕಸರತ್ತಿನಲ್ಲಿ ಬಿಜೆಪಿ ತೊಡಗಿದೆ ಎಂದು ಟೀಕಿಸಿದರು.

ಜೆಡಿಎಸ್ ಮುಖಂಡ ರಾದ ಕೆ.ಎಂ.ಬಿ.ಗಣೇಶ್, ಹೊಸೂರು ಸತೀಶ್ ಜೋಯಪ್ಪ ಹಾಜರಿದ್ದರು.