ದಸರಾ ಉದ್ಘಾಟನೆ ವೇದಿಕೆಯಲ್ಲಿ ಅಪರಿಚಿತ ಮಹಿಳೆ ಪ್ರತ್ಯಕ್ಷ!

ಮೈಸೂರು: ಮುಖ್ಯಮಂತ್ರಿ ಹೆಚ್.ಡಿ.ಕುಮಾರ ಸ್ವಾಮಿ, ಇನ್ಫೋಸಿಸ್ ಫೌಂಡೇಷನ್ ಮುಖ್ಯಸ್ಥೆ ಡಾ.ಸುಧಾಮೂರ್ತಿ ಹಾಗೂ ಇನ್ನಿತರ ಸಚಿವರು, ಗಣ್ಯರು ಪಾಲ್ಗೊಂಡಿದ್ದ ದಸರಾ ಉದ್ಘಾಟನಾ ಸಮಾರಂಭದಲ್ಲಿ ಆಹ್ವಾನಿತರಲ್ಲದ ಅಪರಿಚಿತ ಮಹಿಳೆ ಯೊಬ್ಬರು ಗಣ್ಯರ ಸಾಲಿನಲ್ಲೇ ಆಸೀನರಾಗಿ ಅಚ್ಚರಿ ಮೂಡಿಸಿದ ಪ್ರಸಂಗ ಇಂದು ಮೈಸೂರಿನ ಚಾಮುಂಡಿಬೆಟ್ಟದಲ್ಲಿ ನಡೆಯಿತು.

ಮುಖ್ಯಮಂತ್ರಿಗಳೊಂದಿಗೆ ಚಾಮುಂಡೇಶ್ವರಿ ದರ್ಶನ ಮಾಡಿ ಕೊಂಡು ಹಿಂದಿರುಗುತ್ತಿದ್ದ ಸುಧಾಮೂರ್ತಿ ಅವರಿಗೆ ಎದುರಾದ ಮಹಿಳೆ, ನಗೆ ಬೀರಿದರು. ನಂತರ ಆ ಮಹಿಳೆ ಡಾ.ಸುಧಾ ಮೂರ್ತಿ ಹಾಗೂ ಮುಖ್ಯಮಂತ್ರಿಗಳೊಂದಿಗೆ ವೇದಿಕೆಯನ್ನೇರಿ ನೇರವಾಗಿ ಪಕ್ಕದಲ್ಲೇ ಬೆಳ್ಳಿ ರಥದಲ್ಲಿ ಪ್ರತಿಷ್ಠಾಪಿಸಿದ್ದ ತಾಯಿ ಚಾಮುಂಡೇಶ್ವರಿ ಉತ್ಸವಮೂರ್ತಿ ಬಳಿಗೂ ತೆರಳಿದರು. ಗಣ್ಯರು ಹಾಗೂ ಅಧಿಕಾರಿಗಳಿಗೆ ಅಚ್ಚರಿಯಾಯಿತಾದರೂ, ಸುಧಾಮೂರ್ತಿ ಅವರ ಸಂಬಂಧಿಕರೋ, ಅವರ ಸಂಸ್ಥೆಯ ಹಿರಿಯ ಅಧಿಕಾರಿಯೋ ಅಥವಾ ಆತ್ಮೀಯರಿರಬೇಕೆಂದುಕೊಂಡು ಸುಮ್ಮನಾದರು. ಅಧಿದೇವತೆಗೆ ಪುಷ್ಪಾರ್ಚನೆ ನಡೆಯಿತು.

ಆಗಲೂ ಆ ಮಹಿಳೆ ನೂಕು-ನುಗ್ಗಲಿನಲ್ಲಿ ಸುಧಾಮೂರ್ತಿ ಅವರಿಗೆ ಒರಗಿ, ಅವರ ಮುಖವನ್ನೂ ತಾಗಿಸಿ ತಟ್ಟೆಯಿಂದ ಹೂ ತೆಗೆದುಕೊಂಡು ಪುಷ್ಪಾರ್ಚನೆ ಮಾಡಿದರು.ಆ ವೇಳೆ ಸುಧಾಮೂರ್ತಿ ಅವರಿಗೆ ತುಸು ಕಿರಿಕಿರಿ ಉಂಟಾಯಿತಾದರೂ, ಸರಳ-ಸಜ್ಜನಿಕೆಯ ಅವರು, ಅದನ್ನು ವ್ಯಕ್ತಪಡಿಸದೆ ತಮ್ಮ ಆಸನಕ್ಕೆ ಬಂದು ಕುಳಿತರು. ನಂತರ ಆ ಮಹಿಳೆಯೂ ಅವರ ಪಕ್ಕದ ಆಸನದಲ್ಲೇ ಕುಳಿತುಕೊಳ್ಳಲೆತ್ನಿಸಿದರಾದರೂ, ಅದನ್ನು ಗಮನಿಸಿದ ಮುಖ್ಯಮಂತ್ರಿಗಳು ಪಕ್ಕದ ಸೀಟಿನತ್ತ ಕೈತೋರಿಸಿದಾಗ ಸಚಿವೆ ಜಯಮಾಲ ಪಕ್ಕ ಆಸೀನರಾದರು.

ಇದರಿಂದ ಕಸಿವಿಸಿಗೊಂಡ ಅಧಿಕಾರಿಗಳು, ಮಹಿಳೆ ಯಾರೆಂದು ತಿಳಿಯಲು ಕಾರ್ಯಕ್ರಮ ನಿರೂಪಕ ಮಂಜುನಾಥ್ ಮೂಲಕ ಕೇಳಿಸಿದಾಗ ಆ ಮಹಿಳೆಯೇ ತನ್ನ ಹೆಸರು, ವೃತ್ತಿಯನ್ನು ಬರೆದುಕೊಟ್ಟರು.ಆದರೆ ಸ್ವಾಗತ ಮಾಡುವಾಗ ಅವರ ಹೆಸರನ್ನು ಹೇಳಲಿಲ್ಲ. ಕಡೆಗೆ ಸಂಶಯಗೊಂಡ ಅಧಿಕಾರಿಗಳು, ಸಭಿಕರ ಸಾಲಿನ ಮುಂಚೂಣಿಯಲ್ಲಿ ಆಸೀನರಾಗಿದ್ದ ಎಲ್.ಆರ್.ನಾರಾಯಣಮೂರ್ತಿ ಅವರನ್ನು ಕೇಳಿದಾಗ ಆ ಮಹಿಳೆ ಯಾರೆಂದು ಗೊತ್ತಿಲ್ಲ ಎಂದು ತಿಳಿಸಿದರು.

ಅಷ್ಟರಲ್ಲಾಗಲೇ ಕಾರ್ಯಕ್ರಮ ಅರ್ಧ ಮುಗಿದಿದ್ದರಿಂದ ಮಧ್ಯದಲ್ಲಿ ಎಬ್ಬಿಸಿದರೆ, ಅಭಾಸವಾಗುತ್ತದೆ ಎಂದು ಅಧಿಕಾರಿಗಳು ಸುಮ್ಮನಾದರು. ಕೆಲ ನಿಮಿಷದಲ್ಲೇ ಸಮಾರಂಭ ಮುಗಿದೇ ಹೋಯಿತು. ನಂತರ ಆ ಮಹಿಳೆ ಗಣ್ಯರೊಂದಿಗೆ ವೇದಿಕೆಯಿಂದಿಳಿದು ಹೊರಟರು.

ಇಲ್ಲಿ ಗಮನಿಸಬೇಕಾದ ಅಂಶವೆಂದರೆ, ಝಡ್‍ಪ್ಲಸ್ ಸೆಕ್ಯೂರಿಟಿ ಇರುವ ಸಿಎಂ, ದಸರಾ ಉದ್ಘಾಟಕರಾದ ಡಾ.ಸುಧಾಮೂರ್ತಿ ಹಾಗೂ ಕ್ಯಾಬಿನೆಟ್ ದರ್ಜೆಯ ಸಚಿವರಿರುವ ಸಮಾರಂಭದ ವೇದಿಕೆಗೆ ಅಪರಿಚಿತ ಮಹಿಳೆ ಆಗಮಿಸಿ ಆಸೀನರಾದರೂ ಪೊಲೀಸ್ ಅಧಿಕಾರಿಗಳು ಸುಮ್ಮನಾದದ್ದು ತೀವ್ರ ಅಚ್ಚರಿ ಮೂಡಿಸಿದೆ.

ಆಕೆ ಯಾರು ಎಂಬುದು ತಿಳಿದ ಮೇಲಾದರೂ ಭದ್ರತೆ, ಶಿಷ್ಟಾಚಾರ ಪಾಲಿಸದಿರುವುದು ಇನ್ನು ಅಚ್ಚರಿಗೊಳಿಸಿದೆ. ಸುಧಾಮೂರ್ತಿ ಅವರ ಪತಿ ನಾರಾಯಣಮೂರ್ತಿ ಅವರೇ ವೇದಿಕೆ ಏರದೆ ಸಭಿಕರೊಂದಿಗೆ ಆಸೀನರಾಗಿರುವಾಗ ಆಹ್ವಾನಿತರಲ್ಲದ ಹಾಗೂ ಅಪರಿಚಿತ ಮಹಿಳೆಗೆ ವೇದಿಕೆ ಏರಿ, ಗಣ್ಯರ ಸಾಲಿನಲ್ಲಿ ಕೂರಲು ಅವಕಾಶ ಮಾಡಿಕೊಟ್ಟಿರುವುದು ಎಲ್ಲರನ್ನು ಮೂಕವಿಸ್ಮಿತರನ್ನಾಗಿಸಿತು.

ಒಂದು ವೇಳೆ ಏನಾದರೂ ಅಚಾತುರ್ಯ, ಅನಾಹುತ ಉಂಟಾಗಿದ್ದರೆ ಯಾರು ಹೊಣೆ? ಝಡ್‍ಪ್ಲಸ್ ಭದ್ರತೆ ಇರಬೇಕಾದ ಸಿಎಂ ಕಾರ್ಯಕ್ರಮದಲ್ಲಿ ಭದ್ರತೆ ಮತ್ತು ಶಿಷ್ಟಾಚಾರದ ನೀತಿ-ನಿಯಮಗಳನ್ನು ಪಾಲಿಸದೇ ಇರುವ ಸಂಬಂಧಪಟ್ಟ ಅಧಿಕಾರಿಗಳು ನಿರ್ಲಕ್ಷ್ಯ ವಹಿಸಿದ್ದೇಕೆ ಎಂಬ ಪ್ರಶ್ನೆ ಉದ್ಭವಿಸಿದೆ.

ಈ ಅವಾಂತರ ತಿಳಿದ ನಂತರ ಪ್ರೋಟೋಕಾಲ್, ಸಿಎಂ ಭದ್ರತೆ, ಸ್ಥಳೀಯ ಪೊಲೀಸ್ ಅಧಿಕಾರಿಗಳು ಹಾಗೂ ವೇದಿಕೆ ನಿರ್ವಹಣೆ ಜವಾಬ್ದಾರಿ ಹೊತ್ತಿದ್ದ ಅಧಿಕಾರಿಗಳು ಪೀಕಲಾಟಕ್ಕೆ ಸಿಲುಕಿದ್ದಾರೆ.