ಮೈಸೂರು ಮೃಗಾಲಯದಲ್ಲಿ ಅಸ್ಸಾಂ ಅತಿಥಿಗಳ ದರ್ಶನ!

ಮೈಸೂರು,ಜ.1(ಎಂಟಿವೈ)-ಅಸ್ಸಾಂ ಮೃಗಾಲಯದಿಂದ ಮೈಸೂರು ಮೃಗಾ ಲಯಕ್ಕೆ ತಂದಿರುವ ಹೂಲಾಕ್ ಗಿಬ್ಬನ್ ಪ್ರಾಣಿಯನ್ನು ಪ್ರವಾಸಿಗರ ವೀಕ್ಷಣೆಗಾಗಿ ಬುಧವಾರ ಅರಣ್ಯ ಸಚಿವ ಸಿ.ಸಿ. ಪಾಟೀಲ್ ಬಿಡುಗಡೆ ಮಾಡಿದರು.

ಪ್ರಾಣಿ ವಿನಿಮಯ ಯೋಜನೆಯಡಿ ಅಸ್ಸಾಂ ಮೃಗಾಲಯಕ್ಕೆ ಜಿರಾಫೆ ನೀಡಿ, ಒಂದು ಜೋಡಿ ಹೂಲಾಕ್ ಗಿಬ್ಬನ್ ದೀಪು(ಗಂಡು), ಮುನ್ನಿ(ಹೆಣ್ಣು), ಒಂದು ಕಪ್ಪು ಹೆಣ್ಣು ಚಿರತೆ, ಒಂದು ಘೇಂಡಾ ಮೃಗವನ್ನು ಡಿ.13ರಂದು ತರಲಾಗಿತ್ತು. ಅಂದಿನಿಂದ ಬೋನ್‍ನಲ್ಲಿಟ್ಟು ಇಲ್ಲಿನ ವಾತಾವರಣಕ್ಕೆ ಹೊಂದಿಕೊಳ್ಳುತ್ತಿರುವ ಬಗ್ಗೆ ಸೂಕ್ಷ್ಮವಾಗಿ ಗಮನಿಸಲಾಗುತ್ತಿತ್ತು. ಮೃಗಾಲಯಕ್ಕೆ ಬರುವ ಪ್ರವಾಸಿಗರಿಗೆ ಹೊಸ ವರ್ಷದ ಕೊಡುಗೆ ನೀಡುವ ನಿಟ್ಟಿ ನಲ್ಲಿ ಇಂದು ಮಧ್ಯಾಹ್ನ ಅರಣ್ಯ ಸಚಿವ ಸಿ.ಸಿ.ಪಾಟೀಲ್ ಬೋನ್‍ನಲ್ಲಿದ್ದ ಹೂಲಾಕ್ ಗಿಬ್ಬನ್ ಜೋಡಿಯನ್ನು ಪ್ರವಾಸಿಗರ ವೀಕ್ಷಣೆಗೆ ಸಮರ್ಪಿಸಿದರು.

ಬಳಿಕ ಪತ್ರಕರ್ತರೊಂದಿಗೆ ಮಾತ ನಾಡಿದ ಅವರು, ಹೊಸ ವರ್ಷದ ಹಿನ್ನೆಲೆಯಲ್ಲಿ ಮೃಗಾಲಯಕ್ಕೆ ಬರುವ ಪ್ರವಾಸಿಗರ ವೀಕ್ಷಣೆಗೆ ಹೂಲಾಕ್ ಗಿಬ್ಬನ್ ಪ್ರಾಣಿಗಳ ವೀಕ್ಷಣೆಗೆ ಇಂದಿನಿಂದ ಅವಕಾಶ ನೀಡಲಾಗುತ್ತಿದೆ. ಸಸ್ಯಹಾರಿ ಯಾಗಿರುವ ಈ ಪ್ರಾಣಿ ಆಕರ್ಷಕ ವಾಗಿದ್ದು, ಜನರನ್ನು ರಂಜಿಸಲಿದೆ. ಹಣ್ಣು-ಹಂಪಲನ್ನು ಮಾತ್ರ ಸೇವಿಸಲಿದೆ. ಗಿಬ್ಬನ್‍ಗಳು ತುಂಟಾಟ ಮಾಡುತ್ತಾ, ಪ್ರವಾಸಿಗರಿಗೆ ವಿಶೇಷ ಮನರಂಜನೆ ನೀಡಲಿವೆ. ಮುಂದಿನ ಬಜೆಟ್‍ನಲ್ಲಿ ಅರಣ್ಯ ಇಲಾಖೆಗೆ ಮೃಗಾಲಯದ ಆಕರ್ಷಣೆ ಹೆಚ್ಚಿಸಲು ಹೆಚ್ಚಿನ ಅನುದಾನ ನೀಡುವಂತೆ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸುತ್ತೇವೆ ಎಂದು ಭರವಸೆ ನೀಡಿದರು.

ರಾಷ್ಟ್ರ ಹಾಗೂ ರಾಜ್ಯದ ಮೃಗಾಲಯ ಗಳಲ್ಲಿ ಮೈಸೂರಿನ ಮೃಗಾಲಯ ಮುಂಚೂಣಿಯಲ್ಲಿದೆ. ಅಂತರರಾಷ್ಟ್ರೀಯ ಮಟ್ಟದಲ್ಲೂ ಮೈಸೂರು ಮೃಗಾಲಯಕ್ಕೆ ಒಳ್ಳೆಯ ಹೆಸರಿದೆ. ಇದರ ಕೀರ್ತಿಯನ್ನು ಮತ್ತಷ್ಟು ಹೆಚ್ಚಿಸಲು ಮೈಸೂರು ಭಾಗದ ಹಿರಿಯ ಶಾಸಕರಾದ ಎಸ್.ಎ.ರಾಮ ದಾಸ್ ಅವರ ಸಹಕಾರ ಪಡೆದು ವಿವಿಧ ಕಾರ್ಯಕ್ರಮ ರೂಪಿಸಲಾಗುತ್ತದೆ. ಈ ಮೃಗಾಲಯವನ್ನು ವಿಶ್ವದಲ್ಲೇ ನಂಬರ್ ಒನ್ ಆಗಿ ಮಾಡಲು ಮುಖ್ಯಮಂತ್ರಿ ಯಡಿಯೂರಪ್ಪ ಅವರ ಸಹಕಾರ ಪಡೆ ಯುವುದಾಗಿ ತಿಳಿಸಿದರು.

ಘೇಂಡಾಮೃಗಗಳ ತೂಕ: ಇದೇ ವೇಳೆ ಈ ಹಿಂದೆ ತರಿಸಿದ್ದ ಒಬಾನ್ ಹಾಗೂ ಬೀಟಾ ಎಂಬ ಹೆಸರಿನ ಒಂದು ಜೊತೆ ಘೇಂಡಾಮೃಗಗಳ ತೂಕವನ್ನು ಪರಿಶೀಲಿ ಸಿದರು. ಕ್ರಮವಾಗಿ ಓಬಾನ್ 850, ಬೀಟಾ 1,100 ಕೆ.ಜಿ.ತೂಕ ಇರುವುದು ಕಂಡುಬಂದಿತು.

ಈ ಸಂದರ್ಭದಲ್ಲಿ ಶಾಸಕ ಎಸ್.ಎ. ರಾಮದಾಸ್, ಕರ್ನಾಟಕ ಮೃಗಾಲಯ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಬಿ.ಪಿ.ರವಿ, ಸಿಸಿಎಫ್ ಟಿ.ಹೀರಾಲಾಲ್, ಮೃಗಾಲಯದ ಕಾರ್ಯನಿರ್ವಾಹಕ ನಿರ್ದೇಶಕ ಅಜಿತ್ ಕುಲಕರ್ಣಿ, ಡಿಸಿಎಫ್ ಗಳಾದ ಡಾ.ಕೆ.ಸಿ.ಪ್ರಶಾಂತ್ ಕುಮಾರ್, ಅಲೆಗ್ಸಾಂಡರ್, ಆರ್‍ಎಫ್‍ಓ ಗೋವಿಂದ ರಾಜು, ಡಿಆರ್‍ಎಫ್‍ಓ ಮಂಜುನಾಥ್, ಬಿಜೆಪಿ ಮುಖಂಡ ಹೆಚ್.ವಿ.ರಾಜೀವ್ ಇನ್ನಿತರರು ಉಪಸ್ಥಿತರಿದ್ದರು.