ಬೆನ್ನಿಗೆ ಚೂರಿ ಹಾಕುವ ಕಾಂಗ್ರೆಸ್ಸಿಗರ ಅಗತ್ಯ ನನಗಿಲ್ಲ: ಕುಮಾರಸ್ವಾಮಿ

ಬೆಂಗಳೂರು: ಮಂಡ್ಯದಲ್ಲಿ ಕೆಲ ಕಾಂಗ್ರೆಸ್ ಮುಖಂಡರು ನಮ್ಮ ಬೆನ್ನಿಗೆ ಚೂರಿ ಹಾಕುತ್ತಿದ್ದು, ಅಂತಹವರ ಅವಶ್ಯ ಕತೆ ನನಗಿಲ್ಲ ಎಂದು ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಹೇಳಿದರು.

ಪದ್ಮನಾಭನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮೂಲ ಕಾಂಗ್ರೆಸ್ಸಿ ಗರು ನಿಖಿಲ್‍ಗೆ ಆಶೀರ್ವಾದ ಮಾಡಿದ್ದಾರೆ. ಆದರೆ ಹಿಂಬಾಗಿಲಿನಿಂದ ಬಂದವರು ಬಹಳ ಮುಂದುವರೆದಿದ್ದಾರೆ ಎಂದು ಎನ್. ಚೆಲುವರಾಯಸ್ವಾಮಿ ಮತ್ತು ರಮೇಶ್ ಬಂಡಿಸಿದ್ದೇಗೌಡ ಅವರ ಹೆಸರು ಹೇಳದೇ ಪರೋಕ್ಷವಾಗಿ ವಾಗ್ದಾಳಿ ನಡೆಸಿದರು.

ಚುನಾವಣೆ ಎದುರಿಸಲು ನಮ್ಮ ಕಾರ್ಯ ಕರ್ತರೇ ಸಮರ್ಥರಿದ್ದಾರೆ. ನಮ್ಮ ಬೆನ್ನಿಗೆ ಚೂರಿ ಹಾಕುತ್ತಿರುವ ಕಾಂಗ್ರೆಸ್ ಮುಖಂಡರ ಬಳಿ ಸ್ವಾಭಿಮಾನ ಕಳೆದುಕೊಂಡು ಸಹಾಯ ಬೇಡುವ ದುಸ್ಥಿತಿ ನಮಗಿಲ್ಲ ಎಂದರು.

ನಿಖಿಲ್ ಇಂದು ಒಂದು ಸೆಟ್ ನಾಮಪತ್ರ ವನ್ನು ಸಾಂಕೇತಿಕವಾಗಿ ಸಲ್ಲಿಸಬೇಕಾಗಿತ್ತು. ಆದರೆ ಕಾರ್ಯಕರ್ತರಲ್ಲಿ ಗೊಂದಲ ಉಂಟಾಗಬಹುದು ಎಂಬ ಕಾರಣದಿಂದ ಅವರು ಮಾ.25ರಂದು ನಾಮಪತ್ರ ಸಲ್ಲಿ ಸಲಿದ್ದಾರೆ. ಅಂದು ಬೃಹತ್ ಸಮಾವೇಶ ವನ್ನು ಏರ್ಪಡಿಸಲಾಗಿದೆ ಎಂದು ಹೇಳಿ ದರು. ನೆಲಮಂಗಲ ಅಥವಾ ಬೆಂಗಳೂರಿ ನಲ್ಲಿ ಮಾ.31ರಂದು ಬೃಹತ್ ಸಮಾವೇಶ ಏರ್ಪಡಿಸಲಾಗುತ್ತಿದ್ದು, ಅದರಲ್ಲಿ 5 ಲಕ್ಷ ಕಾರ್ಯಕರ್ತರು ಸಮಾವೇಶಗೊಳ್ಳುವ ನಿರೀಕ್ಷೆಯಿದೆ. ಅಂದಿನಿಂದಲೇ ಕಾಂಗ್ರೆಸ್ ಮತ್ತು ಜೆಡಿಎಸ್ ಮೈತ್ರಿ ಪ್ರಚಾರ ಅಧಿಕೃತ ವಾಗಿ ಆರಂಭವಾಗಲಿದೆ ಎಂದರು.

ಕಾಂಗ್ರೆಸ್ ಮುಖಂಡರ ಜೊತೆ ಡಿಕೆಶಿ ಸಭೆ: ಬುಧವಾರ ಸುಮಲತಾ ಅವರು ನಡೆಸಿದ ಸಮಾವೇಶದಲ್ಲಿ ಕಾಂಗ್ರೆಸ್ ಕಾರ್ಯಕರ್ತರು ಹಾಗೂ ಅಂಬರೀಷ್ ಅಭಿಮಾನಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿದ್ದ ಹಿನ್ನೆಲೆಯಲ್ಲಿ ಜಲ ಸಂಪನ್ಮೂಲ ಸಚಿವ ಡಿ.ಕೆ.ಶಿವಕುಮಾರ್ ಅವರು ಮಂಡ್ಯದ ಕಾಂಗ್ರೆಸ್ ಮುಖಂಡರ ಸಭೆಯನ್ನು ರಾತ್ರೋ-ರಾತ್ರಿ ಕರೆದಿದ್ದರು.

ಮಾಜಿ ಸಚಿವ ಆತ್ಮಾನಂದ, ಅಂಬರೀಷ್ ಅಭಿಮಾನಿಗಳಾದ ಅಮರಾವತಿ ಚಂದ್ರಶೇಖರ್, ಅವರ ಸಹೋದರ ನಾಗರಾಜು, ಮೈಷುಗರ್ ಮಾಜಿ ಅಧ್ಯಕ್ಷರಾದ ರಾಮಲಿಂಗಯ್ಯ ಮತ್ತು ಶಿವಾನಂದ ಅವರನ್ನು ತಮ್ಮ ನಿವಾಸಕ್ಕೆ ಕರೆಸಿಕೊಂಡ ಡಿ.ಕೆ.ಶಿವಕುಮಾರ್, ಮೈತ್ರಿ ಪಕ್ಷದ ಅಭ್ಯರ್ಥಿ ನಿಖಿಲ್ ಕುಮಾರಸ್ವಾಮಿ ಪರ ಚುನಾವಣೆಯಲ್ಲಿ ಕೆಲಸ ಮಾಡುವಂತೆಯೂ ಕಾಂಗ್ರೆಸ್ ಕಾರ್ಯಕರ್ತರಾಗಲೀ, ಅಂಬರೀಷ್ ಅಭಿಮಾನಿಗಳಾಗಲೀ, ಸುಮಲತಾ ಪಾಳಯಕ್ಕೆ ಹೋಗದಂತೆ ನೋಡಿ ಕೊಳ್ಳಬೇಕೆಂದು ಸೂಚನೆ ನೀಡಿದರು.

ಇಂದು ಸುದ್ದಿಗಾರರ ಜೊತೆ ಮಾತನಾಡಿದ ಡಿಕೆಶಿ, ನಾನು ಟ್ರಬಲ್ ಶೂಟರ್ ಅಲ್ಲ. ನಮ್ಮಲ್ಲಿ ಟ್ರಬಲ್ಲೂ ಇಲ್ಲ, ಶೂಟೂ ಇಲ್ಲ. ನಾವು ಮೃದು ಹೃದಯದೊಂದಿಗೆ ಕೆಲಸ ಮಾಡುವವರು. ಮಂಡ್ಯದಲ್ಲಿ ನಿನ್ನೆ ಸುಮಲತಾ ನಡೆಸಿದ ಸಮಾವೇಶದಲ್ಲಿ ಸಾಕಷ್ಟು ಜನ ಸೇರಿದ್ದಾರೆ. ಹಾಗೆಂದ ಮಾತ್ರಕ್ಕೆ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಆತಂಕಕ್ಕೊಳಗಾಗಿಲ್ಲ. ಅವರು ರಿಸ್ಕ್ ತೆಗೆದುಕೊಂಡು ರಾಜಕೀಯ ಮಾಡುವವರು. ಮಂಡ್ಯದಲ್ಲಿ ಪರಿಸ್ಥಿತಿ ಹೀಗೇ ಇರುವುದಿಲ್ಲ. ಬದಲಾವಣೆ ಆಗುತ್ತದೆ. ಅಲ್ಲಿನ ಮುಖಂಡರಿಗೆ ಹಾಗೂ ಕಾರ್ಯಕರ್ತರಿಗೆ ಸ್ವಲ್ಪ ಬೇಸರವಾಗಿದೆ. ಅದೆಲ್ಲಾ ಸರಿಯಾಗುತ್ತದೆ. ನನಗೆ ಮಂಡ್ಯ ಜವಾಬ್ದಾರಿಯನ್ನು ನೀಡಿದ್ದಾರೆ. ನಾನು ಎಲ್ಲರನ್ನೂ ಕರೆದು ಮಾತನಾಡಿಸುತ್ತೇನೆ ಎಂದರು.