ಕೊಡಗಿನ ಪೊಲೀಸರಿಂದ ವಲಸೆ ಕಾರ್ಮಿಕರ ದಾಖಲಾತಿ ಪರಿಶೀಲನೆ

ಮಡಿಕೇರಿ, ಜ.23(ಪ್ರಸಾದ್, ಸದಾ ನಂದ)- ಕೊಡಗಿನಲ್ಲಿ ಉಗ್ರ ಚಟುವಟಿಗೆ, ಮಂಗಳೂರು ಏರ್‍ಪೋರ್ಟ್ ಬಾಂಬ್ ಪ್ರಕರಣ ಮತ್ತು ಕೊಡಗು ಜಿಲ್ಲೆಯ ಕಾಫಿ ತೋಟಗಳಲ್ಲಿ ಹೊರ ರಾಜ್ಯದ ಅಪರಿಚಿತ ಕಾರ್ಮಿಕರು ಕೆಲಸ ಮಾಡುತ್ತಿರುವ ಬಗ್ಗೆ ಕೊಡಗು ಪೊಲೀಸರಿಗೆ ದೂರುಗಳು ಬಂದ ಹಿನ್ನಲೆಯಲ್ಲಿ ಇಂದು ಕೊಡಗು ಜಿಲ್ಲೆಯಾದ್ಯಂತ ಸಹಸ್ರ ಸಂಖ್ಯೆಯ ವಲಸೆ ಕಾರ್ಮಿಕರ ದಾಖಲೆಗಳನ್ನು ಪರಿ ಶೀಲನೆಗೆ ಒಳಪಡಿಸಲಾಯಿತು.

ಹೊರ ರಾಜ್ಯದ ಕಾರ್ಮಿಕರನ್ನು ಕೆಲಸಕ್ಕೆ ಸೇರಿಸಿಕೊಂಡಿರುವ ತೋಟಗಳ ಮಾಲೀಕರು, ಹೊಟೇಲ್, ರೆಸಾರ್ಟ್, ಬಾರ್‍ಗಳು, ಕಟ್ಟಡ ಕಾಮಗಾರಿ ನಿರ್ವಹಿಸುತ್ತಿರುವ ಗುತ್ತಿಗೆದಾರ ರಿಗೆ ಈ ಮೊದಲೇ ನೋಟಿಸ್ ಕೂಡ ನೀಡ ಲಾಗಿತ್ತು. ಈ ಹಿನ್ನಲೆಯಲ್ಲಿ ಮಡಿಕೇರಿಯ ಖಾಸಗಿ ಹೊಟೇಲ್‍ನಲ್ಲಿ ಬೆಳಿಗ್ಗೆ 7 ಗಂಟೆಯಿಂದಲೇ ಕಾರ್ಮಿಕರ ದಾಖಲೆ ಗಳನ್ನು ಪರಿಶೀಲನೆಗೆ ಒಳಪಡಿಸಲಾ ಯಿತು. ತೋಟಗಳ ಮಾಲೀಕರು, ಕಟ್ಟಡ ಗುತ್ತಿಗೆ ದಾರರು, ಕಾರ್ಮಿಕರನ್ನು ಕೆಲಸಕ್ಕೆ ಬಿಟ್ಟ ಏಜೆಂಟ್‍ಗಳು ತಮ್ಮ ತಮ್ಮ ವಾಹನಗಳಲ್ಲಿ ಕಾರ್ಮಿಕರನ್ನು ಕರೆತಂದು ಪರಿಶೀಲನೆಗೆ ಒಳಪಡಿಸಿದರು.

ಈ ಪೈಕಿ ಬಿಹಾರ, ಪಶ್ಚಿಮ ಬಂಗಾಳ, ಉತ್ತರ ಪ್ರದೇಶ, ಅಸ್ಸಾಂ ಮತ್ತಿತ್ತರ ಕಡೆ ಗಳ ಕಾರ್ಮಿಕರು ಅತ್ಯಧಿಕ ಸಂಖ್ಯೆಯಲ್ಲಿ ಆಗಮಿಸಿದ್ದರು. ಕೆಲವರು ಪಾನ್‍ಕಾರ್ಡ್, ಆಧಾರ್ ಕಾರ್ಡ್, ಮತದಾನ ಗುರುತಿನ ಚೀಟಿ, ಶಾಲಾ ದಾಖಲಾತಿ, ತಮ್ಮ ಊರು ಗಳ ಗ್ರಾಮ ಪಂಚಾಯಿತಿಗಳು ನೀಡಿದ್ದ ವಾಸ ಧೃಡೀಕರಣ ಪತ್ರಗಳ ಅಸಲಿ ಪ್ರತಿ ಗಳನ್ನು ತಂದು ಪೊಲೀಸರ ದಾಖಲಾತಿ ಪರಿಶೀಲನೆಯಲ್ಲಿ ಭಾಗವಹಿಸಿದ್ದು ಕಂಡು ಬಂತು. ಹೀಗಾಗಿ ಇಂದು ಮಡಿಕೇರಿ ನಗರದ ತುಂಬಾ ಹೊರ ರಾಜ್ಯದ ಕಾರ್ಮಿಕರೇ ಕಂಡು ಬಂದರು. ಪೊಲೀಸ ರ ಈ ಕ್ರಮಕ್ಕೆ ಸಾರ್ವಜನಿಕ ವಲಯದಲ್ಲಿ ಮೆಚ್ಚುಗೆಯೂ ವ್ಯಕ್ತವಾಯಿತು.

ಕೊಡಗಿನ ಕಾಫಿ ತೋಟಗಳಲ್ಲಿರುವ ವಲಸೆ ಕಾರ್ಮಿಕರ ಗುರುತು ಪರಿಶೀಲನಾ ಕಾರ್ಯದ ಕುರಿತು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಜಿಲ್ಲಾ ಪೊಲೀಸ್ ವರಿಷ್ಠಾ ಧಿಕಾರಿ ಡಾ. ಸಮನ, ಜಿಲ್ಲೆ ಹಾಗೂ ದೇಶದ ಭದ್ರತಾ ಹಿತದೃಷ್ಟಿಯಿಂದ ದಾಖ ಲಾತಿ ಪರಿಶೀಲನೆಯನ್ನು ನಡೆಸಲಾಗಿದೆ. ಕೊಡಗು ಜಿಲ್ಲೆಯ 3 ತಾಲೂಕುಗಳಲ್ಲೂ ಈ ದಾಖಲಾತಿ ಪರಿಶೀಲನೆ ಕಾರ್ಯ ನಡೆಸಲಾಗಿದೆ. ಅಂದಾಜು 5 ಸಾವಿರ ಕಾರ್ಮಿಕರ ದಾಖಲಾತಿಗಳನ್ನು ಆನ್‍ಲೈನ್ ಮೂಲಕ ಪರಿಶೀಲನೆ ನಡೆಸಲಾಗಿದೆ. ಆಧಾರ್ ಕಾರ್ಡ್, ಪಾನ್ ಕಾರ್ಡ್, ವೋಟರ್ ಐಡಿಗಳು ಆನ್‍ಲೈನ್ ಪೋರ್ಟಲ್ ನಲ್ಲಿಯೂ, ಶಾಲಾ ದಾಖಲಾತಿಗಳು, ಅವರ ಊರಿನ ಗ್ರಾಮ ಪಂಚಾಯಿತಿಗಳು ನೀಡಿರುವ ವಿವಿಧ ದಾಖಲಾತಿಗಳ ಪ್ರತಿಯನ್ನು ಕೂಡ ಸಂಗ್ರಹಿಸಲಾಗಿದೆ.

ಈ ಪೈಕಿ 500 ಮಂದಿ ಕಾರ್ಮಿಕರು ಪೊಲೀಸ್ ಇಲಾಖೆ ಕೇಳಿದ್ದ ಅಸಲಿ ದಾಖಲಾತಿಗಳನ್ನು ತೋರಿಸಲು ವಿಫಲರಾಗಿ ದ್ದಾರೆ. ಕೆಲವರು ದಾಖಲಾತಿಗಳ ಜೆರಾಕ್ಸ್ ಪ್ರತಿಗಳನ್ನು ನೀಡಿದ್ದಾರೆ. ಅಸಲಿ ದಾಖಲಾತಿ ಗಳು ಬೇರೆಯವರ ಬಳಿಯಿರುವ, ತಮ್ಮ ಊರಿನಲ್ಲಿದೆ ಎಂದೂ ಕೆಲವರು ಹೇಳಿ ದ್ದಾರೆ. ಹೀಗಾಗಿ ಇಂತಹ ಕಾರ್ಮಿಕರನ್ನು ಅಪೂರ್ಣ ದಾಖಲಾತಿ ಹೊಂದಿದವರೆಂದು ವರ್ಗ ಮಾಡಲಾಗಿದೆ. ಇವರು ಅಪೂರ್ಣ ದಾಖಲಾತಿ ನೀಡಿದ ಹಿನ್ನಲೆಯಲ್ಲಿ ಅದಕ್ಕೆ ವಿವಿಧ ಕಾರಣಗಳನ್ನು ನೀಡಿದ್ದಾರೆ. ಹೀಗಾಗಿ ಇಂತಹ ಕಾರ್ಮಿಕರಿಗೆ ಮತ್ತು ಅವರನ್ನು ಕೆಲಸಕ್ಕೆ ನೇಮಿಸಿಕೊಂಡವರಿಗೆ ಒಂದು ವಾರದ ಸಮಯಾವಕಾಶ ನೀಡಿದ್ದು, ಈ ಅವಧಿಯ ಒಳಗೆ ಅಸಲಿ ದಾಖಲಾತಿ ಗಳನ್ನು ತೋರಿಸುವಂತೆ ಸೂಚನೆ ನೀಡಲಾಗಿದೆ ಎಂದು ಹೇಳಿದರು.

ಆನ್ ಲೈನ್‍ನಲ್ಲಿ ದಾಖಲಾತಿ ಪರಿ ಶೀಲನೆ ಸಂದರ್ಭ ಇಬ್ಬರು ಕಾರ್ಮಿಕರ ಆಧಾರ್ ಕಾರ್ಡ್‍ನಲ್ಲಿದ್ದ ಹೆಸರು ಮತ್ತು ಆನ್ ಲೈನ್‍ನಲ್ಲಿದ್ದ ಹೆಸರಿಗೆ ತಾಳೆ ಯಾಗುತ್ತಿರಲಿಲ್ಲ. ಈ ಅಪೂರ್ಣ ದಾಖ ಲಾತಿಗಳನ್ನು ಹೊಂದಿರುವ ವಿವರಗಳನ್ನು ಕೂಡ ಸಂಗ್ರಹಿಸಿದ್ದು, ಜಿಲ್ಲಾ ಅಪರಾಧ ರೆಕಾರ್ಡ್ ಬ್ಯೂರೋ ಮೂಲಕ ಈ ವಿವರಗಳನ್ನು ಕಲೆ ಹಾಕಲಾಗುತ್ತದೆ ಎಂದು ಮಾಹಿತಿ ನೀಡಿದರು. ಅಗತ್ಯವಿದ್ದಲ್ಲಿ ಜಿಲ್ಲಾ ಪೊಲೀಸರ ಒಂದು ತಂಡವನ್ನು ಹೊರ ರಾಜ್ಯಕ್ಕೆ ಕಳುಹಿಸಿ ಪರಿಶೀಲನೆ ನಡೆಸಲಾಗುತ್ತದೆ.

ಇಂದು ದಾಖಲಾತಿ ಪರಿಶೀಲನೆ ನಡೆಸಿದ ಸಂದರ್ಭ ಬಾಂಗ್ಲಾ ದೇಶ ಅಥವಾ ಬೇರ್ಯಾವ ದೇಶಗಳಿಂದ ನುಸುಳಿರುವ ವ್ಯಕ್ತಿಗಳು ಪತ್ತೆಯಾಗಿಲ್ಲ ಎಂದು ಪೊಲೀಸ್ ವರಿಷ್ಟಾಧಿಕಾರಿ ಡಾ. ಸುಮನ ಸ್ಪಷ್ಟಪಡಿಸಿದರು.