ಅಂತಾರಾಷ್ಟ್ರೀಯ ಬಾಹ್ಯಾಕಾಶ ಸಮ್ಮೇಳನಕ್ಕೆ ಕೌಟಿಲ್ಯ ವಿದ್ಯಾರ್ಥಿನಿ ಸಾಯಿಧನ್ಯ

ಮೈಸೂರು: ಕೌಟಿಲ್ಯ ವಿದ್ಯಾಲಯದ ವಿದ್ಯಾರ್ಥಿನಿ ಯು.ಸಾಯಿ ಧನ್ಯ ಅವರು 2019ರ ಮೇ ತಿಂಗಳಲ್ಲಿ ಅಮೆರಿಕಾ ಸಂಯುಕ್ತ ಸಂಸ್ಥಾನದ ಕೆನಡಿ ಸ್ಪೇಸ್ ಸೆಂಟರ್‍ನಲ್ಲಿ ರುವ ನ್ಯಾಷನಲ್ ಏರೋ ನಾಟಿಕ್ಸ್ ಅಂಡ್ ಸ್ಪೇಸ್ ಅಡ್ಮಿನಿಸ್ಟ್ರೇಷನ್ (ನಾಸಾ) ಸಂಸ್ಥೆಯಲ್ಲಿ ನಡೆಯಲಿರುವ ಅಂತಾರಾಷ್ಟ್ರೀಯ ಮಟ್ಟದ ಬಾಹ್ಯಾಕಾಶ ವಿಜ್ಞಾನ ಸಮ್ಮೇಳನದಲ್ಲಿ ಪಾಲ್ಗೊಳ್ಳಲಿದ್ದಾರೆ. ಆಸ್ಟ್ರೋನಾಟ್ ಮೆಮೋರಿ ಯಲ್ ಫೌಂಡೇಷನ್ ಮತ್ತು ಫ್ಲೋರಿಡಾ ಇನ್ಸ್‍ಟಿಟ್ಯೂಟ್ ಆಫ್ ಟೆಕ್ನಾಲಜಿ ಸಂಸ್ಥೆಗಳು ದಿ ಹಿಂದೂ ಎಜುಕೇಷನಲ್ ಸೀರೀಸ್‍ನ ಸಹಯೋಗದಲ್ಲಿ ಆಯೋಜಿಸಿದ್ದ ರಾಷ್ಟ್ರ ಮಟ್ಟದ ಪ್ರಬಂಧ ಸ್ಪರ್ಧೆಯಲ್ಲಿ ಭಾಗವಹಿಸಿ ಉತ್ತಮ ಸಾಧಕರು ಎಂಬ ಹಿರಿಮೆಗೆ ಪಾತ್ರರಾಗಿರುವ ವಿದ್ಯಾರ್ಥಿನಿ ಯು.ಸಾಯಿಧನ್ಯ ಅವರು ಅಂತಾರಾಷ್ಟ್ರೀಯ ಮಟ್ಟದ ಬಾಹ್ಯಾಕಾಶ ವಿಜ್ಞಾನ ಸಮ್ಮೇಳನದಲ್ಲಿ ಪಾಲ್ಗೊಳ್ಳುವ ಅರ್ಹತೆ ಪಡೆದಿದ್ದಾರೆ.

ತಮಗೆ ಈ ಅಪರೂಪದ ಅವಕಾಶ ದೊರಕಿದ್ದಕ್ಕಾಗಿ ಹರ್ಷ ವ್ಯಕ್ತಪಡಿಸಿರುವ ಸಾಯಿಧನ್ಯ ಅವರು, ಗಗನಯಾತ್ರಿ ಆಗಬೇಕೆನ್ನುವುದು ನನ್ನ ಕನಸಾಗಿದೆ. ಈ ಹಿನ್ನೆಲೆಯಲ್ಲಿ ನನಗೆ ಅಂತಾರಾಷ್ಟ್ರೀಯ ಬಾಹ್ಯಾಕಾಶ ವಿಜ್ಞಾನ ಸಮ್ಮೇಳನದಲ್ಲಿ ಭಾಗವಹಿಸಲು ಅವಕಾಶ ಸಿಕ್ಕಿರುವುದು ಸಂತಸ ಉಂಟುಮಾಡಿದೆ. ಅದನ್ನು ಸದುಪ ಯೋಗಪಡಿಸಿಕೊಂಡು ಮುಂದುವರಿಯಲು ಬಯಸಿದ್ದೇನೆ ಎಂದರು.

ಯು.ಸಾಯಿಧನ್ಯ ಅವರು ರೈಲ್ವೆ ಇಲಾಖೆಯಲ್ಲಿ ಡಿವಿಜûನಲ್ ಇಂಜಿನಿಯರ್ ಆಗಿರುವ ಎಂ.ಆರ್.ಉಮೇಶ್ ಮತ್ತು ನಂದಿನಿ ದಂಪತಿ ಪುತ್ರಿಯಾಗಿದ್ದಾರೆ. ಸಾಯಿಧನ್ಯ ಅವರ ಸಾಧನೆಗೆ ಶಾಲೆಯ ಅಧ್ಯಕ್ಷರಾದ ಆರ್.ರಘು ಮತ್ತು ಹಿರಿಯ ಪ್ರಾಂಶುಪಾಲರಾದ ಡಾ.ಎಲ್.ಸವಿತಾ ಅಭಿನಂದಿಸಿದ್ದಾರೆ.

ಐಟಿ ದಾಳಿ ಖಂಡಿಸಿ ಉಪ ಮೇಯರ್ ನೇತೃತ್ವದಲ್ಲಿ ಜೆಡಿಎಸ್ ಮುಖಂಡರ ಪ್ರತಿಭಟನೆ
ಮೈಸೂರು: ಚುನಾವಣಾ ಪ್ರಕ್ರಿಯೆ ಸಂದರ್ಭದಲ್ಲಿ ರಾಜಕೀಯ ಪ್ರೇರಿತವಾಗಿ ಐಟಿ ದಾಳಿ ನಡೆಸಲಾಗಿದೆ ಎಂದು ಖಂಡಿಸಿ ಉಪ ಮೇಯರ್ ಶಫಿ ಅಹಮದ್, ನಗರಪಾಲಿಕೆ ಮಾಜಿ ಸದಸ್ಯ ಕೆ.ವಿ.ಮಲ್ಲೇಶ್, ಜೆಡಿಎಸ್ ಮುಖಂಡ ನಾರಾಯಣಗೌಡ ಅವರು ಗುರುವಾರ ಮೈಸೂರು ನ್ಯಾಯಾಲಯದ ಎದುರಿನ ಗಾಂಧಿ ಪುತ್ಥಳಿ ಬಳಿ ಪ್ರತಿಭಟನೆ ನಡೆಸಿದರು. ಕೇಂದ್ರ ಸರ್ಕಾರ ರಾಜ್ಯದ ಜೆಡಿಎಸ್ ನಾಯಕರನ್ನು ಗುರಿಯಾಗಿಟ್ಟುಕೊಂಡು ಐಟಿ ದಾಳಿ ನಡೆಸುವ ಮೂಲಕ ಚುನಾವಣಾ ಸಂದರ್ಭದಲ್ಲಿ ಮಾನಸಿಕವಾಗಿ ಶಕ್ತಿ ಕುಂದಿಸುವ ಪ್ರಯತ್ನ ನಡೆಸಿದೆ ಎಂದು ಆರೋಪಿಸಿದರು.

ಚುನಾವಣೆಗೆ ಮುನ್ನ ಐಟಿ ದಾಳಿ ನಡೆದಿದ್ದರೆ ಅದನ್ನು ಯಾರೂ ಪ್ರಶ್ನಿಸುತ್ತಿರಲಿಲ್ಲ. ಆದರೆ ಚುನಾವಣೆ ಸಂದರ್ಭದಲ್ಲಿಯೇ ಇಂತಹ ದಾಳಿಯಿಂದ ಜನರನ್ನು ಬಿಜೆಪಿಯತ್ತ ಸೆಳೆಯಲು ಬಿಜೆಪಿ ಯತ್ನಿಸಿದೆ ಎಂದು ಖಂಡಿಸಿದರು.