ಮೈಸೂರು ಪಾಲಿಕೆ ಚುನಾವಣೆಯಲ್ಲಿ ಕೆಪಿಜೆಪಿ ಸ್ಪರ್ಧೆ

Mysuru City Corporation

ಮೈಸೂರು: ಮೈಸೂರು ನಗರ ಪಾಲಿಕೆ ಚುನಾವಣೆ ಸಮೀಪಿಸುತ್ತಿರುವ ಹಿನ್ನೆಲೆಯಲ್ಲಿ ಪಕ್ಷ ಸಂಘಟನೆ ಮಾಡಲು ಕರ್ನಾಟಕ ಪ್ರಜ್ಞಾವಂತ ಜನತಾ ಪಕ್ಷಕ್ಕೆ ಹೊಸದಾಗಿ ಪದಾಧಿಕಾರಿಗಳ ನೇಮಕ ಮಾಡಿದ್ದು, ನಗರಾಧ್ಯಕ್ಷರಾಗಿ ಶ್ರೀನಿಧಿ ಹಾಗೂ ಕಾರ್ಯದರ್ಶಿಯಾಗಿ ಪ್ರಶಾಂತ ಗೌಡ ಅವರನ್ನು ನೇಮಕ ಮಾಡಲಾಗಿದೆ ಎಂದು ಕೆಪಿಜೆಪಿ ಸಂಸ್ಥಾಪಕ ಅಧ್ಯಕ್ಷ ಡಿ.ಮಹೇಶ್ ಗೌಡ ತಿಳಿಸಿದ್ದಾರೆ.

ಮೈಸೂರು ಜಿಲ್ಲಾ ಪತ್ರಕರ್ತರ ಭವನದಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕ್ಯಾಸ್ಟ್ ಲೆಸ್ ಹಾಗೂ ಕ್ಯಾಶ್ ಲೆಸ್ ತತ್ವ ಸಿದ್ದಾಂತದ ಮೂಲಕ ಕೆಪಿಜೆಪಿ ಈಗಾಗಲೇ ರಾಜ್ಯದ ಮನೆ ಮಾತಾಗಿದೆ. ಈ ಹಿನ್ನೆಲೆಯಲ್ಲಿ ಮೈಸೂರಿನಲ್ಲಿ ನಡೆಯಲಿರುವ ನಗರ ಪಾಲಿಕೆ ಚುನಾವಣೆಯಲ್ಲಿ ಎಲ್ಲಾ 65 ವಾರ್ಡ್‍ಗಳಲ್ಲಿ ನಮ್ಮ ಪಕ್ಷದ ಅಭ್ಯರ್ಥಿಗಳು ಕಣಕ್ಕಿಳಿಯಲಿದ್ದಾರೆ. ಇದಕ್ಕಾಗಿ ಪಕ್ಷ ಸಂಘಟನೆ ಮಾಡುವುದಕ್ಕೆ ಉತ್ಸಾಹಿಗಳನ್ನು ವಿವಿಧ ಹುದ್ದೆಗಳಿಗೆ ನೇಮಕ ಮಾಡಲಾಗಿದೆ ಎಂದರು.

ಅರಣ್ಯ ಸಚಿವ ಶಂಕರ್ ಅವರು ಪಕ್ಷದೊಂದಿಗೆ ಉತ್ತಮ ಬಾಂಧವ್ಯ ಹೊಂದಿದ್ದರಾದರೂ ಸಣ್ಣಪುಟ್ಟ ಭಿನ್ನಾಭಿಪ್ರಾಯಗಳಿವೆ. ಆದರೂ ಸದಾ ಪಕ್ಷದ ಸಂಪರ್ಕದಲ್ಲಿದ್ದಾರೆ ಎಂದು ಪ್ರಶ್ನೆಯೊಂದಕ್ಕೆ ಪ್ರತಿಕ್ರಿಯಿಸಿದ ಅವರು, ನಟ ಉಪೇಂದ್ರ ಅವರ ಸೂಚನೆಯ ಮೇರೆಗೆ ಪಕ್ಷದ ಕಾರ್ಯಕಾರಿ ಸಮಿತಿಯನ್ನು ರಚಿಸಲಾಗಿತ್ತು. ಆದರೆ ಎಲ್ಲಾ ಅಧಿಕಾರಬೇಕು ಎಂಬ ಪ್ರಜಾಪ್ರಭುತ್ವ ವಿರೋಧಿ ನಿಲುವಿನಿಂದಾಗಿ ಅವರು ಪಕ್ಷ ತೊರೆದರು. ಈಗಲೂ ಪಕ್ಷದ ಸಿದ್ಧಾಂತವನ್ನು ಒಪ್ಪಿ ಮತ್ತೆ ಪಕ್ಷ ಸೇರಲು ಬಂದರೆ ಸ್ವಾಗತಿಸುವುದಾಗಿ ಹೇಳಿದರು. ಸುದ್ದಿಗೋಷ್ಠಿಯಲ್ಲಿ ಪದಾಧಿಕಾರಿಗಳಾದ ಎಸ್.ಆರ್.ಕಂಠಿ, ಭಾಗ್ಯಮ್ಮ, ಮಲ್ಲೇಶ್ ತಟ್ಟೆಗೆರೆ, ಶ್ರೀನಿಧಿ, ಪ್ರಶಾಂತ್ ಗೌಡ ಇದ್ದರು.