ಮಳವಳ್ಳಿ: 7ಕಿ.ಮೀ. ವ್ಯಾಪ್ತಿ ‘ಬಫರ್ ಝೋನ್’

28 ದಿನಗಳ ಕಾಲ ತೀವ್ರ ನಿಗಾ, ಅನುಮತಿಯಿಲ್ಲದೆ ಯಾರೂ ಓಡಾಟ ಮಾಡುವಂತಿಲ್ಲ: ಜಿಲ್ಲಾಧಿಕಾರಿ ವೆಂಕಟೇಶ್
ಮಂಡ್ಯ, ಏ.6(ನಾಗಯ್ಯ)- ಕೊರೊನಾ ಸೋಂಕು ಇರುವ ದೆಹಲಿ ಮೂಲದ ಮೌಲ್ವಿಗಳು ಸಂಚರಿಸಿರುವ ಹಿನ್ನೆಲೆಯಲ್ಲಿ ಮಳವಳ್ಳಿಯಲ್ಲಿ ತೀವ್ರ ಕಟ್ಟೆಚ್ಚರವಹಿಸ ಲಾಗಿದ್ದು, ಸೋಮವಾರದಿಂದ 3ಕಿ.ಮೀ. ವ್ಯಾಪ್ತಿಯನ್ನು ಕಂಟೋನ್ಮೆಂಟ್ ಜೋನ್ ಹಾಗೂ ಪಟ್ಟಣದ 7ಕಿ.ಮೀ. ವ್ಯಾಪ್ತಿಯನ್ನು ಬಫರ್ ಜೋನ್ ಎಂದು ಜಿಲ್ಲಾಧಿ ಕಾರಿ ಡಾ.ಎಂ.ವಿ.ವೆಂಕಟೇಶ್ ಘೋಷಿಸಿದರು.

ಪಟ್ಟಣಕ್ಕೆ ಸೋಮವಾರ ಭೇಟಿ ನೀಡಿ ಪರಿಶೀಲನೆ ನಡೆಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ದೆಹಲಿ ನಿಜಾಮುದ್ದೀನ್ ಪ್ರದೇಶದಲ್ಲಿರುವ ತಬ್ಲೀಘಿ ಜಮಾತ್ ಧರ್ಮಸಭೆಯಲ್ಲಿ ಪಾಲ್ಗೊಂಡಿದ್ದ 10 ಮಂದಿ ಧರ್ಮಗುರುಗಳು ಮಾರ್ಚ್ 23ರಿಂದ ಮಾರ್ಚ್ 30ರವರೆಗೂ ಮಳವಳ್ಳಿಯಲ್ಲಿ ವಾಸ್ತವ್ಯ ಹೂಡಿ ದ್ದಾರೆ. ಮತ್ತೆ ಮೈಸೂರಿಗೆ ತೆರಳುವಾಗ ಜಿಲ್ಲಾಡಳಿತ ಬನ್ನೂರಿನ ಬಳಿ ವಶಕ್ಕೆ ಪಡೆದು ಪ್ರತ್ಯೇಕ ವಾಸದಲ್ಲಿ ಇರಿಸಿತ್ತು.

10 ಮಂದಿಯಲ್ಲಿ ಐವರಿಗೆ ಕೋವಿಡ್-19 ದೃಢಪಟ್ಟಿದ್ದು, ಅವರು ಓಡಾಡಿರುವ ಜಾಗಗಳಲ್ಲಿ ಆತಂಕ ಎದುರಾಗಿದೆ. ಮಾರ್ಚ್ 24ರಂದು ಪ್ರಧಾನ ಮಂತ್ರಿ ಲಾಕ್‍ಡೌನ್ ಘೋಷÀಣೆ ಮಾಡಿದ ವೇಳೆ ಈ ಧರ್ಮಗುರುಗಳು ಮಳವಳ್ಳಿ ಪಟ್ಟಣದ ವಾರ್ಡ್ ನಂ.7ರ ಈದ್ಗಾ ಮೊಹಲ್ಲಾದಲ್ಲಿರುವ ಮಸೀದಿಯಲ್ಲಿ ವಾಸ್ತವ್ಯ ಹೂಡಿದ್ದರು. ಮಸೀದಿಗಳಲ್ಲಿ ಸಾಮೂಹಿಕ ಪ್ರಾರ್ಥನೆ ರದ್ದುಗೊಳಿಸಿದ ನಂತರ ಅವರು ಮಸೀದಿ ಪಕ್ಕದ ಕೊಠಡಿಗೆ ಸ್ಥಳಾಂತರಗೊಂಡರು. ನಂತರವೂ ಅವರು ಧಾರ್ಮಿಕ ಚಟುವಟಿಕೆ ಮುಂದುವರಿಸಿದ್ದರು. ಹೀಗಾಗಿ ಅವರ ಜೊತೆ ಸಂಪರ್ಕದಲ್ಲಿದ್ದ 36 ಮಂದಿಯನ್ನು ಮೊರಾರ್ಜಿ ದೇಸಾಯಿ ವಸತಿ ಶಾಲೆಯಲ್ಲಿ ಪ್ರತ್ಯೇಕವಾಗಿ ಇರಿಸಲಾಗಿದೆ. ಸದ್ಯಕ್ಕೆ ಅವರಿಗೆ ಕೊರೊನಾ ಸೋಂಕಿನ ಲಕ್ಷಣ ಕಂಡುಬಂದಿಲ್ಲ. ಆದರೂ ಅವರ ಮೇಲೆ ನಿಗಾ ವಹಿಸಲಾಗಿದೆ. ಅವರಲ್ಲಿ 7 ಮಂದಿಯ ಗಂಟಲು ದ್ರವ, ರಕ್ತ ಮಾದರಿಯನ್ನು ಪ್ರಯೋಗ ಶಾಲೆಗೆ ಕಳುಹಿಸ ಲಾಗಿದ್ದು, ವರದಿಗಾಗಿ ಕಾಯುತ್ತಿದೇವೆ ಎಂದು ಹೇಳಿದರು.

ಕೊರೊನಾ ಸೋಂಕು ಹರಡುವ ಸಾಧ್ಯತೆಯಿಂದಾಗಿ 3ಕಿ.ಮೀ ವ್ಯಾಪ್ತಿಯನ್ನು ಕಂಟೋನ್ಮೆಂಟ್ ಜೋನ್ ಆಗಿ ಘೋಷಿಸಿದ್ದು, ಈ ವ್ಯಾಪ್ತಿಯಲ್ಲಿ ಅನುಮತಿ ಯಿಲ್ಲದೆ ಯಾವುದೇ ವ್ಯಕ್ತಿಯ ಓಡಾಟ ಮಾಡುವಂತಿಲ್ಲ, ಮುಂದಿನ 28 ದಿನಗಳ ಕಾಲ ಈ ಪ್ರದೇಶವನ್ನು ತೀವ್ರ ನಿಗಾ ಘಟಕವಾಗಿ ಪರಿಗಣಿಸುತ್ತದೆ. ಅಲ್ಲಿನ ವಾಸಿಗಳಿಗೆ ಸೂಕ್ತ ವ್ಯವಸ್ಥೆ ಕಲ್ಪಿಸಿ ಹಣ್ಣು-ಹಂಪಲು, ತರಕಾರಿ ವಿತರಣೆ ಸೇರಿದಂತೆ ಜೀವನಾವಶ್ಯಕವಾದ ವಸ್ತುಗಳನ್ನು ಜನರ ಮನೆ ಬಾಗಿಲಿಗೆ ತಲುಪಿಸಲಾಗುವುದು ಎಂದರು.

ಸಭೆಯಲ್ಲಿ ಉಪವಿಭಾಗಾಧಿಕಾರಿ ಸೂರಜ್, ಅಪರ ಪೆÇಲೀಸ್ ವರಿಷ್ಠಾಧಿಕಾರಿ ಡಾ.ಶೋಭರಾಣಿ, ಜಿಲ್ಲಾ ಆರೋಗ್ಯಾಧಿಕಾರಿ ಡಾ.ಎಚ್.ಪಿ.ಮಂಚೇಗೌಡ, ತಹಶೀಲ್ದಾರ್ ಕೆ.ಚಂದ್ರಮೌಳಿ, ಡಿವೈಎಸ್ ಪಿ.ಎಂ.ಜೆ. ಪೃಥ್ವಿ, ತಾಪಂ ಇಒ ಬಿ.ಎಸ್.ಸತೀಶ್, ತಾಲೂಕು ವೈದ್ಯಾಧಿಕಾರಿ ಡಾ.ವೀರಭದ್ರಪ್ಪ, ಪುರಸಭೆ ಮುಖ್ಯಾಧಿ ಕಾರಿ ಗಂಗಾಧರ್, ಸಿಪಿಐ ಧಮೇಂದ್ರ, ಪಿಐ ರಮೇಶ್ ಸೇರಿದಂತೆ ಹಲವು ಅಧಿಕಾರಿಗಳು ಇದ್ದರು.

ತಾಲೂಕಿನಲ್ಲಿ 2,84,000 ಜನಸಂಖ್ಯೆ ಇದೆ. 170 ಆರೋಗ್ಯ ತಂಡ ರಚಿಸಿದ್ದು, ಪ್ರತಿ 50 ಮನೆಗಳಿಗೆ ಇಬ್ಬರು ನೋಡೆಲ್ ಅಧಿಕಾರಿ ನೇಮಕ ಮಾಡಲಾಗಿದೆ. ಆರೋಗ್ಯಾಧಿಕಾರಿಗಳು ಅಲ್ಲಿನ ನಿವಾಸಿಗಳ ಆರೋಗ್ಯ ತಪಾಸಣೆ ನಡೆಸಿ ಮುನ್ನೆಚ್ಚರಿಕೆ ವಹಿಸುವುದರ ಜೊತೆಗೆ ಜನರಲ್ಲಿ ಸಾಮಾಜಿಕ ಅಂತರ ಕಾಯ್ದುಕೊಳ್ಳಲು ಶ್ರಮಿಸಲಿದ್ದಾರೆ.
-ಡಾ.ಎಂ.ವಿ.ವೆಂಕಟೇಶ್, ಜಿಲ್ಲಾಧಿಕಾರಿ