ನಿರಾಶ್ರಿತರಿಗೆ ನಗರ ಪಾಲಿಕೆ ವತಿಯಿಂದ ಊಟ ಹಾಗೂ ವಸತಿ ವ್ಯವಸ್ಥೆ

ಮೈಸೂರು, ಮಾ.27(ಎಸ್ ಬಿಡಿ)- ಕೊರೊನಾ ಕರ್ಫ್ಯೂ ಜಾರಿಯಲ್ಲಿರುವ ಹಿನ್ನೆಲೆಯಲ್ಲಿ ಮೈಸೂರು ನಗರದಲ್ಲಿ ನಿರಾಶ್ರಿತರಿಗೆ ನಗರ ಪಾಲಿಕೆ ವತಿಯಿಂದ ಊಟ ಹಾಗೂ ವಸತಿ ವ್ಯವಸ್ಥೆ ಕಲ್ಪಿಸಲಾಗಿದೆ.

ನಗರದ ಟಿ.ಕೆ.ಲೇಔಟ್, ಗಂಗೋತ್ರಿ ಬಡಾವಣೆಯ ಮಾರುತಿ ದೇವಾಲಯ ರಸ್ತೆಯಲ್ಲಿರುವ ಯೂತ್ ಹಾಸ್ಟೆಲ್ ನಲ್ಲಿ ನೆರವು ಕೇಂದ್ರ ತೆರೆಯಲಾಗಿದ್ದು, ನಿರ್ಬಂಧ ಅವಧಿ ಮುಗಿಯುವವರೆಗೂ ಮುಂದುವರೆಯಲಿದೆ.

ಅನಿವಾರ್ಯ ಸಂದರ್ಭ ಹೊರತುಪಡಿಸಿ ಜನ ಸಂಚಾರ ನಿರ್ಬಂಧ ವಿಧಿಸಲಾಗಿದ್ದು, ಹೋಟೆಲ್ ಗಳನ್ನೂ ಮುಚ್ಚಿಸಲಾಗಿದೆ. ಹಾಗಾಗಿ ಜಿಲ್ಲಾಧಿಕಾರಿಗಳ ಸೂಚನೆ ಮೇರೆಗೆ ನಿರಾಶ್ರಿತರಿಗೆ ಊಟ ಹಾಗೂ ವಸತಿ ವ್ಯವಸ್ಥೆ ಮಾಡಲಾಗಿದೆ.

ಅವಶ್ಯಕತೆ ಇದ್ದವರು ನಗರ ಪಾಲಿಕೆ ಸಮುದಾಯ ಸಂಘಟನಾಧಿಕಾರಿ ಶಿವಪ್ಪ( 9886715356), ಯುವಜನ ಸೇವೆ ಸಹಾಯಕ ನಿರ್ದೇಶಕ ಎನ್.ಸಿದ್ದರಾಮಪ್ಪ(9448445252) ಅವರನ್ನು ಸಂಪರ್ಕಿಸಬಹುದು.

ನಗರ ಪಾಲಿಕೆ ಸತ್ಕಾರ್ಯಕ್ಕೆ ಸಹಕಾರ ನೀಡುವ ದಾನಿಗಳು ನಗರ ಪಾಲಿಕೆ ಹೆಚ್ಚುವರಿ ಆಯುಕ್ತ ಎನ್.ಎಂ.ಶಶಿಕುಮಾರ್(9449276306) ಅವರನ್ನು ಸಂಪರ್ಕಿಸುವಂತೆ ಪ್ರಕಟಣೆಯಲ್ಲಿ ಕೋರಲಾಗಿದೆ.