ಕಂಠೀರವ ಕ್ರೀಡಾಂಗಣದಲ್ಲಿ ಲಕ್ಷಾಂತರ ಜನರಿಂದ ಅಂಬರೀಶ್ ಅಂತಿಮ ದರ್ಶನ

ಬೆಂಗಳೂರು: ಬೆಂಗಳೂರಿನ ಕಂಠೀರವ ಕ್ರೀಡಾಂಗಣದಲ್ಲಿ ಚಿತ್ರ ರಂಗದ ಗಣ್ಯರು, ರಾಜಕೀಯ ಧುರೀಣರು ಹಾಗೂ ಲಕ್ಷಾಂತರ ಅಭಿಮಾನಿಗಳು ಶನಿವಾರ ರಾತ್ರಿ ನಿಧನ ಹೊಂದಿದ ಮಾಜಿ ಸಚಿವ, ಕನ್ನಡ ಚಿತ್ರರಂಗದ `ದೊಡ್ಡಣ್ಣ’ ಅಂಬರೀಶ್ ಅವರ ಅಂತಿಮ ದರ್ಶನ ಪಡೆದು, ಅಶ್ರುತರ್ಪಣಗೈದರು.

ಶನಿವಾರ ತಡರಾತ್ರಿ ಬೆಂಗಳೂರಿನ ವಿಕ್ರಂ ಆಸ್ಪತ್ರೆ ಬಳಿ ಅಪಾರ ಸಂಖ್ಯೆ ಯಲ್ಲಿ ಅಭಿಮಾನಿಗಳು ನೆರೆದಿದ್ದರಿಂದ ಮುಂಜಾನೆ ವೇಳೆಗೆ ಅಂಬರೀಶ್ ಪಾರ್ಥಿವ ಶರೀರವನ್ನು ಆಸ್ಪತ್ರೆ ಹಿಂಬಾಗಿಲ ಮೂಲಕ ಜೆ.ಪಿ.ನಗರದಲ್ಲಿರುವ ಅವರ ನಿವಾಸಕ್ಕೆ ಕೊಂಡೊಯ್ಯಲಾಯಿತು. ಇಲ್ಲಿ ಅವರ ಕುಟುಂಬ ವರ್ಗ, ಸಂಬಂಧಿ ಕರಿಗೆ ಮಾತ್ರ ಅಂತಿಮ ದರ್ಶನಕ್ಕೆ ಅವ ಕಾಶ ಕಲ್ಪಿಸಲಾಗಿತ್ತು. ಇಂದು ಮುಂಜಾನೆ ಪಾರ್ಥಿವ ಶರೀರವನ್ನು ಚಲನಚಿತ್ರ ವಾಣಿಜ್ಯ ಮಂಡಳಿಗೆ ಕೊಂಡೊಯ್ದು, ಅಂತಿಮ ಗೌರವ ಸಲ್ಲಿಸಿದ ನಂತರ ಕಂಠೀರವ ಕ್ರೀಡಾಂಗಣದಲ್ಲಿ ಸಾರ್ವಜ ನಿಕರ ಅಂತಿಮ ದರ್ಶನಕ್ಕೆ ಪಾರ್ಥಿವ ಶರೀರವನ್ನು ಇಡಲಾಯಿತು. ಚಿತ್ರರಂಗದ ಗಣ್ಯರು ಹಾಗೂ ರಾಜಕೀಯ ನಾಯ ಕರು ಅಂತಿಮ ದರ್ಶನ ಸಲ್ಲಿಸಲು ಪ್ರತ್ಯೇಕ ದ್ವಾರದಿಂದ ಒಳ ಬಿಡಲಾಯಿತು. ಅಂಬರೀಶ್ ಅವರ ಅಭಿಮಾನಿಗಳು ಲಕ್ಷಾಂತರ ಸಂಖ್ಯೆಯಲ್ಲಿ ಆಗಮಿಸಿದ ಕಾರಣ ಪೊಲೀಸರು ಬ್ಯಾರಿಕೇಡ್‍ಗಳನ್ನು ನಿರ್ಮಿಸಿ ಅಭಿಮಾನಿಗಳು ಸರತಿ ಸಾಲಿನಲ್ಲಿ ತೆರಳಿ ದರ್ಶನ ಪಡೆಯಲು ಅನುವು ಮಾಡಿಕೊಡಲಾಗಿತ್ತು. ಈ ವೇಳೆ ಬಂದೋಬಸ್ತ್ ಉಸ್ತುವಾರಿಯನ್ನು ಸ್ವತಃ ಬೆಂಗಳೂರು ನಗರ ಪೊಲೀಸ್ ಆಯುಕ್ತ ಸುನೀಲ್ ಕುಮಾರ್ ಅವರೇ ವಹಿಸಿದ್ದು, ಸಂಚಾರ ವ್ಯವಸ್ಥೆಯನ್ನು ಸಂಚಾರ ವಿಭಾಗದ ಹೆಚ್ಚುವರಿ ಆಯುಕ್ತ ಹರಿಶೇಖರನ್ ವಹಿಸಿದ್ದರು.

ಸೂಪರ್ ಸ್ಟಾರ್ ರಜನಿಕಾಂತ್, ಮೆಗಾ ಸ್ಟಾರ್ ಚಿರಂಜೀವಿ, ತೆಲುಗು ಚಿತ್ರರಂಗದ ಖ್ಯಾತ ನಟ ಮೋಹನ್ ಬಾಬು, ಶಿವರಾಜ್ ಕುಮಾರ್, ಅನಂತ್‍ನಾಗ್, ರಾಮಕೃಷ್ಣ, ಭಾರತಿ ವಿಷ್ಣುವರ್ಧನ್, ಸುಹಾಸಿನಿ, ಶರತ್‍ಕುಮಾರ್, ಜಯಂತಿ ಸೇರಿದಂತೆ ಚಿತ್ರರಂಗದ ನೂರಾರು ಗಣ್ಯರು ಕಂಠೀರವ ಕ್ರೀಡಾಂಗಣದಲ್ಲಿ ಅಂಬರೀಶ್ ಅಂತಿಮ ದರ್ಶನ ಪಡೆದು ಅವರ ಪತ್ನಿ ಸುಮಲತಾ ಅವರಿಗೆ ಸಾಂತ್ವನ ಹೇಳಿದರು. ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡ, ಮಾಜಿ ಮುಖ್ಯಮಂತ್ರಿಗಳಾದ ಎಸ್.ಎಂ.ಕೃಷ್ಣ, ಬಿ.ಎಸ್.ಯಡಿಯೂರಪ್ಪ, ಸಿದ್ದರಾಮಯ್ಯ, ಮಾಜಿ ಕೇಂದ್ರ ಸಚಿವ ವೀರಪ್ಪ ಮೊಯ್ಲಿ ಉಪ ಮುಖ್ಯಮಂತ್ರಿ ಡಾ. ಜಿ.ಪರಮೇಶ್ವರ್, ಸಚಿವರಾದ ಡಿ.ಕೆ.ಶಿವಕುಮಾರ್, ಜಮೀರ್ ಅಹಮದ್ ಸೇರಿದಂತೆ ನೂರಾರು ರಾಜಕೀಯ ಧುರೀಣರು ಅಂತಿಮ ದರ್ಶನ ಪಡೆದು ಕುಟುಂಬದವರಿಗೆ ಸಾಂತ್ವನ ಹೇಳಿದರು.

ಮಂಡ್ಯ ಅಭಿಮಾನಿಗಳ ಆಗ್ರಹ: ಮೈಸೂರು ಮತ್ತು ಮಂಡ್ಯದಿಂದ ಅಂಬರೀಶ್ ಅಭಿಮಾನಿಗಳು ಅಂತಿಮ ದರ್ಶನಕ್ಕಾಗಿ ಬೆಂಗಳೂರಿಗೆ ಬರಲು ಕೆಎಸ್‍ಆರ್‍ಟಿಸಿ ಯಿಂದ ವಿಶೇಷ ಉಚಿತ ಬಸ್ ವ್ಯವಸ್ಥೆ ಕಲ್ಪಿಸಲಾಗಿತ್ತಾದರೂ, ಅಂಬರೀಶ್ ಅವರ ಪಾರ್ಥಿವ ಶರೀರವನ್ನು ಮಂಡ್ಯಗೆ ತರಲೇಬೇಕೆಂದು ಆಗ್ರಹಿಸಿ ಮಂಡ್ಯ ಜಿಲ್ಲೆಯ ವಿವಿಧೆಡೆ ಅಭಿಮಾನಿಗಳು ಪ್ರತಿಭಟನೆ ಹಾದಿ ಹಿಡಿದಾಗ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಅವರು ಕೇಂದ್ರ ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಂ ಅವರನ್ನು ಸಂಪರ್ಕಿಸಿ, ಅಂಬರೀಶ್ ಪಾರ್ಥಿವ ಶರೀರವನ್ನು ಮಂಡ್ಯಗೆ ಕೊಂಡೊ ಯ್ಯಲು ಸೇನೆಯ ಹೆಲಿಕಾಪ್ಟರ್ ನೀಡುವಂತೆ ಮನವಿ ಮಾಡಿದರು. ನಿರ್ಮಲಾ ಸೀತಾರಾಂ ಕೂಡ ತಕ್ಷಣವೇ ಮುಖ್ಯಮಂತ್ರಿಗಳ ಮನವಿಗೆ ಸ್ಪಂದಿಸಿದರು.

ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಅವರು ತಕ್ಷಣವೇ ಸಂಜೆ 4 ಗಂಟೆಗೆ ಅಂಬರೀಶ್ ಪಾರ್ಥಿವ ಶರೀರವನ್ನು ಮಂಡ್ಯಗೆ ತರಲಾಗುವುದು. ಸೋಮವಾರ ಬೆಳಿಗ್ಗೆ 6 ಗಂಟೆವರೆಗೆ ವಿಶ್ವೇಶ್ವರಯ್ಯ ಕ್ರೀಡಾಂಗಣದಲ್ಲಿ ಅಂತಿಮ ದರ್ಶನಕ್ಕೆ ಅವಕಾಶ ಕಲ್ಪಿಸಲಾಗುವುದು ಎಂದು ಅಧಿಕೃತವಾಗಿ ಘೋಷಿಸಿದರು. ಸಂಜೆ 4 ಗಂಟೆವರೆಗೆ ಕಂಠೀರವ ಕ್ರೀಡಾಂಗಣದಲ್ಲಿ ಅಂತಿಮ ದರ್ಶನಕ್ಕೆ ಅವಕಾಶ ಕಲ್ಪಿಸಲಾಗಿತ್ತು. ನಂತರ ಹೆಚ್‍ಎಎಲ್ ವಿಮಾನ ನಿಲ್ದಾಣದಿಂದ ಸೇನಾ ಹೆಲಿಕಾಪ್ಟರ್‍ನಲ್ಲಿ ಅಂಬರೀಶ್ ಪಾರ್ಥಿವ ಶರೀರವನ್ನು ಮಂಡ್ಯಗೆ ಕೊಂಡೊಯ್ಯಲಾಯಿತು. ಸಂಜೆ 5.15ರ ಸುಮಾರಿಗೆ ಪಾರ್ಥಿವ ಶರೀರ ಮಂಡ್ಯದ ವಿಶ್ವೇಶ್ವರಯ್ಯ ಕ್ರೀಡಾಂಗಣ ತಲುಪಿತು.