ಟಿ.ಕೆ.ಲೇಔಟ್, ಶಾರದಾದೇವಿ ನಗರದಲ್ಲಿ ಶಾಸಕ ರಾಮ್‍ದಾಸ್ ಪಾದಯಾತ್ರೆ

  • ಮಳೆ ನೀರು ಚರಂಡಿ ಮೇಲೆ ನಿರ್ಮಿಸಿರುವ ಅನಧಿಕೃತ ಮನೆಗಳ ತೆರವಿಗೆ ಸೂಚನೆ

ಮೈಸೂರು: ಮೈಸೂರಿನ ಟಿ.ಕೆ.ಲೇಔಟ್‍ನಲ್ಲಿ ಮಳೆ ನೀರು ಚರಂಡಿ ಮೇಲೆ ಅನಧಿಕೃತವಾಗಿ ನಿರ್ಮಿಸಿರುವ ಮನೆಗಳು ಹಾಗೂ ಮೀನಿನ ಕಬಾಬ್ ಅಂಗಡಿಯನ್ನು ತಕ್ಷಣ ತೆರವುಗೊಳಿಸಬೇಕೆಂದು ಕೆ.ಆರ್ ಕ್ಷೇತ್ರದ ಶಾಸಕ ಎಸ್.ಎ.ರಾಮದಾಸ್ ಅಧಿಕಾರಿಗಳಿಗೆ ಸೂಚಿಸಿದರು.

ಅವರು ಇಂದು ಬೆಳಿಗ್ಗೆ ಮೈಸೂರಿನ ಹಿಂದಿನ 23ನೇ ವಾರ್ಡ್(ಹಾಲಿ 43ನೇ ವಾರ್ಡ್)ನಲ್ಲಿ ಪಾದಯಾತ್ರೆ ನಡೆಸಿದ ವೇಳೆ ಟಿ.ಕೆ.ಲೇಔಟ್‍ನ ಮಳೆ ನೀರು ಚರಂಡಿಯನ್ನು ಮುಚ್ಚಿಹಾಕಿ ಅನಧಿಕೃತವಾಗಿ ಮನೆಗಳನ್ನು ನಿರ್ಮಿಸಿರುವುದು ಕಂಡು ಬಂತು. ಅಲ್ಲದೆ, ಶಾಸಕರು ಪಾದಯಾತ್ರೆ ನಡೆಸಿದ ವೇಳೆ ಈ ವಿಷಯವನ್ನು ಅವರಿಗೆ ತಿಳಿಸಬಾರದೆಂದು ಕೆಲವರು ಸ್ಥಳೀಯರಿಗೆ ಬೆದರಿಕೆ ಹಾಕಿರುವ ವಿಷಯವೂ ಶಾಸಕರ ಗಮನಕ್ಕೆ ಬಂತು.

ಈ ಪ್ರದೇಶದ ತಗ್ಗು ಪ್ರದೇಶವಾಗಿದ್ದು, ಮಳೆ ನೀರು ಚರಂಡಿ ಮುಚ್ಚಿ ಮನೆಗಳನ್ನು ನಿರ್ಮಿಸಿರುವುದರಿಂದ ಸಾರ್ವಜನಿಕರು ಬಹಳ ತೊಂದರೆ ಅನುಭವಿಸುತ್ತಿರುವ ಹಿನ್ನೆಲೆಯಲ್ಲಿ ತಕ್ಷಣವೇ ಅನಧಿಕೃತ ಮನೆಗಳನ್ನು ತೆರವುಗೊಳಿಸಬೇಕು. ಅಲ್ಲದೆ, ಎಲ್ಲೆಲ್ಲಿ ಮಳೆ ನೀರು ಚರಂಡಿ ಹಾದು ಹೋಗಿದೆಯೋ ಆ ಎಲ್ಲಾ ಸ್ಥಳಗಳಲ್ಲಿಯೂ ಒತ್ತುವರಿ ತೆರವುಗೊಳಿಸುವ ಕಾರ್ಯ ಒಂದು ವಾರದೊಳಗೆ ಪೂರ್ಣಗೊಳಿಸಬೇಕೆಂದು ಅಧಿಕಾರಿಗಳಿಗೆ ತಾಕೀತು ಮಾಡಿದ ಶಾಸಕರು ಈ ಪ್ರದೇಶದಲ್ಲಿ ಸಾರ್ವಜನಿಕರಿಗೆ ಬೆದರಿಕೆ ಹಾಕುವ ಪುಂಡರ ವಿರುದ್ಧ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳುವಂತೆ ಪೊಲೀಸ್ ಅಧಿಕಾರಿಗಳಿಗೆ ಸೂಚಿಸಿದರು.

ಈ ಪ್ರದೇಶದಲ್ಲಿ ಹಾಲಿನ ಡೈರಿಗಾಗಿ ಅಂಗಡಿ ಪಡೆದ ವ್ಯಕ್ತಿ ಅದನ್ನು 500ರೂ ಬಾಡಿಗೆಗೆ ಬೇರೊಬ್ಬರಿಗೆ ನೀಡಿದ್ದು, ಬಾಡಿಗೆಗೆ ಪಡೆದಿರುವ ವ್ಯಕ್ತಿ ಹಾಲಿನ ಡೈರಿ ಮಳಿಗೆಯಲ್ಲಿ ಮೀನಿನ ಕಬಾಬ್ ವ್ಯಾಪಾರ ನಡೆಸುತ್ತಿರುವುದು ಹಾಗೂ ಸದರಿ ಮಳಿಗೆಯೂ ಸಹ ಮಳೆ ನೀರು ಚರಂಡಿಯನ್ನು ಅಕ್ರಮಿಸಿ ನಿರ್ಮಿಸಿರುವುದು ಕಂಡು ಬಂದ ಹಿನ್ನೆಲೆಯಲ್ಲಿ ಈ ಮಳಿಗೆಯನ್ನೂ ತೆರವುಗೊಳಿಸಬೇಕೆಂದು ಶಾಸಕರು ಅಧಿಕಾರಿಗಳಿಗೆ ಸೂಚಿಸಿದರು.

ಶಾರದಾದೇವಿನಗರ ವೃತ್ತದಲ್ಲಿ ಬಸ್ ಬೇ ನಿರ್ಮಿಸುವಂತೆ ಕೆಎಸ್‍ಆರ್‍ಟಿಸಿ ಅಧಿಕಾರಿಗಳಿಗೆ ಶಾಸಕರು ಸೂಚಿಸಿದರು. ಜನತಾನಗರ ಮತ್ತು ಬಸವೇಶ್ವರ ನಗರ ಭಾಗಗಳಲ್ಲಿರುವ ರೆವಿನ್ಯೂ ಬಡಾವಣೆಗಳಿಗೆ ಮೂಲಭೂತ ಸೌಲಭ್ಯ ಒದಗಿಸಬೇಕು. ದುಸ್ಥಿತಿಯಲ್ಲಿರುವ ವಿದ್ಯುತ್ ಕಂಬಗಳನ್ನು ಬದಲಾಯಿಸಬೇಕು. ವಾರ್ಡ್‍ನ 5 ಸ್ಥಳಗಳಲ್ಲಿ ಪೊಲೀಸ್ ಗಸ್ತು ಪುಸ್ತಕ ಇರಿಸಬೇಕೆಂದು ಅಧಿಕಾರಿಗಳಿಗೆ ರಾಮದಾಸ್ ಸೂಚಿಸಿದರು.

ತೊಣಚಿಕೊಪಲ್ಲು ಸರ್ಕಾರಿ ಶಾಲೆ ಉತ್ತಮವಾಗಿ ನಡೆಯುತ್ತಿದ್ದು, ಈ ಶಾಲೆ ಮಕ್ಕಳಿಗೆ ಊಟದ ತಟ್ಟೆ ನೀಡಲು ತೀರ್ಮಾನಿಸಲಾಗಿದೆ ಎಂದು ತಿಳಿಸಿದ ಶಾಸಕರು, ಪಕ್ಕದಲ್ಲೇ ಇರುವ ಮೂಡಾ ನಿವೇಶನವನ್ನು ಮಕ್ಕಳಿಗೆ ಆಟದ ಮೈದಾನ ಮಾಡಿಕೊಡಲು ಚಿಂತನೆ ನಡೆಸಲಾಗಿದೆ.

ತಮಗೆ ಸಾಲ ಮಂಜೂರು ಮಾಡಿಸಬೇಕೆಂದು ಮಹಿಳಾ ಸಂಘದ ಸದಸ್ಯರು ಸಲ್ಲಿಸುವ ಬೇಡಿಕೆಗೆ ಸ್ಪಂದಿಸಿದ ಶಾಸಕರು, ಸ್ವಯಂ ಉದ್ಯೂಗಕ್ಕಾಗಿ ಹಲವಾರು ಯೋಜನೆಗಳಡಿ ಲಭ್ಯವಿರುವ ಸಾಲ ಸೌಲಭ್ಯಗಳ ಬಗ್ಗೆ ಸ್ವತಃ ತಾವೇ ಮಾಹಿತಿ ನೀಡಿದರಲ್ಲದೆ, ಸಾಲ ಮಂಜೂರು ಮಾಡಲು ಸೂಕ್ತ ಕ್ರಮ ಕೈಗೊಳ್ಳುವಂತೆ ಅಧಿಕಾರಿಗಳಿಗೆ ಸೂಚಿಸಿದರು.