ಮೈಸೂರಲ್ಲಿ ಬೃಹತ್ ಯೋಗ ಪ್ರದರ್ಶನಕ್ಕೆ ಸಹಕರಿಸುವಂತೆ ಪ್ರವಾಸೋದ್ಯಮ ಸಚಿವ  ಸಾರಾ ಮಹೇಶ್‍ಗೆ ಶಾಸಕ ರಾಮದಾಸ್ ಮನವಿ

ಮೈಸೂರು:  ಮೈಸೂರು ರೇಸ್‍ಕೋರ್ಸ್ ಆವರಣದಲ್ಲಿ ಜೂ. 21ರಂದು ನಡೆಯಲಿರುವ ವಿಶ್ವ ಯೋಗ ದಿನದ ಕಾರ್ಯಕ್ರಮಕ್ಕೆ ಪ್ರವಾಸೋದ್ಯಮ ಇಲಾಖೆಯಿಂದ ಸಹಕಾರ ನೀಡಬೇಕೆಂದು ಶಾಸಕ ಎಸ್.ಎ.ರಾಮದಾಸ್ ಅವರು ಪ್ರವಾಸೋದ್ಯಮ ಸಚಿವ ಸಾ.ರಾ.ಮಹೇಶ್ ಅವರಿಗೆ ಮನವಿ ಸಲ್ಲಿಸಿದರು.

ಮೈಸೂರಿನ ಡಿ.ಸುಬ್ಬಯ್ಯ ರಸ್ತೆಯ ಸೋನಾರ್ ಸ್ಟ್ರೀಟ್‍ನಲ್ಲಿರುವ ಸಚಿವ ಸಾ.ರಾ.ಮಹೇಶ್ ನಿವಾಸಕ್ಕೆ ಬುಧವಾರ ಯೋಗ ಸಮಿತಿಯ ಪದಾಧಿಕಾರಿಗಳು ಹಾಗೂ ಪ್ರವಾಸೋದ್ಯಮ ಟಾಸ್ಕ್‍ಫೋರ್ಸ್ ಸದಸ್ಯರೊಂದಿಗೆ ಭೇಟಿ ನೀಡಿದ ಶಾಸಕ ಎಸ್.ಎ.ರಾಮದಾಸ್ ಅವರು, ಸಚಿವರನ್ನು ಆತ್ಮೀಯವಾಗಿ ಅಭಿನಂದಿಸಿದರು. ಬಳಿಕ ಕುಶಲೋಪರಿ ವಿಚಾರಿಸಿದರು.
ಈ ವೇಳೆ ಎಸ್.ಎ.ರಾಮದಾಸ್ ಮಾತನಾಡಿ, ವಿಶ್ವ ಯೋಗ ದಿನದ ಹಿನ್ನೆಲೆಯಲ್ಲಿ ಕಳೆದ ವರ್ಷ ಮೈಸೂರಿನಲ್ಲಿ ಬೃಹತ್ ಯೋಗ ಪ್ರದರ್ಶನ ಏರ್ಪಡಿಸಲಾಗಿತ್ತು. ಇದು ಗಿನ್ನಿಸ್ ದಾಖಲೆಯೂ ಆಗಿದೆ. ಕಳೆದ ವರ್ಷದಂತೆ ಈ ಬಾರಿಯೂ ಒಂದು ಲಕ್ಷ ಯೋಗಪಟುಗಳನ್ನು ಒಂದೆಡೆ ಸೇರಿಸಿ, ಮತ್ತೊಂದು ದಾಖಲೆ ಮಾಡುವುದಕ್ಕೆ ಉದ್ದೇಶಿಸಲಾಗಿದೆ. ಈ ಹಿನ್ನೆಲೆಯಲ್ಲಿ ಪ್ರವಾಸೋದ್ಯಮ ಇಲಾಖೆಯಿಂದ ಸಹಕಾರ ಅಗತ್ಯವಾಗಿದೆ. ಬೃಹತ್ ಯೋಗ ಪ್ರದರ್ಶನದಿಂದಲೂ ಪ್ರವಾಸೋದ್ಯಮ ಅಭಿವೃದ್ಧಿಗೆ ಪೂರಕವಾಗಲಿದೆ. ಇದನ್ನು ಮನಗಂಡು ಕಾರ್ಯಕ್ರಮದ ಯಶಸ್ಸಿಗಾಗಿ ಸಂಬಂಧಪಟ್ಟ ಅಧಿಕಾರಿಗಳೊಂದಿಗೆ ಸಭೆ ನಡೆಸಬೇಕು. ಅಲ್ಲದೆ ಜೂ.21ರಂದು ನಡೆಯುವ ಯೋಗ ಕಾರ್ಯಕ್ರಮದಲ್ಲಿ ತಾವೂ ಪಾಲ್ಗೊಳ್ಳುವಂತೆ ಮನವಿ ಮಾಡಿದರು.

ಮೈಸೂರಿಗೆ ಬರುವ ಪ್ರವಾಸಿಗರು ರೇಷ್ಮೆ ಕಾರ್ಖಾನೆಗೆ ಭೇಟಿ ನೀಡುವ ಇಂಗಿತ ವ್ಯಕ್ತಪಡಿಸುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಕಾರ್ಖಾನೆಯಲ್ಲಿ ರೇಷ್ಮೆ ಸೀರೆ ನೇಯ್ಗೆ ಹಾಗೂ ನೂಲು ತಯಾರಿಸುವುದನ್ನು ಪ್ರವಾಸಿಗರು ವೀಕ್ಷಿಸಲು ಅವಕಾಶ ಮಾಡಿಕೊಡಬೇಕು. ಇದು ರೇಷ್ಮೆ ಉದ್ಯಮ ಅಭಿವೃದ್ಧಿಗೆ ಪೂರಕ ಎಂದು ಅಭಿಪ್ರಾಯಪಟ್ಟ ಅವರು, ಮೈಸೂರಿನಲ್ಲಿ ಪ್ರವಾಸೋದ್ಯಮವನ್ನೇ ಲಕ್ಷಾಂತರ ಕುಟುಂಬಗಳು ಅವಲಂಬಿಸಿವೆ. ಈ ಹಿನ್ನೆಲೆಯಲ್ಲಿ ಪ್ರವಾಸೋದ್ಯಮದ ಅಭಿವೃದ್ಧಿಗೆ ಅಗತ್ಯ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.

ಮನವಿ ಸ್ವೀಕರಿಸಿದ ಬಳಿಕ ಸಚಿವ ಸಾ.ರಾ.ಮಹೇಶ್ ಮಾತನಾಡಿ, ವಿಶ್ವ ಯೋಗ ದಿನದ ಕಾರ್ಯಕ್ರಮದ ಹಿನ್ನೆಲೆಯಲ್ಲಿ ವಿವಿಧ ಇಲಾಖೆಗಳ ಅಧಿಕಾರಿಗಳೊಂದಿಗೆ ಚರ್ಚಿಸುತ್ತೇನೆ. ಅಲ್ಲದೆ ಪ್ರವಾಸೋದ್ಯಮ ಅಭಿವೃದ್ಧಿಗೆ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದರು.ಮೈಸೂರಿನಲ್ಲಿ ಶಾಸಕ ಎಸ್.ಎ.ರಾಮದಾಸ್ ಅವರು ಬುಧವಾರ ಸಚಿವ ಸಾ.ರಾ.ಮಹೇಶ್ ಅವರನ್ನು ಆತ್ಮೀಯವಾಗಿ ಅಭಿನಂದಿಸಿದರು.