ಕೆ.ಆರ್.ಕ್ಷೇತ್ರದ ನಾಗರಿಕ ಸಮಸ್ಯೆಗಳ ನೀಲನಕ್ಷೆ ಸಿದ್ಧಪಡಿಸಿ

  • ವಿವಿಧ ಇಲಾಖೆ ಅಧಿಕಾರಿಗಳಿಗೆ ಶಾಸಕ ರಾಮದಾಸ್ ಸೂಚನೆ
  • ಜೂ.22ರಿಂದ ವಾರ್ಡ್‍ವಾರು ಪಾದಯಾತ್ರೆ ಮೂಲಕ ಸಮಸ್ಯೆಗೆ ಪರಿಹಾರ

ಮೈಸೂರು: ಮೈಸೂರಿನ ಕೃಷ್ಣರಾಜ ಕ್ಷೇತ್ರದ ನೀರು ಸರಬರಾಜು, ಒಳಚರಂಡಿ, ರಸ್ತೆ ಸೇರಿದಂತೆ ವಿವಿಧ ನಾಗರಿಕ ಮೂಲ ಸಮಸ್ಯೆ ಬಗ್ಗೆ ವಾರ್ಡ್‍ವಾರು ನೀಲನಕ್ಷೆ ತಯಾರಿಸುವಂತೆ ಶಾಸಕ ಎಸ್.ಎ.ರಾಮದಾಸ್, ವಿವಿಧ ಇಲಾಖೆ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.

ವಿದ್ಯಾರಣ್ಯಪುರಂನಲ್ಲಿರುವ ತಮ್ಮ ಕಚೇರಿಯಲ್ಲಿ ಕೆ.ಆರ್.ಕ್ಷೇತ್ರದಲ್ಲಿ ಮುಂದಿನ ಒಂದು ವರ್ಷದ ಅವಧಿಯಲ್ಲಿ ಕೈಗೊಳ್ಳಬೇಕಾದ ಕಾಮಗಾರಿಗಳ ಕುರಿತಂತೆ ನಗರ ಪಾಲಿಕೆ, ವಾಣಿವಿಲಾಸ ನೀರು ಸರಬರಾಜು, ಒಳಚರಂಡಿ, ಅರಣ್ಯ, ತೋಟಗಾರಿಕಾ, ಚೆಸ್ಕಾಂ, ಕಾರ್ಮಿಕ ಸೇರಿದಂತೆ 11 ಇಲಾಖೆಗಳ ಅಧಿಕಾರಿಗಳೊಂದಿಗೆ ಸಭೆ ನಡೆಸಿದರು. ಕ್ಷೇತ್ರದ ಎಲ್ಲಾ ವಾರ್ಡ್‍ಗಳ ಸಮಸ್ಯೆಯನ್ನು ಗುರುತಿಸಬೇಕು. ಆದ್ಯತಾನುಸಾರ ಇಂತಹ ಸಮಸ್ಯೆಗಳನ್ನು ತ್ವರಿತಗತಿಯಲ್ಲಿ ಬಗೆಹರಿಸುವ ಸಲುವಾಗಿ ಪಟ್ಟಿ ಮಾಡುವಂತೆ ತಾಕೀತು ಮಾಡಿದರು.

ಸಭೆಯಲ್ಲಿ ಮಾತನಾಡಿದ ಶಾಸಕ ಎಸ್.ಎ.ರಾಮದಾಸ್ ಅವರು, ಕೆ.ಆರ್.ಕ್ಷೇತ್ರದ ಸರ್ವತೋಮುಖ ಅಭಿವೃದ್ಧಿಗೆ ಅಧಿಕಾರಿಗಳು ಬದ್ಧರಾಗಿ ಕೆಲಸ ಮಾಡಬೇಕು. ಮುಂದಿನ ಒಂದು ವರ್ಷ ಕೈಗೊಳ್ಳಬೇಕಾದ ಯೋಜನೆಗಳ ಪಟ್ಟಿ ಮಾಡಬೇಕು. ಪಾಲಿಕೆ 1, 2, 3 ಹಾಗೂ 9ನೇ ವಲಯ ಕಚೇರಿ ವ್ಯಾಪ್ತಿಯಲ್ಲಿರುವ ಬರುವ ಎಲ್ಲಾ ವಾರ್ಡ್‍ಗಳಲ್ಲಿ ಕುಡಿಯುವ ನೀರು, ಒಳಚರಂಡಿ, ಮಳೆನೀರು ಚರಂಡಿ, ರಸ್ತೆಗಳು ಸೇರಿದಂತೆ ವಿವಿಧ ಸಮಸ್ಯೆಗಳ ನೀಲನಕ್ಷೆ ಸಿದ್ಧಪಡಿಸಬೇಕು. ಇದರಲ್ಲಿ ವಾರ್ಡುವಾರು ಎಷ್ಟು ಕಿ.ಮೀ ರಸ್ತೆಗಳಿವೆ. ಇವುಗಳಿಗೆ ಡಾಂಬರ್ ಹಾಕಿ ಎಷ್ಟು ವರ್ಷವಾಗಿದೆ. ಹದಗೆಟ್ಟಿರುವ ರಸ್ತೆಗಳು, ತುರ್ತಾಗಿ ಡಾಂಬರೀಕರಣ ಮಾಡಲೇಬೇಕಾದ ರಸ್ತೆಗಳು ಎಷ್ಟಿವೆ ? ಎಂಬ ಮಾಹಿತಿಯನ್ನು ಒಳಗೊಂಡಿರಬೇಕು. ಅಲ್ಲದೆ ಮುಂದಿನ 3 ತಿಂಗಳೊಳಗೆ ಯಾವ ರಸ್ತೆ ಅಭಿವೃದ್ಧಿ ಪಡಿಸಲೇಬೇಕು, ವರ್ಷದೊಳಗೆ ಎಷ್ಟು ರಸ್ತೆಯನ್ನು ಅಭಿವೃದ್ಧಿಪಡಿಸಬೇಕು ಎಂಬ ಮಾಹಿತಿಯನ್ನು ನಮೂದಿಸಬೇಕೆಂದು ತಿಳಿಸಿದರು.

ಮೈಸೂರು ನಗರಕ್ಕೆ ವಿವಿಧೆಡೆಯಿಂದ ಕಾವೇರಿ ಮತ್ತು ಕಪಿಲಾ ನದಿಯಿಂದ ಸರಬರಾಜಾಗುತ್ತಿರುವ ನೀರಿನ ಪ್ರಮಾಣ ಎಷ್ಟು ? ಸುಮಾರು 9 ಪಾಯಿಂಟ್‍ಗಳಿಂದ ನದಿಯಿಂದ ನೀರನ್ನು ಮೇಲೆತ್ತಲಾಗುತ್ತಿದೆ. ಆ ನೀರನ್ನು ಅಕ್ರಮವಾಗಿ ಮಾರಾಟ ಮಾಡಲಾಗುತ್ತಿದೆ ಎಂಬ ಆರೋಪಗಳು ವ್ಯಾಪಕವಾಗಿ ಕೇಳಿಬರುತ್ತಿವೆ. ಅಲ್ಲದೆ ನಿರ್ವಹಣೆಯ ಕೊರತೆಯಿಂದ ಸಾಕಷ್ಟು ನೀರು ಪೋಲಾಗುತ್ತಿದೆ. ಕೆ.ಆರ್.ಕ್ಷೇತ್ರದಲ್ಲಿ ಎಷ್ಟು ಮಂದಿ ಅಧಿಕೃತವಾಗಿ ನೀರಿನ ಸಂಪರ್ಕ ಪಡೆದುಕೊಂಡಿದ್ದಾರೆ. ಅಕ್ರಮ ಸಂಪರ್ಕಗಳೆಷ್ಟು ಎನ್ನುವ ಮಾಹಿತಿ ಕಲೆ ಹಾಕಬೇಕು. ಕಳೆದ ಐದು ವರ್ಷದ ಹಿಂದೆ ಬೋರ್‍ವೆಲ್ ಮುಕ್ತ ಕ್ಷೇತ್ರವಾಗಿ ಮಾರ್ಪಡಿಸಲಾಗಿತ್ತು. ಆದರೆ ಈಗ ಕ್ಷೇತ್ರದಲ್ಲಿ 162 ಬೋರ್‍ವೆಲ್‍ಗಳಿದ್ದು, ಅವುಗಳಿಗೆ ಮೋಟಾರ್ ಅಳವಡಿಸಿ ನೀರೆತ್ತುವ ಮೂಲಕ ಕ್ಷೇತ್ರದ ಜನರಿಗೆ ಸಮರ್ಪಕ ಸರಬರಾಜು ಮಾಡಲಾಗುತ್ತಿದೆ. ಈ ಹಿನ್ನೆಲೆಯಲ್ಲಿ ನದಿ ನೀರಿನ ಸಂಪರ್ಕ ಹಾಗೂ ಅಗತ್ಯವಾದ ನೀರಿನ ಪ್ರಮಾಣದ ಬಗ್ಗೆ ಮಾಹಿತಿ ನೀಡಿದರೆ, ಚಾಲನೆಯಲ್ಲಿರುವ ಬೋರ್‍ವೆಲ್‍ಗಳನ್ನು ಸ್ಥಗಿತಗೊಳಿಸಲು ಕ್ರಮ ಕೈಗೊಳ್ಳುವುದಾಗಿ ಹೇಳಿದರು.

ಕ್ಷೇತ್ರದ ಹಲವು ಬಡಾವಣೆಗಳಲ್ಲಿ ಒಳಚರಂಡಿ ಸಮಸ್ಯೆಯಿದೆ. ಇವುಗಳ ಮಾರ್ಗ ಎಲ್ಲಿದೆ ಎನ್ನುವುದೇ ತಿಳಿಯದಂತಿದೆ. ಮಳೆ ಬಂದಾಗ ಅನೇಕ ಸ್ಥಳಗಳಲ್ಲಿ ಒಳಚರಂಡಿಯ ಮೂಲಕ ನೀರು ಮನೆಗಳಿಗೆ ನುಗ್ಗುತ್ತಿದೆ. ಇದನ್ನು ಮನಗಂಡು ಜೂ.21ರೊಳಗೆ ಕ್ಷೇತ್ರದಲ್ಲಿ ಕುಡಿಯುವ ನೀರು, ಚರಂಡಿ, ಒಳಚರಂಡಿ, ರಸ್ತೆ, ಬೀದಿದೀಪ ಸೇರಿದಂತೆ ಸಂಪೂರ್ಣ ಮಾಹಿತಿ ಒಳಗೊಂಡ ನೀಲನಕ್ಷೆ ಸಿದ್ಧಪಡಿಸಿ. ಜೂ.22ರಿಂದ ಪಾಲಿಕೆಯ 13ನೇ ವಾರ್ಡ್‍ನಿಂದ ಪಾದಯಾತ್ರೆ ಆರಂಭಿಸುತ್ತೇನೆ. ನಂತರ ಎಲ್ಲಾ ವಾರ್ಡ್‍ಗಳಲ್ಲಿಯೂ ಪಾದಯಾತ್ರೆ ನಡೆಸುತ್ತೇನೆ.

ಸಭೆಯಲ್ಲಿ ವಲಯ ಕಚೇರಿ 1ರ ಎಸಿ ಸುನೀಲ್‍ಬಾಬು, ಅಭಿವೃದ್ಧಿ ಅಧಿಕಾರಿ ರುದ್ರೇಶ್, ವಲಯ ಕಚೇರಿ 2ರ ಎಸಿ ಜವರೇಗೌಡ, ಅಭಿವೃದ್ಧಿ ಅಧಿಕಾರಿ ರಘುಪತಿ, ವಲಯ ಕಚೇರಿ 3ರ ಅಭಿವೃದ್ಧಿ ಅಧಿಕಾರಿ ಮುರುಳಿಧರ್, ವಲಯ ಕಚೇರಿ 9ರ ಅಭಿವೃದ್ಧಿ ಅಧಿಕಾರಿ ನಿಂಗರಾಜು, ಎಇಇ, ಜೆಇಗಳು, ವಾಣಿವಿಲಾಸ ನೀರು ಸರಬರಾಜು ಮಂಡಳಿಯ ಎಕ್ಸಿಕ್ಯೂಟಿವ್ ಎಂಜಿನಿಯರ್ ಆನಂದ್, ಒಳಚರಂಡಿ ವಿಭಾಗದ ಎಕ್ಸಿಕ್ಯೂಟಿವ್ ಇಂಜಿನಿಯರ್ ಯಾದವ್, ಎಇಇ ವಿನಯ್‍ಕುಮಾರ್, ಹರ್ಷ ಸೇರಿದಂತೆ ವಿವಿಧ ಇಲಾಖೆಗಳು ಅಧಿಕಾರಿಗಳು ಪಾಲ್ಗೊಂಡಿದ್ದರು.